ನೀರಸವಾಗಿ ನಡೆದ ಡಿಬಿಸಿ ನುಡಿನಮನ

ಜನರ ಜೊತೆ ಫಲಾನುಭವಿಗಳೂ ಮರೆತ ಡಿಬಿಸಿ

ಮುತ್ಸದಿ ರಾಜಕಾರಣಿಗೆ ದೊರಕದ ಗೌರವ

ನಾಡಿನ ಹಿರಿಯ ರಾಜಕಾರಣಿ ಮುತ್ಸದಿ, ಕಾನೂನು ಪಂಡಿತ, ವಾಗ್ಮಿ, ಮಾಜಿ ವಿಧಾನಸಭಾಧ್ಯಕ್ಷ, ಸಚಿವ, ಸಂಸದ, ರಾಜ್ಯಸಭಾ ಸದಸ್ಯ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವನ್ನು 1983 ರಿಂದ 1985 ಮತ್ತು 1989ರಿಂದ 1994 ಪ್ರತಿನಿಧಿಸಿದ್ದ ಜನ ಮಾನಸದಲ್ಲಿ ಡಿಬಿಸಿ ಎಂದೇ ಚಿರಪರಿಚಿತರಾಗಿದ್ದ ಡಿಬಿ ಚಂದ್ರೇಗೌಡ ನಿಧನರಾಗಿದ್ದಾರೆ. 87 ವರ್ಷಗಳ ತಮ್ಮ ತುಂಬು ಜೀವನದಲ್ಲಿ ಸಾಕಷ್ಟು ಅಧಿಕಾರವನ್ನು ಅನುಭವಿಸಿದ್ದ ಮತ್ತು ಮೂಲ ಕಾಂಗ್ರೆಸ್ಸಿಗನಾಗಿ 1977ರ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗಾಗಿ ತಮ್ಮ ಸ್ಥಾನವನ್ನು ರಾಜೀನಾಮೆ ನೀಡಿ ತ್ಯಾಗ ಮಾಡುವ ಮೂಲಕ ಒಮ್ಮೆಲೆ ರಾಷ್ಟ್ರದಾದ್ಯಂತ ಹೆಸರು ಮಾಡಿದ್ದ ಡಿಬಿಸಿ ಕಾಲ ಸರಿದಂತೆ ಜನತಾಪಕ್ಷ, ಜನತಾರಂಗ ಕಡೆಗಾಲದಲ್ಲಿ ಬಿಜೆಪಿಗೂ ಕೂಡ ಹೋಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 2009ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಇಂದಿರಾಗಾಂಧಿ ಜೊತೆ ಯುವಕ ಡಿ.ಬಿ. ಚಂದ್ರೇಗೌಡ

ಠಾಕು ಟೀಕಾದ ವಸ್ತ್ರಪ್ರಜ್ಞೆ, ಅತ್ಯುತ್ತಮ ಭಾಷಾ ಹಾಗೂ ಸಂವಹನ ಕೌಶಲದಿಂದ ಜನರನ್ನು ಆಕರ್ಷಿಸುವ ಶಕ್ತಿ ಹೊಂದಿದ್ದ ಡಿ.ಬಿ.ಸಿ. ದೂರದ ಚಿಕ್ಕಮಗಳೂರಿನಿಂದ ತೀರ್ಥಹಳ್ಳಿಗೆ ಬಂದು 1983ರಲ್ಲಿ ಮತ್ತು ತದನಂತರ 1989ರಲ್ಲಿ ಗೆದ್ದಿದ್ದು ಅವರ ವರ್ಚಸ್ಸು ಮತ್ತು ಸಂಘಟನಾ ಕೌಶಲ್ಯಕ್ಕೆ ಸಾಕ್ಷಿಯಾಗಿ ಉಳಿದಿದೆ.

ಆದರೆ ಮೂಲತಃ ಹೆಚ್ಚೇನು ಶ್ರಮವಹಿಸದ ಹಾಗೂ ಪ್ರವಾಸಿ ಮಂದಿರ ರಾಜಕಾರಣಿ ಎಂದೇ ಅಪಖ್ಯಾತಿ ಪಡೆದ ಅವರು 1994ರ ನಂತರ ತೀರ್ಥಹಳ್ಳಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಯುಗ ಆರಂಭಗೊಂಡ ನಂತರ ಎಲ್ಲಿಯೂ ಸಲ್ಲದಂತಾದರು. ಮುಂದೆ 2004ರಲ್ಲಿ ಜನತಾದಳದಿಂದ ಕಾಂಗ್ರೆಸ್‌ಗೆ ವಲಸೆ ಬಂದ ಕಿಮ್ಮನೆ ರತ್ನಾಕರ್‌ ಕಿಮ್ಮನೆ ರತ್ನಾಕರ್‌ ಟಿಕೆಟ್‌ ಪಡೆದು 2008 ಮತ್ತು 2012ರಲ್ಲಿ ನಿರಂತರವಾಗಿ ಎರಡು ಬಾರಿ ಗೆದ್ದ ಬಳಿಕ ಹೊಸ ಯುವ ತಲೆಮಾರಿಗೆ ಡಿಬಿಸಿ ಸಂಪೂರ್ಣ ಅಪರಿಚಿತರಾಗಿ ಉಳಿದರು.

ಎರಡು ಬಾರಿ ತೀರ್ಥಹಳ್ಳಿಯನ್ನು ಶಾಸಕರಾಗಿ ಇಲ್ಲಿನ ಕ್ಷೇತ್ರದ ಅಭಿವೃದ್ಧಿಗಾಗಿ ಗಣನೀಯ ಕೊಡುಗೆಯನ್ನೇ ನೀಡಿದ್ದ ಡಿಬಿಸಿ ಅವರ ನುಡಿನಮನ ಕಾರ್ಯ ಮಾತ್ರ ಅತ್ಯಂತ ನೀರಸವಾಗಿ ಕೇವಲ ಬೆರಳೆಣಿಕೆಯ ಪ್ರೇಕ್ಷಕರೆದುರು, ಅದರಲ್ಲೂ ಮಾಜಿ ಗೃಹಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರರೇ ಭಾಗವಹಿಸುತ್ತಾರೆ ಎಂದು ಪ್ರಚಾರವಾದಾಗಲೂ ಈ ಮಟ್ಟಿನ ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಸಾರ್ವಜನಿಕರಿರಲಿ ಕಡೇಪಕ್ಷ ಅವರಿಂದ ಬೇಕಾದಷ್ಟು ಉಪಕಾರ ಪಡೆದವರು, ಅವರ ಕುಟುಂಬದವರೂ ಕೂಡ ಸುಳಿಯದಿದ್ದುದು ಸಾರ್ವಜನಿಕರ ನೆನಪಿನ ಶಕ್ತಿ ಕ್ಷೀಣ ಎಂಬ ಅಭಿಪ್ರಾಯವನ್ನು ನೆನಪಿಗೆ ತರುವಂತಿತ್ತು. ಮೂಲ ಬಿಜೆಪಿಯವರು ಇವರು ನಮ್ಮವರಲ್ಲ ಎಂಬ ಅಸಡ್ಡೆ ತೋರಿದರೆ ಕಾಂಗ್ರೆಸ್ಸಿಗರು ಎಲ್ಲಾ ಅಧಿಕಾರವನ್ನು ತಮ್ಮ ಪಕ್ಷದಿಂದ ಅನುಭವಿಸಿ ಕಡೇಗಾಲದಲ್ಲಿ ಈ ವ್ಯಕ್ತಿ ಬಿಜೆಪಿಯಲ್ಲಿ ಲೀನವಾಗಿ ಹೋದರು ಎಂಬ ಉದಾಸೀನ ತೋರಿದ ಹಾಗಿತ್ತು. ಭಾಗವಹಿಸಬೇಕಿದ್ದ ಫಲಾನುಭವಿಗಳು ಸೇರಿದಂತೆ ಜನರೆಲ್ಲರೂ  ಕೈಕೊಟ್ಟಿದ್ದರಿಂದ ಸಾವಿರಾರು ಜನ ಕುಳಿತುಕೊಳ್ಳಬಹುದಾದ ಗೋಪಾಲಗೌಡ ರಂಗಮಂದಿರದಲ್ಲಿ ಕಾಟಾಚಾರಕ್ಕೆ ಎಂಬಂತೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನುಡಿನಮನವನ್ನು ಶುಕ್ರವಾರ ಸಲ್ಲಿಸಲಾಯಿತು.

ಶಾಸಕ ಆರಗ ಜ್ಞಾನೇಂದ್ರ, ಕಡಿದಾಳು ದಯಾನಂದ, ಕುಣಜೆ ಕಿರಣ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಬಿ.ಗಣಪತಿ, ಸಂದೇಶ ಜವಳಿ, ಮಹಮ್ಮದ್‌ ಸಾಹೇಬ್‌ ಮುಂತಾದವರು ಮಾತನಾಡಿದರು.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post