ವೇತನ ನೀಡಿದೆ ಕಾರ್ಮಿಕರಿಗೆ ವಂಚನೆ

19 ಕೃಷಿ ಕಾರ್ಮಿಕರು ಬಂಧನ ಮುಕ್ತ
ಮೇಸ್ತ್ರಿ ಕರಿಯಪ್ಪ ವಿಚಾರಣೆ - 
ಉಪ ವಿಭಾಗಾಧಿಕಾರಿ ಸತ್ಯನಾರಾಯಣ್‌ ಸ್ಥಳಕ್ಕೆ ಭೇಟಿ

19 ಕೃಷಿ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸದೆ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಪ್ರಕರಣವೊಂದು ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಠಾಣೆ ವ್ಯಾಪ್ತಿಯ ಗುತ್ತಿಯಡೇಹಳ್ಳಿ ಗ್ರಾಮದಲ್ಲಿ ಮಂಗಳವಾರ ಬಯಲಾಗಿದೆ. ರಾಜ್ಯದ ವಿವಿಧ ಜಿಲ್ಲೆ, ಹೊರರಾಜ್ಯದ ಕಾರ್ಮಿಕರನ್ನು ಬಳಸಿಕೊಂಡು ತೋಟ, ಗದ್ದೆ, ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿರಲಿಲ್ಲ. ಉಪಹಾರ, ಊಟ, ಹೆಚ್ಚಿನ ಮದ್ಯವನ್ನು ನೀಡಿ ಕಾರ್ಮಿಕರನ್ನು ಅಮಲಿನಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸೋಮವಾರ ಸ್ಥಳೀಯರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ರಹಸ್ಯ ಬಹಿರಂಗಗೊಂಡಿದೆ.

ಕಾರ್ಮಿಕರ ವಾಸ್ತವ್ಯಕ್ಕೆ ಯಾವುದೇ ರೀತಿ ಮೂಲ ಸೌಕರ್ಯ ಕಲ್ಪಿಸಿರಲಿಲ್ಲ. ಕಾರ್ಮಿಕರಿಗೆ ಶೋಷಣೆ ಮಾಡುತ್ತಿರುವ ಸುಳಿವು ಪಡೆದ ಪೊಲೀಸರು ಮೇಸ್ತ್ರಿ ಕರಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಉಪವಿಭಾಗಾಧಿಕಾರಿ, ತಹಶೀಲ್ದಾರ್, ಉಪತಹಶೀಲ್ದಾರ್, ಕಾರ್ಮಿಕ ಇಲಾಖೆ ನಿರೀಕ್ಷಕರಿಗೆ ಮಾಹಿತಿ ತಲುಪಿಸಿ ತನಿಖೆ ತೀವ್ರಗೊಳಿಸಿದರು. ಕೃಷಿ ಕಾರ್ಮಿಕರು ಜೀತದಾಳುಗಳಂತೆ ದುಡಿಯುವ ಅನಿವಾರ್ಯತೆ ಸೃಷ್ಟಿಸಲಾಗಿದೆ. ಅನೇಕ ಕಾರ್ಮಿಕರಿಗೆ ಮೂರ್ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ. ಸೂಕ್ತ ಕಾನೂನು ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು ಉಪವಿಭಾಗಾಧಿಕಾರಿಗೆ ಪೊಲೀಸರು ಕೋರಿದರು.

ಮಂಗಳವಾರ ಬೆಳಿಗ್ಗೆ ಗುತ್ತಿಯಡೇಹಳ್ಳಿ ಗ್ರಾಮ, ಮಾಳೂರು ಠಾಣೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಸತ್ಯನಾರಾಯಣ್‌ ಕಾರ್ಮಿಕರು, ಮೇಸ್ತ್ರಿ, ಸಾರ್ವಜನಿಕರು, ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರು ಅಧಿಕೃತವಾಗಿ ಲಿಖಿತ ದೂರು ದಾಖಲಿಸಲು ನಿರಾಕರಿಸಿದರು. ಕೊನೆಯಲ್ಲಿ 19 ಕಾರ್ಮಿಕರಿಗೆ ಸಿಗಬೇಕಾದ ಸುಮಾರು 3 ಲಕ್ಷ ವೇತನ ನೀಡಿ ಸ್ವಂತ ಊರಿಗೆ ತೆರಳಲು ಸೂಕ್ತ ವ್ಯವಸ್ಥೆ ಮಾಡುವಂತೆ ಮೇಸ್ತ್ರಿಗೆ ಸೂಚನೆ ನೀಡಲಾಯಿತು.

ಈ ಸಂದರ್ಭ ತಹಶೀಲ್ದಾರ್‌ ಚಕ್ಕನ ಗೌಡರ್‌, ಡಿವೈಎಸ್ಪಿ ಗಜಾನನ ವಾಮನ ಸುತಾರ, ತೀರ್ಥಹಳ್ಳಿ ಗ್ರಾಮಾಂತರ ಸಿಪಿಐ ಶ್ರೀಧರ್‌, ಮಾಳೂರು ಠಾಣೆ ಪಿಎಸ್‌ಐ ಸಿದ್ದಪ್ಪ, ಕ್ರೈಂ ಪಿಎಸ್‌ಐ ಶಿವಾನಂದ, ಕಾರ್ಮಿಕ ಇಲಾಖೆ ನಿರೀಕ್ಷಕಿ ಸುಖಿತ ಇದ್ದರು.











ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post