ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ 10ಕ್ಕೆ

ಶಿವಮೊಗ್ಗ ಜಿಲ್ಲೆಯಲ್ಲಿ 400 ಬಸ್‌ ವ್ಯವಸ್ಥೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಜಾಗೃತಿ ಸಮಾವೇಶ – ರೇಣುಕಾನಂದ ಸ್ವಾಮೀಜಿ

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 26 ಪಂಗಡಗಳ ಬೃಹತ್‌ ಜಾಗೃತಿ ಸಮಾವೇಶವು ಡಿಸೆಂಬರ್‌ 10ರ ಭಾನುವಾರ ಬೆಳಿಗ್ಗೆ 11ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಹಲವಾರು ಬೇಡಿಕೆಗಳನ್ನು ಸರ್ಕಾರ ಮುಂದಿಡಲಾಗುತ್ತದೆ ಎಂದು ನಿಟ್ಟೂರು ಶ್ರೀ ನಾರಾಯಣಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಶುಕ್ರವಾರ ತೀರ್ಥಹಳ್ಳಿಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ನಮ್ಮ ಕುಲಕಸುಬನ್ನು ಕಿತ್ತುಕೊಂಡಿರುವ ಸರ್ಕಾರವು ಅದಕ್ಕೆ ಪರ್ಯಾಯ ಪರಿಹಾರವನ್ನು ನೀಡಿಲ್ಲ. ನಿಗಮವನ್ನೂ ರಿಜಿಸ್ಟರ್‌ ಮಾಡಿಲ್ಲ. ನಮ್ಮ ಸಮಾಜದ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ₹500 ಕೋಟಿ ಅನುದಾನವನ್ನು ನಿಗಮಕ್ಕೆ ಒದಗಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಕಟ್ಟಡಗಳಾಗಬೇಕು. ಅದಕ್ಕೆ ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯಿಂದ ಅಂದಾಜು 400 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕು ಒಂದರಿಂದಲೇ 25 ಬಸ್‌ಗಳಿಂದ ಸಮುದಾಯದ ಬಂಧುಗಳು ಆಗಮಿಸಲಿದ್ದಾರೆ. ಅಂದಾಜು 2 ಲಕ್ಷ ಜನರು ಅರಮನೆ ಮೈದಾನದಲ್ಲಿ ಜಮಾವಣೆಗೊಂಡಿದ್ದು ಆಗಮಿಸುವ ಎಲ್ಲರಿಗೂ ಬೆಳಗ್ಗಿನ ಊಟೋಪಚಾರಕ್ಕೆ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಾದ್ಯಂತ ಸುಮಾರು 40 ಲಕ್ಷ ಸಮುದಾಯ ಬಂಧುಗಳಿದ್ದಾರೆ. ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಕಡ್ಡಾಯ ಪುನರ್ವಸತಿ, ಶ್ರೀ ಸಿಂಗದೂರು ದೇವಾಲಯದಲ್ಲಿ ಸರ್ಕಾರದ ಅನಾವಶ್ಯಕವಾಗಿ ಮಾಡುತ್ತಿರುವ ಹಸ್ತಕ್ಷೇಪ ತಡೆಗೆ ಬೇಡಿಕೆ ಸೇರಿದಂತೆ ಕಾಂತರಾಜು ವರದಿ ಜಾರಿಗಾಗಿ ಬೇಡಿಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಆರ್ಯ ಈಡಿಗರ ಸಂಘವನ್ನು ಕೆ.ಎನ್‌. ಗುರುಸ್ವಾಮಿ, ಕೆ. ವೆಂಕಟಸ್ವಾಮಿ ಅವರು ಸ್ಥಾಪನೆ ಮಾಡಿ 78 ವರ್ಷಗಳಾಗಿವೆ. 75ನೇ ವರ್ಷಕ್ಕೆ ಅಮೃತ ಮಹೋತ್ಸವ ಮಾಡಬೇಕಿತ್ತು. ಆಗ ಕೋವಿಡ್‌ ಇದ್ದಿದ್ದರಿಂದ ಅಮೃತ ಮಹೋತ್ಸವ ಆಚರಿಸಲಾಗಿಲ್ಲ. ಕಳೆದ ವರ್ಷ ಸಂಘದ ಚುನಾವಣೆಯ ಕಾರಣಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಲಿಲ್ಲ. ಈಡಿಗ, ಬಿಲ್ಲವ, ಪೂಜಾರಿ, ದೀವರು, ಭಂಡಾರಿ, ಬೆಲ್ಚಡ, ಹಾಲ ಕ್ಷತ್ರೀಯ, ದೇಶ ಭಂಡಾರಿ, ದೇವರ, ದೇವರ ಮಕ್ಕಳು, ದೀವರ ಮಕ್ಕಳು, ಎಳಿಗ, ಎಳವ, ಗಾಮಲ್ಲ, ಗೌಂಡ್ಲ, ಹಳೇಪೈಕರು, ಹಳೇಪೈಕ್‌, ಇಲ್ಲಾವನ್‌, ಕಲಾಲ್‌, ಮಲೆಯಾಳಿ ಬಿಲ್ಲವ, ನಾಡಾರ್‌, ನಾಮಧಾರಿ, ತಿಯಾನ್ ತಿಯ್ಯ, ಈಳಿಗ, ಗೊಂಡ್ಲತಿಯನ್‌ ಹೀಗೆ 26 ಪಂಗಡಗಳಿವೆ. ಈ ಸಮುದಾಯಗಳಲ್ಲಿ ಜಾಗೃತಿಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾವೇಶದಲ್ಲಿ  ಸೋಲೂರು ಈಡಿಗ ಮಹಾಸಂಸ್ಥಾನದ ವಿಖ್ಯಾತಾ ನಂದ ಸ್ವಾಮೀಜಿ, ಧರ್ಮಸ್ಥಳ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಾರ್ತೀಕೇಯ ಪೀಠದ ಯೋಗೇಂದ್ರ ಅವಧೂತ, ನಿಪ್ಪಾಣಿ ಅರುಣಾನಂದ ಸ್ವಾಮೀಜಿ, ಶಿವಗಿರಿ ಸತ್ಯಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಸಮುದಾಯ ಪ್ರತಿನಿಧಿಸುವ ಎಲ್ಲ ಸಚಿವರು, ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಆರ್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ ಮಾತನಾಡಿ, ಸಮಯದ ಕೊರತೆಯಿದ್ದರು ಸಂಘಟನೆಯನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಹಳ್ಳಿಹಳ್ಳಿಗಳನ್ನು ತಲುಪಿ ಸಮುದಾಯ ಬಂಧುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ. ಸಂಘಟನೆಯ ದೃಷ್ಟಿಯಿಂದ ಅತೀ ಹೆಚ್ಚು ಜನರು ಅರಮನೆ ಮೈದಾನಕ್ಕೆ ಆಗಮಿಸಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಎಸ್‌ಎನ್‌ಜಿವಿ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಜಿಲ್ಲಾ ಸಹಕಾರ್ಯದರ್ಶಿ ಹೊದಲ ಶಿವು, ಜಿಲ್ಲಾ ಉಪಾಧ್ಯಕ್ಷ ಲೋಕೇಶ್‌ ಟೆಂಕಬೈಲು, ತಾಲ್ಲೂಕು ಅಧ್ಯಕ್ಷ ವಿಶಾಲ್‌ ಕುಮಾರ್‌, ಪ್ರಮುಖರಾದ ಇರೇಗೋಡು ಶ್ರೀಧರ್‌ಮೂರ್ತಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post