ಆರ್‌.ಆರ್‌. ಚಂದ್ರಪ್ಪ ಅವರಿಗೆ ನುಡಿನಮನ

ವರನಟ ರಾಜ್, ಮಾಜಿ ಸಿಎಂ ಬಂಗಾರಪ್ಪನವರ ಹತ್ತಿರದ ಸಂಬಂಧಿ

ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಬಾಳಿ ಬದುಕಿದ್ದ ಸಜ್ಜನ ಆರ್.ಆರ್. ಚಂದ್ರಪ್ಪ


ತೀರ್ಥಹಳ್ಳಿ ರಾಜಕೀಯದಲ್ಲಿ ತಮ್ಮದೇ ಆದ  ಒಂದು ಪ್ರತ್ಯೆಕ ಅಸ್ತಿತ್ವ ಮೂಡಿಸಿಕೊಳ್ಳುವ ಸಾಧ್ಯತೆ ಹಾಗೂ ಅವಕಾಶವೂ ಇದ್ದ ಆರ್.ಆರ್. ಚಂದ್ರಪ್ಪ ಎಂಬ ಸಜ್ಜನ ಅಕಾಲಿಕ ಮರಣ ಹೊಂದಿದಾರೆ.

ಮೂಲತಃ ರುದ್ರಾಕ್ಷಿಕೊಪ್ಪದ ಸಿರಿವಂತ ಜಮೀನುದಾರಿ ಕುಟುಂಬದ ಚಂದ್ರಪ್ಪ ಪ್ರಭಾವಿ ಈಡಿಗ ಸಮುದಾಯದವರು. ಅಲ್ಲದೇ ಬಂಗಾರಪ್ಪನವರ ಹತ್ತಿರದ ಬಂಧು.  ಬಂಗಾರಪ್ಪನವರಿಗೆ ಚಂದ್ರಪ್ಪ ಎಂದರೆ ಅಚ್ಚುಮೆಚ್ಚು ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಅಗಿದ್ದ ಅವಧಿಯಲ್ಲಿ ಬಹಳ ಹತ್ತಿರ ಇದ್ದವರು. ಚಂದ್ರಪ್ಪ ಅವರ ಸಹೋದರ ಅರ್.ಅರ್. ಶಿವಾನಂದ ವಿವಾಹವಾಗಿದ್ದು ಪಾರ್ವತಮ್ಮ ರಾಜಕುಮಾರ್ ಅವರ ಸೊದರಿಯನ್ನು. ಇವರ ಮನೆಯ ಸುತ್ತಲ ವಾತಾವರಣ ವರನಟ ರಾಜಕುಮಾರ್ ಅವರಿಗೆ  ಅತ್ಯಂತ ಪ್ರಿಯವಾಗಿತ್ತು. ಅನೇಕ ಬಾರಿ ಅವರ ಮನೆಗೆ ರಾಜ್ ಭೇಟಿ ನೀಡಿದ್ದರು. ಹಾಗಾಗಿ ಅವರದು ಅತ್ಯಂತ  ಪ್ರತಿಷ್ಟಿತ ಕುಟುಂಬವಾಗಿತ್ತು.

ರಾಜಕೀಯವಾಗಿ ಅವರು ತಮ್ಮಪ್ರಭಾವ, ಹಿನ್ನಲೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ಈ ಹೊತ್ತಿಗೆ ಅವರು ಕಡೇ ಪಕ್ಷ ತಮ್ಮ ಸಮುದಾಯದ ಪ್ರಬಲ ನಾಯಕನಾಗಿ ಬೆಳೆಯುವ ಸಾಧ್ಯತೆ ಇತ್ತು. ಆದರೆ ಸ್ವಭಾವತಃ ನಿಷ್ಕಪಟ ವ್ಯಕ್ತಿತ್ವದ ಮತ್ತು ಯಾರಿಗೂ ಗಟ್ಟಿಯಾಗಿ ಮಾತನಾಡದ ಚಂದ್ರಪ್ಪ ಅದೇ ಕಾರಣಕ್ಕಾಗಿ ಎಲ್ಲರ ಗೌರವವನ್ನು ಕಡೇ ತನಕ ಸಂಪಾದಿಸಿದ್ದರು. ಆದರೆ ರಾಜಕಾರಣ ಎಂದರೆ ಎಲ್ಲ ಕಡೆ ಹೊಂದಾಣಿಕೆ ಮತ್ತು ಯಾರಿಗೆ ಯಾವಾಗ ಬೇಕಾದರೂ ಕೈ ಕೊಡುವುದು ಎನ್ನುವ ಈಗಿನ ವಾತಾವರಣದಲ್ಲಿ ಮುನ್ನಗ್ಗುವ ಚುರುಕು ಅವರಲ್ಲಿ ಇರಲಿಲ್ಲ.

ನಂಬಿಕೆಯ ವ್ಯಕ್ತಿತ್ವದ ಅವರು ಹಲವು ಬಾರಿ ತೂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದಕ್ಷತೆಯಿಂದ ಕೆಲಸ ಮಾಡಿದ್ದರು. ಕೋಣಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಮಂಡಗದ್ದೆ ಮಂಡಲ ಪಂಚಾಯತ್ ಉಪಪ್ರಧಾನರಾಗಿದ್ದರು. ವಿಜಯದೇವ್ರಂತ ಮೇರು ಸಹಕಾರಿ ಸ್ಥಾಪಿಸಿದ ಶರಾವತಿ ಪತ್ತಿನ ಸಹಕಾರ ಸಂಘ, ಸಹ್ಯಾದ್ರಿ ಸಂಸ್ಥೆ, ಮುಂತಾದುವುಗಳಲ್ಲಿ ನಿದೇಶಕ. 2005ರಲ್ಲಿ ಬಂಗಾರಪ್ಪನವರ ಸಮಾಜವಾದಿ ಪಕ್ಷದಿಂದ ಮಂಡಗದ್ದೆ ಜಿಲ್ಲಾ ಪಂಚಾಯತ್ ಚುನಾವಣೆಗೂ ಸ್ಪರ್ಧೆ ಮಾಡಿ ಅತ್ಯಲ್ಪ ಮತದ ಅಂತರದ ಸೋಲು ಕಂಡಿದ್ದರು. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ 50ಕ್ಕೂ ಹೆಚ್ಚು ಸಮುದಾಯ ಭವನ ನೀಡಿದ್ದರು. ಆಯ್ಕೆಯಲ್ಲಿ ಅಂತಿಮ ಪಾತ್ರ ಚಂದ್ರಪ್ಪನವರದ್ದೇ ಆಗಿದ್ದು. ಆ ಕಾಲಕ್ಕೆ ಅದು ಗಮನಾರ್ಹ ಮೊತ್ತವೇ ಆಗಿದ್ದರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಷ್ಕಲ್ಮಶವಾಗಿ ಕ್ಷೇತ್ರದ ವಿವಿಧ ಸಮುದಾಯಗಳ ಅವಶ್ಯಕತೆ ಪೂರೈಸಲು ಅವರು ತಮ್ಮ ಪ್ರಭಾವ ಬಳಸಿಕೊಂಡಿದ್ದರು.

ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಬದುಕಿದ್ದ ಆರ್.ಆರ್. ಚಂದ್ರಪ್ಪ ಅವರ ಅಕಾಲಿಕ ನಿಧನ ನಿಜವಾಗಿಯೂ ತುಂಬಲಾರದ ನಷ್ಟ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post