₹18 ಲಕ್ಷ ವೆಚ್ಚದಲ್ಲಿ ಅದ್ದೂರಿ ಎಳ್ಳಮಾವಾಸ್ಯೆ

ಗ್ರಾಮೀಣ ಜನರಿಗೆ ದುಬಾರಿ ಜಾತ್ರೆ
"ವ್ಯಾಪಾರಿಗಳಿಂದ ಬಾರಿ ಹಣ ವಸೂಲಿ ಆರೋಪ"
"ಜಾತ್ರಾ ಮೈದಾನ, ರಸ್ತೆ ಇಕ್ಕೆಲ ಹರಾಜಿಗೆ ಚಿಂತನೆ"

ವ್ಯಾಪಾರಿಗಳ ರಕ್ಷಣೆಗೆ ಸಿದ್ಧ :- ಎಳ್ಳಮಾವಾಸ್ಯೆ ಜಾತ್ರೆಗೆ ಆಗಮಿಸುವ ವ್ಯಾಪಾರಿಗಳ ಹಿತ ಕಾಯಲು ಸಮಿತಿ ಸಿದ್ದವಿದೆ. ಜಾತ್ರೆಯ ಸಂದರ್ಭ ಅಂಗಡಿಗಳನ್ನು ಹಾಕುವವರಿಗೆ ಪಟ್ಟಣ ಪಂಚಾಯಿತಿಯಿಂದ 250 ದರ ನಿಗಧಿಪಡಿಸಲಾಗಿದೆ. ರಸ್ತೆ, ಚರಂಡಿಗಳ ಮೇಲೆ ಅಂಗಡಿ ಹಾಕುವವರಿಗೆ ಜಾಗ ಒದಗಿಸಲು ಖಾಸಗಿ ವ್ಯಕ್ತಿಗಳು 10 ಸಾವಿರದಿಂದ 5 ಲಕ್ಷ ದರ ನಿಗಧಿಪಡಿಸುವ ದೂರುಗಳು ಗಮನದಲ್ಲಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯರು, ಮನೆಯವರು ಸಹಕಾರ ನೀಡಿದರೆ ವ್ಯಾಪಾರಿಗಳ ಹಿತಾಸಕ್ತಿ ಕಾಯಬಹುದು. ಸಾರ್ವಜನಿಕರು ಸಹಕಾರ ನೀಡಿದರೆ ಮುಂದಿನ ವರ್ಷದಿಂದ ರಸ್ತೆಯ ಇಕ್ಕೆಲಗಳಲ್ಲಿ ಹರಾಜು ಪ್ರಕ್ರಿಯೆ ಜಾರಿ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಜಾತ್ರಾ ಸಮಿತಿ ಸದಸ್ಯರು ಹೀಗೆ ಉತ್ತರಿಸಿದರು.

ಜಾತ್ರಾ ಸಂದರ್ಭದಲ್ಲಿ ಮಕ್ಕಳು, ಅಂಗವಿಕಲರು ಮುಂದಿಟ್ಟು ಬಿಕ್ಷೆ ಬೇಡುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲು ಡಿವೈಎಸ್‌ಪಿಗೆ ಮನವಿ ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಇಂತಹ ಸನ್ನಿವೇಶದಲ್ಲಿ ಸಹಕರಿಸಬೇಕು ಎಂದು ಕೋರಿದರು.

ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಜನವರಿ 9 ರಿಂದ 16ರ ವರೆಗೆ ಎಂಟು ದಿನಗಳ ಪರ್ಯಂತ ಅಂದಾಜು ₹18 ಲಕ್ಷ ವೆಚ್ಚದಲ್ಲಿ ವಿಜೃಂಬಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಎಳ್ಳಮಾವಾಸ್ಯೆ ಜಾತ್ರೆ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.

ಜನವರಿ 9 ರ ಮಂಗಳವಾರ ಧ್ವಜಾರೋಹಣ, 10ರ ಬುಧವಾರ ಪುರೋತ್ಸವ ನಡೆಯಲಿದೆ. 11 ರ ಮುಂಜಾನೆ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ನಡೆಯಲಿದೆ. 12ರ ಶುಕ್ರವಾರ ಮನ್ಮಹಾರಥಾರೋಹಣ, 13ರ ಶನಿವಾರ ಶಿವಕಾಶಿಯ ಪ್ರಸಿದ್ಧ ಪಟಾಕಿ ತಯಾರಿಸುವ ನುರಿತ ತಜ್ಞರಿಂದ ವೈವಿದ್ಯಮಯ ಪಟಾಕಿ ಪ್ರದರ್ಶನದ ಜೊತೆಗೆ ತೆಪ್ಪೋತ್ಸವ ಜರುಗಲಿದೆ. 15 ರಂದು ಮಕರ ಸಂಕ್ರಾಂತಿ ರಥೋತ್ಸವ, 16 ರಂದು ರಂಗಪೂಜೆಯೊಂದಿಗೆ ಜಾತ್ರೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ರಾಮೇಶ್ವರ ದೇವಸ್ಥಾನದ ಮುಂಭಾಗದ ಮೆಟ್ಟಿಲು ವಾಸ್ತು ಪ್ರಕಾರ ಇಲ್ಲದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ₹2 ಲಕ್ಷ ವೆಚ್ಚದಲ್ಲಿ ನೂತನವಾಗಿ ಮೆಟ್ಟಿಲು ನಿರ್ಮಾಣ ಮಾಡಲಾಗಿದೆ. ಜಾತ್ರೆಯ ತೀರ್ಥಸ್ನಾನದ ಸಂದರ್ಭದ ಸಮಸ್ಯೆಗಳನ್ನು ಗಮನಿಸಿ ಸುಮಾರು ₹6 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಜೋಡಣೆಗಾಗಿ ಕಬ್ಬಿಣದ ಸೇತುವೆ ನಿರ್ಮಿಸಲಾಗುತ್ತಿದೆ. ಇದು ಜಾತ್ರೆಯ ಹಲವು ಖರ್ಚುಗಳನ್ನು ನಿಭಾಯಿಸಲು ಸಹಕಾರವಾಗಿದೆ. ಜಾತ್ರೆಯ ಒಳಗಾಗಿ ಮೆಟ್ಟಿಲು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್‌ ಶೆಟ್ಟಿ, ರತ್ನಾಕರ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಕುಕ್ಕೆ ಪ್ರಶಾಂತ್, ಪ್ರಮುಖರಾದ ಪಾಂಡುರಂಗಪ್ಪ, ಕಿಶೋರ್‌, ನವೀನ್‌ ಬೆಟ್ಟಮಕ್ಕಿ, ಅಶೋಕ್‌ ಶೆಟ್ಟಿ, ಶರತ್‌, ಚೇತನ್‌, ಪದ್ಮನಾಭ್‌, ಶಶಿಧರ್, ನಯನ ಶೆಟ್ಟಿ, ವಾಣಿ ಗಣೇಶ್, ವಿಜಯ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post