ಉಚಿತ ಯೋಜನೆ ಹಣ ಇಲ್ಲ - ಬಿಜೆಪಿ ಅಭಿವೃದ್ಧಿ ಪ್ರಕ್ರಿಯೆ ತಡೆ

ಕಾಂಗ್ರೆಸ್‌ ಸರ್ಕಾರ ಹುಲಿ ಸವಾರಿ ಆರಂಭಿಸಿದೆ
ನನ್ನ ಅವಧಿಯ ಅಭಿವೃದ್ಧಿಯ ಕಾರು ಮಾಜಿ ಸಚಿವರ ಎದೆಮೇಲೆ ಹೋಗುತ್ತಿತ್ತು
ಕಾರ್ಯಕರ್ತರು, ಮತದಾರರ ಕೃತಜ್ಞತಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಲೇವಡಿ


ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಅಭಿನಂದನೆ, ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ನಂಬಿಕೆಯಿಂದ ಕಾಂಗ್ರೆಸ್‌ ಉಚಿತ ಯೋಜನೆ ಘೋಷಿಸಿತ್ತು. ಅದೃಷ್ಟವಶಾತ್‌ ಗೆದ್ದಿದ್ದು ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ನೀಡಲು ಪರದಾಡುತ್ತಿದ್ದಾರೆ. ಕಾಂಗ್ರೆಸ್ ಹುಲಿ ಸವಾರಿ ಆರಂಭಗೊಂಡಿದ್ದು ಇಳಿದರು ಕಷ್ಟ, ಮುಂದೆ ನಡೆದರು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಉಚಿತ ಯೋಜನೆಗಳನ್ನು ನೀಡಲು ಹಣ ಇಲ್ಲದ ಕಾರಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ₹20,000 ಕೋಟಿ ಕಾಮಗಾರಿ, ಟೆಂಡರ್‌ ಪ್ರಕ್ರಿಯೆ ತಡೆಹಿಡಿಯಲಾಗಿದೆ. ತಾಲ್ಲೂಕಿನಲ್ಲೂ ಸುಮಾರು ₹100 ಕೋಟಿ ಕಾಮಗಾರಿಗಳ ಪ್ರಕ್ರಿಯೆ ನಿಲ್ಲಿಸಲಾಗಿದೆ. ರಾಜ್ಯದ ಅಭಿವೃದ್ಧಿ ಕಾಮಗಾರಿಗಳನ್ನು ನಗಣ್ಯ ಮಾಡಿ ಉಚಿತ ಯೋಜನೆ ಜಾರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜನರ ಕಷ್ಟ ಪರಿಹರಿಸಲು ಹಳ್ಳಿಗಳಿಗೆ ತೆರಳುತ್ತಿದ್ದ ಸಂದರ್ಭ ನನ್ನ ಕಾರು ಮಾಜಿ ಸಚಿವರ ಎದೆಮೇಲೆ ಹೋದಹಾಗೆ ಆಗ್ತ ಇತ್ತು. ಅದಕ್ಕಾಗಿಯೇ ಗೃಹಸಚಿವನಾಗಿ ನಾನು ಕ್ಷೇತ್ರದಲ್ಲಿ ಇರಬಾರದು ಎಂಬ ಕಾರಣಕ್ಕೆ ರಾಜ್ಯಾದ್ಯಂತ ಓಡಾಟ ಮಾಡಬೇಕೆಂದು ಸಲಹೆ ನೀಡುತ್ತಿದ್ದರು. ರಾಜ್ಯದಲ್ಲಿಯೂ ಓಡಾಟ ಮಾಡಿದ್ದೇನೆ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದೇನೆ ಎಂಬುದಕ್ಕೆ ಚುನಾವಣೆ ಸಾಕ್ಷಿಯಾಗಿದೆ ಎಂದು ಕುಟುಕಿದರು.

ಕ್ಷೇತ್ರದ ಯಾವೊಬ್ಬ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿಲ್ಲ. ಎಲ್ಲರನ್ನು ಸಮಚಿತ್ತದಿಂದ ನಿಭಾಯಿಸಿದ್ದೇವೆ. ಕೆಲವು ಪಕ್ಷದವರಿಗೆ ಕಾರ್ಯಕರ್ತರು ಎಂದರೆ ಸಂಬಳದ ಆಳುಗಳಂತೆ ಕಾಣಿಸುತ್ತಾರೆ. ಬಿಜೆಪಿ ಅಂತಹ ಸಂಸ್ಕೃತಿಯನ್ನು ಸಹಿಸುವುದಿಲ್ಲ. ಹಾಗಾಗಿ ನಮ್ಮ ಜೊತೆಗೆ ಅತ್ಯಂತ ಪ್ರಾಮಾಣಿಕ ಕಾರ್ಯಕರ್ತರ ತಂಡ ನಿಂತು ಹಗಲಿರುಳು ಶ್ರಮಿಸಿದೆ ಎಂದರು.

ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಮಾತನಾಡಿ, ಓರ್ವ ನಿಷ್ಠಾವಂತ ಮೇರು ವ್ಯಕ್ತಿತ್ವದ ರಾಜಕಾರಣಿಯ ಮುಂದೆ ಕಾಂಗ್ರೆಸ್‌ ಪಕ್ಷದ ಸುಳ್ಳು, ಸವಾಲುಗಳು ಯಾವುದು ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಆರಗ ಜ್ಞಾನೇಂದ್ರ ನಿದರ್ಶನವಾಗಿದ್ದಾರೆ. ಅಪ್ಪಟ ಮಲೆನಾಡಿನ ಗ್ರಾಮೀಣ ಸೊಗಡು, ಭಾಷೆ ಉಚ್ಚರಣೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಹೊಸನಗರ ಅಧ್ಯಕ್ಷ ಗಣಪತಿ ಬೆಳಗೋಡು, ಮುಖಂಡರಾದ ಆರ್. ಮದನ್, ನಾಗರಾಜ್ ಶೆಟ್ಟಿ, ಗೀತಾ ಶೆಟ್ಟಿ, ಮೋಹನ್ ಶೆಟ್ಟಿ, ರತ್ನಾಕರ್ ಹೆಗ್ಡೆ, ಹರಿಕೃಷ್ಣ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post