ಬಣ್ಣದ ಮಾತನಾಡಿ ಯಾಮಾರಿಸುತ್ತಾರೆ ಎಚ್ಚರ

ಬಡ ಮಕ್ಕಳ ಶಿಕ್ಷಣದ ಅಗತ್ಯ ಕಿಮ್ಮನೆಗೆ ಗೊತ್ತಿಲ್ಲ
ಅಮ್ಮನ ಕಷ್ಟ ನೆನೆದ ಆರಗ ಜ್ಞಾನೇಂದ್ರ
ಸುಟ್ಟ ಕಡಬು ತಿಂದ ಬಡವರ ನೋವು ಅರ್ಥವಾಗುತ್ತದೆ -ಆರಗ

ತಟ್ಟಿ ಗೊರಬಲು ಹೊತ್ತಿಕೊಂಡು ಗದ್ದೆ ನಾಟಿ ಮಾಡಲು ನಾನು ಮತ್ತು ನನ್ನ ಪುಟ್ಟ ತಂಗಿಯನ್ನು ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಮ್ಮನಿಗೆ ಮಧ್ಯಾಹ್ನ ಊಟದ ಸಂದರ್ಭ ನೀಡುತ್ತಿದ್ದ ಕಡಬನ್ನು ನಮಗಾಗಿ ಉಳಿಸಿಕೊಂಡು ಬರುತ್ತಿದ್ದರು. ನಾನು, ತಂಗಿ ಇಬ್ಬರು ಹಸಿವಿನಿಂದ ಅಮ್ಮನ ಬರಿವಿಕೆಗಾಗಿ ಕಾಯುತ್ತಿದ್ದೆವು. ಅಮ್ಮ ಕೈಯಲ್ಲಿ ಬುತ್ತಿ ಹಿಡಿದುಕೊಂಡು ಬಂದಾಗ ಅದರ ಸಂತೋಷವೇ ಬೇರೆ ಇತ್ತು. ಇಬ್ಬರಿಗೂ ಬೆಂಕಿಯ ಕೆಂಡದಲ್ಲಿ ಕಡಬು ಸುಟ್ಟು ಬಿಸಿ ಮಾಡಿ ಕೊಡುತ್ತಿದ್ದರು. ಸುಟ್ಟ ಕಡುಬು ತಿಂದ ಬಡವರ ನೋವು ನನಗೆ ಅರ್ಥವಾಗುತ್ತದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅಮ್ಮನ ಕಷ್ಟದ ದಿನಗಳನ್ನು ನೆನೆದರು.

ಮುಳುಬಾಗಿಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಶ್ರೀ ಭೀಮೇಶ್ವರ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವ-ಸಹಾಯ ಸಂಘಗಳ ಸಮುದಾಯ ಭವನ ಉದ್ಘಾಟಿಸಿ ಆರಗ ಮಾತನಾಡಿ, ಶ್ರೀಮಂತ ವರ್ಗದ ರಾಜಕಾರಣಿಗಳಿಗೆ ಬಡತನದ ನೋವು ಅರ್ಥವಾಗುವುದಿಲ್ಲ. ಸಾರ್ವಜನಿಕರ ಮುಂದೆ ಬಣ್ಣದ ಮಾತನಾಡಿ ಯಾಮಾರಿಸುತ್ತಾರೆ. ಬಡತನ ಕಷ್ಟದ ನೋವುಂಡ ನನಗೆ ಬಡ ಮಕ್ಕಳ ಶಿಕ್ಷಣದ ಅಗತ್ಯ ತಿಳಿದಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಪರೋಕ್ಷವಾಗಿ ಕಿಮ್ಮನೆ ವಿರುದ್ಧ ಹರಿಹಾಯ್ದರು.

ಮಲೆನಾಡು ಭಾಗದಲ್ಲಿ ಕಾಲುಸೇತುವೆ ಪರಿಕಲ್ಪನೆ ತಂದಿದ್ದೇ ನಾನು. ಕೆಂದಾಳಬೈಲು ಬಾಲಕಿ ಆಶಿಕಾ ಸಾವಿನಿಂದ ಮನನೊಂದು ಘಟನೆ ನಡೆದ ದಿನವೇ ವಿಧಾನಸಭೆಯಲ್ಲಿ ಧ್ವನಿ ಎತ್ತಿ 100 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಪ್ರಸ್ತುತ ಸಾಲಿನಲ್ಲಿ ಕಾಲುಸಂಕ ನಿರ್ಮಾಣಕ್ಕೆ ಬಸವರಾಜ ಬೊಮ್ಮಾಯಿ 250 ಕೋಟಿ ಮೀಸಲಿಟ್ಟಿದ್ದಾರೆ ಎಂದು ಹೇಳಿದರು.

ಬಡತನದ ಕಾರಣ 7ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದ ನನಗೆ ತಾರಗೊಳಿಗೆ ನಾಗರಾಜ ರಾಯರು ಪದವಿ ಓದಿಸಿದರು. ಸಾರ್ವಜನಿಕ ಜೀವನ ಪ್ರವೇಶ ಮಾಡಿದ ನನಗೆ ಶಾಸಕ, ಸಚಿವನಾಗುವ ಅವಕಾಶ ಸಿಕ್ಕಿದ್ದು ಜೀವನದ ದೊಡ್ಡ ಪವಾಡ. ಹಾಗಾಗಿ ಸಾಧ್ಯವಾದಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಹಂಬಲದಿಂದ ಕ್ಷೇತ್ರದಾದ್ಯಂತ ಶಾಲಾ-ಕಾಲೇಜುಗಳನ್ನು ನಿರ್ಮಾಣ ಮಾಡಿಸಿದ್ದೇನೆ ಎಂದರು.

ಕೀಳರಿಮೆ ಬಿಟ್ಟು ಮಹಿಳೆಯರು ಸ್ವಾವಲಂಬಿ ಜೀವನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಕೇಂದ್ರ, ರಾಜ್ಯ ಸರ್ಕಾರ ಮಹಿಳೆಯರಿಗೆ ಯೋಜನೆಗಳನ್ನು ನೀಡಿದ್ದಾರೆ. ಮಹಿಳಾ ಒಕ್ಕೂಟಗಳಿಗೆ ರಿಯಾಯಿತಿ ದರದಲ್ಲಿ ಸಾಲವನ್ನು ವಿತರಿಸಲು ಅವಕಾಶ ಮಾಡಿದ್ದೇನೆ ಎಂದರು.

ಗೃಹಸಚಿವರ ಕಾರ್ಯಬಾರದ ನಡುವೆ ಸರಳ ಸಜ್ಜನಿಕೆಯಿಂದ ಜನತಾದರ್ಶನ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಪಾಲಿಗೆ ದೇವರಾಗಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹20 ಕೋಟಿಗೂ ಹೆಚ್ಚಿನ ಕಾಮಗಾರಿ ಮಂಜೂರು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.‌ ಮೋಹನ್‌ ಹೇಳಿದರು.

ವೇದಿಕೆಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಶೀಲ ಶೆಟ್ಟಿ, ಉಪಾಧ್ಯಕ್ಷೆ ಛಾಯಾ ಅಶೋಕ್, ಸದಸ್ಯರಾದ ರೇಖಾ, ಮಂಜುನಾಥ, ದಾಕ್ಷಾಯಣಿ, ಸಂಧ್ಯಾ, ಶಾರದ, ವಿನುತ, ಸಚಿನ್, ತ್ರಿಯಂಬಕಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಜೆ. ಅನಿಲ್, ಇಒ ಶೈಲಾ ಎನ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post