24/7 ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಯಲ್ಲಿ ಅವ್ಯವಹಾರ

7 ವರ್ಷ ಹಿಂದಿನ ಬಿಜೆಪಿ ಆಡಳಿತದಲ್ಲಿ 50 ಲಕ್ಷ ರೂ. ಹೆಚ್ಚು ಅಕ್ರಮ

ಕಡತ ಪರಿಶೀಲಿಸಿ ತನಿಖೆಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ನಿರ್ಧಾರ 

ತೀರ್ಥಹಳ್ಳಿ ಪತ್ರಿಕಾಭವನ ಚರ್ಚೆಗೆ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ

ಬಿಜೆಪಿ ಆಡಳಿತದಲ್ಲಿ 24/7 ಶುದ್ಧ ಕುಡಿಯುವ ನೀರು ಕಾಮಗಾರಿ ಪೂರೈಕೆಯ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್‌ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಕಳಪೆ ಸಾಮಾಗ್ರಿ ಬಳಕೆ ಮಾಡಿರುವ ಶಂಕೆ ಇದ್ದು ಕಡತ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ನಿರ್ಣಯಿಸಿತು.

9 ತಿಂಗಳು ಕಳೆದಿದ್ದರು ಹೊಸ ಕಾಮಗಾರಿ ಮಾಡಿಲ್ಲ. ವಿಳಂಬದ ಕುರಿತು ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಸದಸ್ಯ ಸಂದೇಶ ಜವಳಿ ವಿಷಯ ಪ್ರಸ್ತಾಪಿಸಿದರು. 7 ವರ್ಷದ ಹಿಂದೆ ಬಿಜೆಪಿ ಆಡಳಿತದಲ್ಲಿ 50 ಲಕ್ಷ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್‌ ಕಾಮಗಾರಿ ನಡೆದಿದೆ. ವಾರಂಟಿ ಅವಧಿ ಮುನ್ನ ಕಾಮಗಾರಿ ಗುಣಮಟ್ಟ ಕಳೆದುಕೊಂಡಿದೆ ಎಂದು ಕಾಂಗ್ರೆಸ್‌ ಸದಸ್ಯ ರತ್ನಾಕರ ಶೆಟ್ಟಿ ಆರೋಪಿಸುತ್ತಿದ್ದಂತೆ ಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.

ಬಿಜೆಪಿ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಆಗಿರುವ ಕಾಮಗಾರಿ ದೋಷದ ಕುರಿತು ತನಿಖೆಗೆ ಕ್ರಮ ವಹಿಸಬೇಕು ಎಂದು ಉಪಾಧ್ಯಕ್ಷ ರೆಹಮತ್‌ ಉಲ್ಲಾ ಅಸಾದಿ, ಸದಸ್ಯರಾದ ಜಯಪ್ರಕಾಶ ಶೆಟ್ಟಿ, ಬಿ. ಗಣಪತಿ ಆಗ್ರಹಿಸಿದರು.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಪತ್ರಿಕಾಭವನ ಇಲ್ಲವಾಗಿದೆ. ಪತ್ರಿಕಾಭವನ ನಿರ್ಮಿಸಲು ಆಡಳಿತ ಒಪ್ಪಿಗೆ ನೀಡಬೇಕು. ಸದಸ್ಯರು ಸಮ್ಮತಿಸಿದರೆ ಸಭಾ ಅಜೆಂಡಾದಲ್ಲಿ ವಿಷಯ ಸೇರಿಸೋಣ ಎಂದು ಅಧ್ಯಕ್ಷೆ ಗೀತಾ ರಮೇಶ್ ಗುರುವಾರ ನಡೆದ ಸಾಮಾನ್ಯ ಸಭೆಯ ಅನುಮತಿ ಕೇಳಿದರು. ಪತ್ರಿಕಾಭವನ ಕುರಿತಂತೆ ಈ ಅಜೆಂಡಾದಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಅಧ್ಯಕ್ಷರ ವಾರ್ಡ್‌ ವ್ಯಾಪ್ತಿಯಲ್ಲಿ ನಿವೇಶನ ದಾಖಲೆ ತಿದ್ದುಪಡಿ ಕುರಿತಂತೆ ಕಾಂಗ್ರೆಸ್‌ ಮುಖಂಡರು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು ಎಂದು ಬಿಜೆಪಿ ಸದಸ್ಯ ರವೀಶ್‌ ಭಟ್‌ ಒತ್ತಾಯಿಸಿದರು. ಪೂರ್ಣ ಮಾಹಿತಿ ಇದ್ದರೆ ಸಭೆಯ ಮುಂದಿಡಬೇಕು. ಹೇಳಿಕೆ ವಿಷಯ ಸಭೆಯಲ್ಲಿ ಚರ್ಚಿಸಲಾಗದು ಎಂದು ಅಧ್ಯಕ್ಷೆ ಗೀತಾ ರಮೇಶ್‌ ಸ್ಪಷ್ಟನೆ ನೀಡಿದರು.

ಆರಗ ಜ್ಞಾನೇಂದ್ರ ಶಾಸಕ, ಗೃಹಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಶಾಲು ಹೊದಿಸಿ ಗೌರವಿಸಲಾಗಿದೆ. ಹೇಗೆಯೇ ಕಾಂಗ್ರೆಸ್‌ ಸರ್ಕಾರದ ಸಚಿವರನ್ನು ಸನ್ಮಾನಿಸಿದ್ದೇವೆ. ಸ್ಥಾನಕ್ಕೆ ಗೌರವ ಕೊಟ್ಟಿರುವುದನ್ನು ಪ್ರಶ್ನಿಸುವ ಸಂದೇಶ ಜವಳಿ ಅಜ್ಞಾನಕ್ಕೆ ಏನು ಹೇಳಬೇಕು. ಪಟ್ಟಣ ಪಂಚಾಯಿತಿ ಅಭಿವೃದ್ಧಿ ಶಾಸಕ ಆರಗ ಜ್ಞಾನೇಂದ್ರ ಕೊಡುಗೆ ಏನು ಎಂದು ಕಾಂಗ್ರೆಸ್‌ ಸದಸ್ಯರು ಪ್ರಶ್ನಿಸಿದರು.

ಮುಖ್ಯಾಧಿಕಾರಿ ಬಸವರಾಜ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post