ಕಿಮ್ಮನೆಗೆ‌‌ ಕಾಂಗ್ರೆಸ್ ಟಿಕೆಟ್ ಫೈನಲ್

ಗ್ರೀನ್ ಸಿಗ್ನಲ್ ನೀಡಿದ ಡಿ.ಕೆ. ಶಿವಕುಮಾರ್
ಗಾಂಧಿ‌ ಭವನ ಕಾಂಗ್ರೆಸ್ ಕಚೇರಿಯಾಗಲಿದೆಯಾ...?

ಶನಿವಾರ ಕಿಮ್ಮನೆ ಹಾಗೂ ಆರ್ ಎಂಎಂಗೆ ಬೆಂಗಳೂರಿಗೆ ಕರೆಸಿಕೊಂಡಿರುವ ಡಿ.ಕೆ. ಶಿವಕುಮಾರ್ ಇಬ್ಬರು ನಾಯಕರ ಪಕ್ಷಾಂತರಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಟಿಕೆಟ್ ಸಿಗದಿದ್ದರೆ ಮಾತೃಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಇಂಗೀತ ಹೊಂದಿದ್ದ ಇಬ್ಬರು ನಾಯಕರಿಗೆ ಬುದ್ದಿವಾದ ಹೇಳಿದ್ದಾರೆ ಎಂಬ ಮಾಹಿತಿ ಆಂತರಿಕವಾಗಿ ಎರಡೂ‌ ಬಣಗಳ ನಡುವಿನಿಂದ ಕೇಳಿ ಬಂದಿದೆ. ವಿವಿಧ ರಾಜಕೀಯ ಪಕ್ಷಗಳು ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಟಿಕೆಟ್ ನೀಡುವುದಕ್ಕೆ ಮುಂದಾಗಿದ್ದರು. ಆದರೀಗ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದ್ದು ಇಬ್ಬರು ಪಕ್ಷಾಂತರ ವಿಚಾರ ಕೈಬಿಟ್ಟಂತೆ ಕಾಣಿಸುತ್ತಿದ್ದು ಲಾಭದ ಲೆಕ್ಕಾಚಾರದಲ್ಲಿದ್ದವರಿಗೆ ಬಿಸಿ ತುಪ್ಪದಂತೆ ಅರಗಿಸಿಕೊಳ್ಳುವುದು ಕಷ್ಟವಾದಂತಿದೆ.

ಯಾರಿಗೂ ಕಮ್ಮಿ ಇಲ್ಲದಂತೆ ಒಬ್ಬರ ಮೇಲೆ ಒಬ್ಬರು ಪಕ್ಷಾಂತರಕ್ಕಾಗಿ ವಿವಿಧ ಪಕ್ಷಗಳ ಜೊತೆಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ರಾಜಧಾನಿಯಿಂದ ಪಿಸುಗುಡುತ್ತಿತ್ತು. ಆದರೀಗ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುತ್ತಿದ್ದಂತೆ ಬೆಂಗಳೂರಿಗೆ ಕರೆಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ತಣಿಸುವ ಜೊತೆಗೆ ಇಬ್ಬರಿಗೂ ಕೂಡ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರಂತೆ.‌ ಇಬ್ಬರ ಜಗಳದಿಂದ ಆರಗ ಜ್ಞಾನೇಂದ್ರರಿಗೆ ಲಾಭ ಆಗುವುದು ಬೇಡ ಎಂಬ ಗಟ್ಟಿ ನಿಲುವು ತೆಗೆದುಕೊಳ್ಳಿ. ಪಕ್ಷ ಅಧಿಕಾರಕ್ಕೆ ಬಂದ ನಂತರ ಇಬ್ಬರಿಗೂ ಉತ್ತಮ ಸ್ಥಾನ ಲಭಿಸಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.

ಇದರಿಂದ ಒಳಜಗಳ ಶಮನವಾಗಿದ್ದು ಆರಗ ವಿರುದ್ಧ ಕೆಲಸ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರ ಸಮ್ಮುಖದಲ್ಲಿ ಡಿಕೆಶಿ ಏನು ಹೇಳಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಬೆಂಗಳೂರಿಗೆ ತೆರಳಿದ್ದ 20 ಬೆಂಬಲಿಗರ ಪೈಕಿ ಯಾರೊಬ್ಬರಿಗೂ ಸರಿಯಾಗಿ ತಿಳಿದಿಲ್ಲ. ಇದರಿಂದ ತಮಗೆ ಬೇಕಾದದನ್ನು ಮಾತ್ರ ಹೇಳುತ್ತಿದ್ದರು. ಇದು ಕೂಡ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಮೂಲಗಳ ಪ್ರಕಾರ ಬಹುತೇಕ ಸೋಮವಾರ ಕಾಂಗ್ರೆಸ್ ಪಕ್ಷದ ಎರಡನೇ ಹಂತದ ಟಿಕೆಟ್ ಪ್ರಕಟಗೊಳ್ಳಲಿದೆ. ಬಹುತೇಕ ಕಿಮ್ಮನೆ ರತ್ನಾಕರ್ ಟಿಕೆಟ್ ಗಿಟ್ಟಿಸಿಕೊಳ್ಳಲಿದ್ದು‌ ಆರ್.ಎಂ. ಮಂಜುನಾಥ ಗೌಡ ಪರಿಷತ್ ಚುನಾವಣೆಯ ಅಭ್ಯರ್ಥಿಯಾಗಲಿದ್ದಾರೆ. ಕರ್ನಾಟಕ ಚುನಾವಣೆಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಂಜೆ ಸಂಧಾನ‌ದ ಮಾತುಕತೆ ನಡೆಸಿದ್ದು ಕ್ಷೇತ್ರದ ಜನರ ಅಭಿಪ್ರಾಯ. ಸರ್ವೆ ರಿಪೋರ್ಟ್ ಮುಂತಾದವುಗಳ ಬಗ್ಗೆಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ಮೆಟ್ರೋ ನಗರದಿಂದ ಟಿಕೆಟ್ ಗುಟ್ಟು ರಟ್ಟಾಗುತ್ತಿದ್ದಂತೆ ತೀರ್ಥಹಳ್ಳಿಯಲ್ಲಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಂತಿದೆ. ಇಷ್ಟು ದಿನ ಯಾರಿಗೆ ಮತ ಕೇಳಬೇಕು ಎಂಬ ಗೊಂದಲದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಸದ್ಯ ಈಗಲಾದರೂ ಚುನಾವಣೆಗಾಗಿ ಕೆಲಸ ಮಾಡಬಹುದು ಎಂಬ ಆತ್ಮ ವಿಶ್ವಾಸ ತೆಗೆದುಕೊಂಡಿದ್ದಾರೆ. ಅದಕ್ಕೆ ಸರಿ ಎಂಬಂತೆ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದ ಸಮೀಪ ಕಿಮ್ಮನೆ ರತ್ನಾಕರ್ ಅಭಿಮಾನಿಗಳ ಬಳಗ, ಸ್ನೇಹಿತರ ವಲಯ ನಿರ್ಮಿಸಿದ್ದ ಗಾಂಧಿ ಭವನಕ್ಕೆ ಹೊಸ ನಾಮಫಲಕ ಹಾಕುವುದಕ್ಕೆ ಸಿದ್ಧತೆ ನಡೆದಿದೆ. ಕಟ್ಟಡ ಪೂರ್ಣ ಸಿದ್ಧತೆಗೊಂಡಿದ್ದರು ಉದ್ಘಾಟನೆಗೆ ಸಮಯ ಸಿಕ್ಕಿಲ್ಲ. ಅತಿಥಿಗಳು ಬರುವುದಕ್ಕೆ ಆಗುತ್ತಿಲ್ಲ ಎಂಬ ಇಲ್ಲಸಲ್ಲದ ಸಬೂಬು ಕೇಳಿ ಬರುತ್ತಿತ್ತು. ಆದರೆ ಸಿಲಿಕಾನ್ ಸಿಟಿಯಿಂದ ಟಿಕೆಟ್ ಫೈನಲ್ ಆಗುತ್ತಿದ್ದಂತೆ ಕಾಂಗ್ರೆಸ್ ಕಚೇರಿಯಾಗಿ ಪೂರ್ಣ ಪ್ರಮಾಣದಲ್ಲಿ ಬದಲಾಗುವ ಕಾಲ ಸನ್ನಿಹಿತವಾದಂತಿದೆ. ಬೃಹತ್ ಗಾತ್ರದ ಪ್ಲೆಕ್ಸ್ ಹಾಕಲೆಂದೆ ಕಬ್ಬಿಣದ ಫ್ರೇಮ್ ಭವನದ ಮುಂಭಾಗ ತಲೆ ಎತ್ತಿ ನಿಂತಿದೆ.

ಕಾಂಗ್ರೆಸ್ ಟಿಕೆಟ್ ಪೈನಲ್ ಆಗುತ್ತಿದ್ದಂತೆ ಮಂಗಳವಾರ ಅಥವಾ ಬುಧವಾರ ಬಿಜೆಪಿ ಟಿಕೆಟ್ ಘೋಷಣೆಯಾಗಲಿದೆ. ಬಿಜೆಪಿಯ ಲೆಕ್ಕಾಚಾರದಂತೆ ಈ ಬಾರಿಯ ಟಿಕೆಟ್ ಹೊಸ ಅಭ್ಯರ್ಥಿಗೆ ನೀಡಿದರೆ ಕಿಮ್ಮನೆ ಗೆಲುವು ನಿರಾಯಾಸವಾಗಲಿದೆ. ಒಂದು ವೇಳೆ ಆರಗ-ಕಿಮ್ಮನೆ ನೇರ ಹಣಾಹಣಿಗೆ ಇಳಿದರೆ ಮತದಾರರು ಯಾರ ಪರವಾಗಿ ಒಲವು ಹೊಂದಿದ್ದಾರೆ ಎಂಬುದು ಕಾದು ನೋಡಬೇಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post