“ಅವ್ಯವಹಾರ ತನಿಖೆಯಾದ್ರೆ ಕೆಲವರು ಅಂದರ್”‌ ಬೇಳೂರು

“ಯಡಿಯೂರಪ್ಪ ಮಾತು ಕೇಳಿದ್ದು ತಪ್ಪಾ‌”

“ಮುಳುಗುತ್ತಿದ್ದ ಡಿಸಿಸಿಗೆ ಆರ್ಥಿಕ ಚೈತನ್ಯ ನೀಡಿದ್ದೇ ನನ್ನ ಕಷ್ಟಗಳಿಗೆ ಕಾರಣ”

"ಬಿ.ಎಸ್.‌ ವಿಶ್ವನಾಥ್‌ ಆರೋಗ್ಯ ಹದಗೆಡಲು ಕಾರಣವೇನು?"

“ಮುಂದೆ ಹೊಗಳಿಕೆ ಹುಂದೆ ಚೂರಿ” ಆರ್‌ಎಂಎಂ ಟೀಕೆ

ರಾಜಕೀಯ ನಿಂತ ನೀರಲ್ಲ. ಒಬ್ಬರನೊಬ್ಬರು ದೂಷಿಸುವುದು ಸಾಮಾನ್ಯ. ಡಿಸಿಸಿ ಬ್ಯಾಂಕ್‌ನ ಹಿಂದಿನ ಅವಧಿಯಲ್ಲಿ ನಡೆದ ಅವ್ಯವಹಾರ ತನಿಖೆ ಮಾಡಿಸಿದರೆ ಕೆಲವರು ಜೈಲಿಗೆ ಹೋಗುತ್ತಾರೆ. ಬಿ.ಎಸ್.‌ಯಡಿಯೂರಪ್ಪ ಬ್ಯಾಂಕ್‌ ವ್ಯವಹಾರದಲ್ಲಿ ತಲೆಹಾಕಿಲ್ಲ. ಅವರ ಮಕ್ಕಳ ಪಾತ್ರವಿದೆ. ರೈತರು, ಬಡವರು ಸಂಕಷ್ಟದಲ್ಲಿದ್ದು ಸರ್ಕಾರದ ನೆರವು ಬೇಕಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಅಡಿಕೆ ಮಂಡಿಯಲ್ಲಿ ಸಾಲ ಸಿಗುತ್ತಿದ್ದ ಕಾಲದಲ್ಲಿ ಬಡವರು ಕಣ್ಣೀರು ಹಾಕಬೇಕಿತ್ತು. ಸಹಕಾರಿ ಸಂಘ ಸಾಲ ನೀಡಲು ಆರಂಭಿಸಿದ ಮೇಲೆ ಸಮಾಜದಲ್ಲಿ ಆತ್ಮಸೈರ್ಯ ಹೆಚ್ಚಿದೆ. ಸರ್ಕಾರ ಎಲ್ಲರನ್ನು ರಕ್ಷಿಸಲು ಸಾಧ್ಯವಿಲ್ಲ. ಬಹುತ್ವ ಭಾರತ ನಿರ್ಮಾಣಗೊಳ್ಳಲು ಸಹಕಾರಿ ಕ್ಷೇತ್ರ ಅಗತ್ಯವಾಗಿದೆ. ಮಾದ್ಯಮ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ  ಹೇಳಿದರು.

ರೈತರಿಗೆ ಸಾಲ ಮಂಜೂರು ಮಾಡುವ ಹಣಕಾಸು ನೆರವಿನ ಅಳತೆ ಪ್ರಮಾಣ ಬದಲಾಗಬೇಕು. ಸಹಕಾರಿ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆ ಗಟ್ಟಿಯಾಗಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್‌ ಹೇಳಿದರು.

ಬೇತಾಳನ ಹೊತ್ತ ವಿಕ್ರಮಾದಿತ್ಯನಂತೆ ಕಷ್ಟ, ನೋವು, ಸವಾಲುಗಳನ್ನು ಎದುರಿಸಿ ಮಂಜುನಾಥ ಗೌಡರು ಪರಿಪಕ್ವವಾಗಿದ್ದಾರೆ. ರಾಜಕೀಯವಾಗಿ ಅವರು ಬಿದ್ದಾಗ ನಾನು ಕಲ್ಲು ಹೊಡೆದಿದ್ದೇನೆ. ವಿರೋಧಿಗಳ ಇಡಿ, ಐಟಿ, ಸಿಬಿಐ ಅಸ್ತ್ರ ಫಲನೀಡದು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಆಯನೂರು ಮಂಜುನಾಥ ಅಭಿಪ್ರಾಯಪಟ್ಟರು.

1996ರಲ್ಲಿ 21 ಕೋಟಿ ನಷ್ಟದಲ್ಲಿದ್ದ ‌ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಲಾಭಗಳಿಸುವಂತೆ ಮಾಡಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ ಶಾಸಕ, ಸಚಿವರು ಮಾಡಲಾಗದ ಸಾಹಸವನ್ನು ಮಾಡಿದ್ದೇನೆ. ಗುಡ್ಡೇಕೊಪ್ಪ ಸೊಸೈಟಿ ಸೇರಿದಂತೆ ಮುಚ್ಚುತ್ತಿದ್ದ 100ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಪುನರ್‌ ಸ್ಥಾಪನೆ ಮಾಡಿದ್ದೇನೆ. ಯಡಿಯೂರಪ್ಪನವರ ಕಷ್ಟದ ಸಂದರ್ಭದಲ್ಲಿ ಜೊತೆಯಾಗಿದ್ದೇನೆ. ಜೈಲಿನಲ್ಲಿದ್ದ ಸಂದರ್ಭ ನನ್ನ ಕೈಹಿಡಿದುಕೊಂಡು ಅಂಗಲಾಚಿಕೊಂಡಿದ್ದರು. ಅವರ ಮಾತು ಕೇಳಿ ರಾಜಕೀಯಕ್ಕೆ ಪ್ರವೇಶಿಸಿದ್ದೇ ನಾನು ಮಾಡಿದ ಮೊದಲ ತಪ್ಪಾ. ಆದ್ದರಿಂದಲೇ ಇಡಿ, ಸಿಬಿಐ, ಐಟಿ ದಾಳಿ ನಡೆಸುತ್ತಿದ್ದಾರಾ ಎಂದು ಆರ್‌.ಎಂ. ಮಂಜುನಾಥ ಗೌಡರ ಸೋಮವಾರ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಹಕಾರಿ ವೇದಿಕೆ ವತಿಯಿಂದ ಹಮ್ಮಿಕೊಂಡ ತೌರೂರ ಸಂಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್‌ ಈಗಿನ ಸಾವಿರಾರು ಕೋಟಿ ವ್ಯವಹಾರಕ್ಕೆ ನಾನು ಅಂದು ತೆಗೆದುಕೊಂಡ ನಿರ್ಧಾರಗಳೇ ಪ್ರಮುಖ ಕಾರಣ. ಇಷ್ಟೆಲ್ಲ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡಿದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಕಟ್ಟಿದರು. ದೇಶದ ಎಲ್ಲಾ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸಹಕಾರ ಮತ್ತು ರಾಜಕೀಯವಾಗಿ ಮುಗಿಸಲು ಸಂಚು ನಡೆಸಿದ್ದರು. ಕಟ್ಟಿ ಬೆಳೆಸಿದ ಸಂಸ್ಥೆಯಿಂದ ಕೆಟ್ಟ ಹೆಸರು ಬಂತೆಂಬ ಬೇಜಾರು ಇದೆ. ಪೂರ್ಣ ಪ್ರಮಾಣದಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ತೊಡಗಿಸಿಕೊಳ್ಳಲು ಮನಸ್ಸಾಗುತ್ತಿಲ್ಲ. ಹೆಂಡತಿ ಮಾತಿಗೆ ಕಟ್ಟುಬಿದ್ದು ಪುನಃ ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿದ್ದೇನೆ. ಅಪೆಕ್ಸ್‌ ಬ್ಯಾಂಕ್‌ನಲ್ಲಿ 50 ಸಾವಿರ ಕೋಟಿ ಬಜೆಟ್‌ ಇದ್ದರು ಅವ್ಯವಹಾರ ಆರೋಪ ಇಲ್ಲ. ರಾಜ್ಯದ ಕಾಲುಭಾಗದ ಬಜೆಟ್‌ ಇದ್ದರು ಪೈಸೆಗಳಿಗೂ ಲೆಕ್ಕ ಕೊಟ್ಟಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

“ಮಾಜಿ ಶಾಸಕ ಬಿ.ಎಸ್‌. ವಿಶ್ವನಾಥ್‌ ದೇಶದಲ್ಲಿ ಸಾವಿರಾರು ಕೋಟಿ ವೆಚ್ಚದ ಸಹಕಾರಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಅವರು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡ ಓರ್ವ ಸಹಕಾರಿ ಸಂಘಟಕ. ಅಂತವರ ಸಾವಿನ ಕೊನೆಯ ಗಳಿಗೆಯಲ್ಲಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಬಿ.ಪಿ., ಶುಗರ್‌, ಸ್ಟ್ರೋಕ್‌ ಆಗಲು ಕಾರಣರಾದವರು ಹೊಗಳಿಕೆಯ ಹಾದಿ ಹಿಡಿದಿದ್ದಾರೆ. ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳ ಸ್ಥಿತಿ ಏನಾಗುತ್ತಿದೆ ಎಂಬ ಬಗ್ಗೆ ನನಗೆ ಅರಿವಿದೆ. ಹಿಂದಿನಿಂದ ಕಾಲೆಳೆದು ಮುಂದಿನಿಂದ ಹೊಗಳುವವರ ಸಂಖ್ಯೆ ಹೆಚ್ಚಿದೆ. ಸಹಕಾರಿ ಸಂಘಗಳನ್ನು ಮುಚ್ಚಿದವರಿಗೆ ನನ್ನ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ” ಎಂದು ಪರೋಕ್ಷವಾಗಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಗುಜರಾತ್‌ನಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದರೂ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಲು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಸಾಧ್ಯವಾಗಿಲ್ಲ. ಕೇಂದ್ರದಿಂದ ಸಹಕಾರಿ ಸಂಸ್ಥೆ ಮುಗಿಸುವ ಹುನ್ನಾರ ನಡೆಯುತ್ತಿದೆ. ನಬಾರ್ಡ್‌ನಿಂದ ಬರಬೇಕಾದ ರಾಜ್ಯದ ಪಾಲು ₹6,430 ಕೋಟಿ ಹಣ ಬಂದಿಲ್ಲ. ಸಹಕಾರಿ ಶ್ರೀಮಂತರ ವ್ಯವಸ್ಥೆಯಲ್ಲ ಸಾಮಾನ್ಯ ಜನರ ಚಳುವಳಿಯಾಗಬೇಕು ಎಂದು ಹೇಳಿದರು.

ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಬಸ್‌ ನಿಲ್ದಾಣದಿಂದ ಬೈಕ್‌ ರ್ಯಾಲಿ ಮೂಲಕ ಮಂಜುನಾಥ ಗೌಡರನ್ನು ಅದ್ದೂರಿಯಾಗಿ ವೇದಿಕೆಗೆ ಕರೆತರಲಾಯಿತು. ಸುಮಾರು 300 ಕೆ.ಜಿ. ತೂಕದ ಹಣ್ಣಿನ ಹಾರವನ್ನು ಅಭಿಮಾನಿಗಳು ಮಂಜುನಾಥ ಗೌರಿಗೆ ಅರ್ಪಿಸಿದರು.

ವೇದಿಕೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶಿಮುಲ್ ಅಧ್ಯಕ್ಷ ಶ್ರೀಪಾಲ್ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಎನ್ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸಹಕಾರಿಗಳಾದ ಕೆ.ರತ್ನಾಕರ್, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಷಡಕ್ಷರಿ, ಕಲಗೋಡು ರತ್ನಾಕರ ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post