ಮೇ 2 ರಾಹುಲ್‌ ಗಾಂಧಿ ತೀರ್ಥಹಳ್ಳಿಗೆ

ಹೆಚ್ಚಿದ ಕಿಮ್ಮನೆ ಇಮೇಜ್‌
ಯುವ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ

ಗೃಹಸಚಿವ ಆರಗ ಜ್ಞಾನೇಂದ್ರ ಗೆಲುವಿನ ಓಟಕ್ಕೆ ತಡೆ ಒಡ್ಡುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ಗೆ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಮೇ 2 ರಂದು ತೀರ್ಥಹಳ್ಳಿಗೆ ಅಗಮಿಸಲಿರುವುದು ಕಾರ್ಯಕರ್ತರ ಸಂತೋಷಕ್ಕೆ ಕಾರಣವಾಗಿದೆ.

ಕಿಮ್ಮನೆ ರತ್ನಾಕರ ಕುರಿತು ವಿಶೇಷ ಆಸಕ್ತಿ ವಹಿಸಿರುವ ರಾಹುಲ್‌ ತಾವಾಗಿಯೇ ಪ್ರಚಾರಕ್ಕಾಗಿ ತೀರ್ಥಹಳ್ಳಿ ಕ್ಷೇತ್ರವನ್ನು ಆಯ್ದುಕೊಂಡಿರುವುದು ಮತ್ತು ಕನಿಷ್ಠ 3 ಗಂಟೆಗೂ ಹೆಚ್ಚಿನ ಕಾಲ ತೀರ್ಥಹಳ್ಳಿಯಲ್ಲಿ ಕಳೆಯಲಿರುವುದು ಪಕ್ಷದ ರಾಜ್ಯ ಮಟ್ಟದ ವ್ಯವಸ್ಥೆಯಲ್ಲೂ ಕಿಮ್ಮನೆ ರತ್ನಾಕರ್‌ ಅವರ ಮಿಸ್ಟರ್‌ ಕ್ಲೀನ್‌ ಇಮೇಜ್‌ಗೆ ಮತ್ತಷ್ಟು ಹೊಳಪು ನೀಡಿದೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

ಸದ್ಯ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ನಿರ್ಧಾರಗಳನ್ನು ಪ್ರಶ್ನಿಸುವ ಮೂಲಕ ಹಾಗೂ ಭಾರತ್‌ ಜೋಡೋ ಪಾದಯಾತ್ರೆಯ ಮೂಲಕ ರಾಷ್ಟ್ರಮಟ್ಟದ ಸೆನ್ಸೇಷನ್‌ ಆಗಿರುವ ರಾಹುಲ್‌ ಗಾಂಧಿ ಅವರ ಸಾರ್ವಜನಿಕ ಸಭೆಗಳು ಎಲ್ಲಾ ಕಡೆ ಭರ್ಜರಿ ಯಶಸ್ಸು ಕಾಣುತ್ತಿದೆ.

ತೀರ್ಥಹಳ್ಳಿಯಲ್ಲೂ ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ಕಿಮ್ಮನೆ ರತ್ನಾಕರ್‌ ನಡುವೆ ಅತ್ಯಂತ ನಿಕಟ ಸ್ಪರ್ಧೆ ಏರ್ಪಟ್ಟಿದೆ. ತನ್ನ ಎಂದಿನ ತಳಮಟ್ಟದ ಕಾರ್ಯಕರ್ತರ ನೆಟ್‌ವರ್ಕ್‌, ಇದೇ ಕಡೆಯ ಚುನಾವಣೆ ಎಂಬ ಘೋಷಣೆ ಜೊತೆಗೆ ಗೃಹಮಂತ್ರಿಯಾಗಿ ಸೋಲಕೂಡದು ಎಂಬ ಛಲದೊಂದಿಗೆ ಆರಗ ಜ್ಞಾನೇಂದ್ರ ಒಂದು ಕ್ಷಣವೂ ವ್ಯರ್ಥ ಮಾಡದೆ ಪಕ್ಷದ ಕಾರ್ಯಕರ್ತರನ್ನು ನಾಚಿಸುವಂತೆ ಎಡಬಿಡದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತ ಕಿಮ್ಮನೆ ರತ್ನಾಕರ್‌ ಕೂಡ ಕಡೆಯ ಚುನಾವಣಾ ಸ್ಪರ್ಧೆ ಎಂದು ಮೊದಲೇ ಘೋಷಿಸಿದ್ದು ಹಿಂದೆಂದಿಗಿಂತಲೂ ಬಲಾಢ್ಯರಾಗಿರುವ ಆರಗ ಜ್ಞಾನೇಂದ್ರರೆದುರು ಪರಿಣಾಮಕಾರಿಯಾಗಿ ಪ್ರಚಾರ ತಂತ್ರ ರೂಪಿಸಲು ಶ್ರಮಿಸುತ್ತಿದ್ದಾರೆ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಹಿಯುಳ್ಳ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಗ್ರಾಮೀಣ ಪ್ರದೇಶದ ಜನತೆ ಆಸಕ್ತಿಯಿಂದ ಗಮನಿಸುವಂತೆ ಮಾಡಿದೆ ಅಲ್ಲದೇ ಅವರನ್ನು ಸ್ಪರ್ಧೆ ವಿಚಾರದಲ್ಲಿ ಸರಿ ಸಮಾನ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಆಗಮನ ವಿಶೇಷವಾಗಿ ಕಾಂಗ್ರೆಸ್‌ ಯುವ ಕಾರ್ಯಕರ್ತರಲ್ಲಿ ವಿದ್ಯುತ್‌ ಸಂಚಾರ ಮೂಡಿಸಿದ್ದು ಈ ತೀವ್ರ ಹಣಾಹಣಿಯಲ್ಲಿ ಕಿಮ್ಮನೆ ರತ್ನಾಕರ್‌ ಅವರಿಗೆ ಮುನ್ನಡೆ ದೊರಕಿಸಿಕೊಡಲು ಸಹಾಯಕವಾಗಲಿದೆ ಎಂಬ ಅಭಿಪ್ರಾಯಗಳು ಹರಿದಾಡುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post