ಇಡಿ ಶೋಧದ ಹಿಂದಿನ ಗುಟ್ಟೇನು…?

ಮಂಜುನಾಥ ಗೌಡರನ್ನು ರಾಜಕೀಯವಾಗಿ ಹಣಿಯುವ ತಂತ್ರವೇ…!
ಶಿವಮೊಗ್ಗ ಡಿಸಿಸಿ ಅಧ್ಯಕ್ಷರ ಬಂಧನಕ್ಕೆ ಭಾರಿ ಒತ್ತಡ
ಸೋಮವಾರ ಏನಾಗುತ್ತೆ…! 

ಈಗ್ಗೆ ಸುಮಾರು 25 ವರ್ಷಗಳ ಹಿಂದೆ ಭಾರೀ ನಷ್ಟದಲ್ಲಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಇನ್ನೇನು ಬಂದ್‌ ಆಗುತ್ತೇ…! ಅಧ್ಯಕ್ಷ ಸ್ಥಾನ ಹೊತ್ತು ಕ್ಲೋಸ್‌ ಮಾಡಿದ ಆರೋಪ ಯಾಕೆ ಹೊತ್ತುಕೊಳ್ಳಬೇಕು ಎನ್ನುವ ಭಯ ಸಹಕಾರಿಗಳ ಎದೆಯನ್ನು ಕಲಕಿತ್ತು. 1997ರಲ್ಲಿ ಅಧ್ಯಕ್ಷ ಗಾದಿಯ ಜವಾಬ್ದಾರಿ ಹೊತ್ತುಕೊಳ್ಳಲು ಯಾವ ನಿರ್ದೇಶಕರು ಮುಂದೆ ಬಂದಿರಲಿಲ್ಲ. ಯೌವನ, ಹೊಸದೇನೋ ಸಾಧಿಸುವ ಛಲ ಹೊಂದಿದ್ದ ಮಂಜುನಾಥ ಗೌಡರು ಆಗ ಅಧ್ಯಕ್ಷ ಹುದ್ದೆ ನಿಭಾಯಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಅಂದು ಕೋಟ್ಯಾಂತರ ರೂಪಾಯಿ ನಷ್ಟದಲ್ಲಿ ಡಿಸಿಸಿ ಬ್ಯಾಂಕ್‌ ಕೆಲವೇ ವರ್ಷಗಳಲ್ಲಿ ಚಿಲುಮೆಯಂತೆ ಹೊಸ ಭರವಸೆ ಹುಟ್ಟುಹಾಕಿತ್ತು. ಲಕ್ಷಾಂತರ ಜನ ರೈತರಿಗೆ ಸಾಲ ನೀಡಿ ಡಿಸಿಸಿ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ಲಾಭದ ಹಿರಿಮೆ ತಂದ ಕೀರ್ತಿ ಮಂಜುನಾಥ ಗೌಡರ ಪಾಲಿಗೆ ಒದಗಿತು.

ಈ ಮಧ್ಯೆ ರಾಜಕೀಯ ಪ್ರವೇಶಿಸಿದ ಮಂಜುನಾಥ ಗೌಡರು 2013ರಲ್ಲಿ ವಿಧಾನಸಭಾ ಚುನಾವಣೆಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣೆಯ ಕಾವು ರಂಗೇರುತ್ತಿದ್ದಂತೆಯೇ ಡಿಸಿಸಿ ಬ್ಯಾಂಕ್‌ಗೆ ಸೇರಿದ್ದ ಅಡಮಾನ ಸಾಲಕ್ಕೆ ಸಂಬಂಧಿಸಿದಂತೆ ಹಗರಣವೊಂದು ಬಹಿರಂಗಕ್ಕೆ ಬಂತು. ನಕಲಿ ಚಿನ್ನಾಭರಣಗಳ ಮೇಲೆ 62.77 ಕೋಟಿ ರೂಪಾಯಿ ಸಾಲ ಹಂಚಿಕೆ ಮಾಡಿದ್ದಾರೆ ಎಂಬ ಗಂಭೀರ ದೂರು ಬಂತು. ಎಚ್ಚೆತ್ತ ಮಂಜುನಾಥ ಗೌಡರು ಡಿಸಿಸಿ ಬ್ಯಾಂಕಿನ ಪರವಾಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಿರೋಧಿಗಳು ದೂರು ನೀಡಿದ ಮಂಜುನಾಥ ಗೌಡರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ರಾಜಕಾರಣ ಶುರು ಮಾಡಿದರು. ಇದಾದ ನಂತರ ಮಂಜುನಾಥ ಗೌಡರ ವಿರೋಧಿಗಳು ಒಂದಾಗಿ ಒಂದರ ಮೇಲೊಂದು ಆರೋಪಗಳನ್ನು ಹೆಣೆಯತೊಡಗಿದರು. ಇದರ ಭಾಗವಾಗಿ ದೇಶದಲ್ಲಿರುವ ಬಹುಪಾಲು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ತನಿಖೆ ಕೂಡ ನಡೆಸಿದರು. ಇಲ್ಲಿಯವರೆಗೆ ಐಟಿ, ಸಿಬಿಐ, ಸಿಐಡಿ ತನಿಖೆಗಳನ್ನು ಎದುರಿಸಿದ್ದ ಮಂಜುನಾಥ ಗೌಡರಿಗೆ ಗುರುವಾರ ಇಡಿ ಶೋಧದ ಬಿಸಿ ತಟ್ಟಿದೆ.

ಸಿಐಡಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಂಜುನಾಥ ಗೌಡರು ಚಿನ್ನಾಭರಣ ಅಡಮಾನ ಸಾಲದ ಪ್ರಕರಣ ಸಂಬಂಧ ನಿರ್ದೋಷಿಯಾದರು. ಅಲ್ಲದೇ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನದಿಂದ ಅನರ್ಹತೆ ಹೊಂದಿದ್ದ ಗೌಡರು ಕಾನೂನಾತ್ಮಕ ಪುನಃ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗುವ ಅರ್ಹತೆ ಪಡೆದಿದ್ದರು. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗುತ್ತಿದ್ದಂತೆಯೇ ಹಿಂದಿನ ಅಧ್ಯಕ್ಷರಾಗಿದ್ದ ಎಂ.ವಿ. ಚನ್ನವೀರಪ್ಪ ಅವಧಿಯಲ್ಲಿ ಕೇಳಿ ಬಂದ ಅಕ್ರಮ ನೇಮಕಾತಿ ಸಂಬಂಧ ತನಿಖೆ ನಡೆಸಲು ಮುಂದಾಗಿದ್ದರು ಎಂಬ ವಿಚಾರ ಸಹಕಾರಿ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ. ಡಿಸಿಸಿ ಬ್ಯಾಂಕ್‌ ಹುದ್ದೆಗಳ ನೇಮಕಾತಿಯಲ್ಲಿ ಪ್ರತಿಯೊಂದು ಹುದ್ದೆಗೂ ಸುಮಾರು 40 ಲಕ್ಷದ ವರೆಗೆ ಲಂಚ ಸ್ವೀಕರಿಸಲಾಗಿದೆ ಎಂಬ ಬಗ್ಗೆಯೂ ಜಿಲ್ಲೆಯಾದ್ಯಂತ ಗುಸು ಗುಸು ಸುದ್ದಿ ಇದೆ. ಪರೀಕ್ಷೆಯ  ಓಎಂಆರ್‌ ಉತ್ತರ ಪತ್ರಿಕೆ ತಿದ್ದುಪಡಿ ಮಾಡಲಾಗಿದೆ ಎಂಬ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿದೆ. ಉತ್ತರ ಪತ್ರಿಕೆ ತಿದ್ದುಪಡಿ ವಿಚಾರ ತನಿಖೆಯಾಗುತ್ತದೆ ಎಂಬ ಭಯದಿಂದ ನೇರವಾಗಿ ಮಂಜುನಾಥ ಗೌಡರನ್ನು ಹಣಿಯಲು ವಿರೋಧ ಬಣ ಸಜ್ಜಾಗಿದೆ ಎಂಬುದು ಸದ್ಯ ಬಲವಾಗಿ ಕೇಳಿ ಬರುತ್ತಿರುವ ಆರೋಪ.

ಗುರುವಾರ ಬೆಳಿಗ್ಗೆಯಿಂದ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದ ತನಿಖೆ ನಡೆಸುವ ಇಡಿ ಅಧಿಕಾರಿಗಳು ಆರ್.ಎಂ. ಮಂಜುನಾಥ ಗೌಡರಿಗೆ ಸೇರಿದ ಬೆಟ್ಟಮಕ್ಕಿ, ಕರಕುಚ್ಚಿ ಹಾಗೂ ಶಿವಮೊಗ್ಗ ಶರಾವತಿ ನಗರದ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೆಟ್ಟಮಕ್ಕಿ, ಶರಾವತಿ ನಗರ ಮನೆಯಲ್ಲಿ ಅಕ್ರಮ ಆಸ್ತಿ, ಹಣ ಪತ್ತೆಯಾಗಿಲ್ಲ ಎಂದು ಪ್ರಮಾಣ ಪತ್ರ ನೀಡಿದ್ದರು. ಶಿವಮೊಗ್ಗ ತಾಲ್ಲೂಕಿನ ಕರಕುಚ್ಚಿಯಲ್ಲಿರುವ ಮಂಜುನಾಥ ಗೌಡರ ವಾಸದ ಮನೆಯಲ್ಲಿ ಇಡಿ ಅಧಿಕಾರಿಗಳ ಸ್ಥಳ ಮಹಜರು ವರದಿಗೆ ಗ್ರಾಮಸ್ಥರು ಸಹಿ ಮಾಡದ ಕಾರಣದಿಂದ ಅಧಿಕಾರಿಗಳು ಗುರುವಾರ ಮನೆಯಲ್ಲಿಯೇ ಉಳಿದು ತನಿಖೆ ಮುಂದುವರೆಸಿದ್ದರು. ಶುಕ್ರವಾರ ರಾತ್ರಿ 9.30ರ ತನಕ ಮಂಜುನಾಥ ಗೌಡರ ಬರುವಿಕೆಗಾಗಿ ಕಾದಿರುವ ಅಧಿಕಾರಿಗಳು ಬೆಂಗಳೂರಿನ ಕಚೇರಿಗೆ ಸೋಮವಾರ ಹಾಜರಾಗುವಂತೆ ನೋಟೀಸ್‌ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಇಂತಹ ಸುದ್ದಿಗಳ ನಡುವೆಯೇ ಸಹಕಾರಿಗಳ ವಲಯದಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುವ ಇನ್ನೊಂದು ಆಂತಕ ಎದುರಾಗಿದೆ. ಒಂದು ವೇಳೆ ಮಂಜುನಾಥ ಗೌಡರು ಸೋಮವಾರ ಬೆಂಗಳೂರಿನ ಇಡಿ ಕಚೇರಿಗೆ ಹಾಜರಾದರೆ ಸ್ಥಳದಲ್ಲಿಯೇ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗುವ ಜೊತೆಗೆ ಜಿಲ್ಲಾ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿಯಾಗಿ ಬೆಳೆಯುತ್ತಿರುವ ಆರ್‌.ಎಂ. ಮಂಜುನಾಥ ಗೌಡರನ್ನು ರಾಜಕೀಯವಾಗಿಯೂ ಹಣಿಯುವ ತಂತ್ರ ಬಂಧಿಸುವ ಮೂಲಕ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ. ಹಾಗಾಗಿ ಎಲ್ಲಾ ತಂತ್ರಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ತನಿಖಾ ಜಾಲಕ್ಕೆ ಸಿಕ್ಕಿಹಾಕಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕವಾಗಿದ್ದು ಇದರ ಹಿಂದೆ ಬಿಜೆಪಿ ಮುಖಂಡರ ಕೈವಾಡ ಇದೆ ಎಂಬ ಅನುಮಾನವೂ ಬಲವಾಗಿ ಕಾಡುತ್ತಿದೆ.

ಇದರ ಜೊತೆಗೆ ತೀರ್ಥಹಳ್ಳಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ತೌರೂರ ಸಂಮಾನ ಕಾರ್ಯಕ್ರಮವನ್ನು ಹಾಳು ಮಾಡುವ ಉದ್ದೇಶ ಇಡಿ ದಾಳಿ ಮಾಡಿಸುವ ರಾಜಕೀಯ ಹುನ್ನಾರದ ಹಿಂದಿದೆ ಎಂಬ ಆರೋಪವೂ ಇದೆ. ಮುಂದುವರೆದು ತೌರೂರ ಸಂಮಾನ ಕಾರ್ಯಕ್ರಮ ನಡೆಯುವ ಸ್ಥಳವಾದ ಶಾಂತವೇರಿ ಗೋಪಾಲಗೌಡ ರಂಗಮಂದಿರಕ್ಕೂ ಇಡಿ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ ಎಂಬುದು ಸಹಕಾರಿಗಳ ಆತಂಕಕ್ಕೆ ಪುಷ್ಟಿ ನೀಡಿದಂತಿದೆ. ಒಂದು ವೇಳೆ ಮಂಜುನಾಥ ಗೌಡರು ಬೆಂಗಳೂರು ಇಡಿ ಕಚೇರಿಗೆ ತೆರಳಿದರೆ ಬಂಧನವಾಗುವ ಭಯ ಕೂಡ ಅಭಿಮಾನಿ ವಲಯವನ್ನು ಕಂಗೆಡಿಸಿದೆ. ಬಿಜೆಪಿ ಮುಖಂಡರ ಅಧಿಕಾರದ ಅವಧಿಯಲ್ಲಿ ಡಿಸಿಸಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಮುಚ್ಚಲು ಮಂಜುನಾಥ ಗೌಡರಿಗೆ ಇಡಿ ಕಿರುಕುಳ ನೀಡಿ ರಾಜೀಕಬೂಲಿಗೆ ಮುಂದಾಗಿದ್ದಾರೆ ಎಂಬ ಸುದ್ದಿ ಕುತೂಹಲಕಾರಿ ಘಟ್ಟದತ್ತ ಸಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post