ಮಾರ್ಚ್‌ 7ರಂದು ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ

ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಪಿಡಿಓ ಸರಿತಾ ಹಲ್ಲೆ
ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆರೋಪ
ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಗೆ ಕಿಮ್ಮನೆ ಪತ್ರ

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಪಿಡಿಓ ಸರಿತಾ ಹಲ್ಲೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಇಲಾಖಾ ಮೇಲಧಿಕಾರಿಗಳಿಗೆ, ಪೋಲಿಸರಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ದಿನಾಂಕ: 30-01-2023ರಂದು ಮೇಲಿನಕುರುವಳ್ಳಿ ಗ್ರಾಮಪಂಚಾಯತ್‌ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲಾಧಿಕಾರಿಗಳ ಸಮ್ಮುಖದಲ್ಲಿ ನೇರವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸರಿತಾ ಯಾವುದೇ ಸಕಾರಣಗಳಿಲ್ಲದೆ ತಾನು ದಲಿತ ಮಹಿಳೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವರು ಮತ್ತು ಬಿಜೆಪಿ ಪುಂಡರ ಬೆಂಬಲ ಮತ್ತು ಮಾರ್ಗದರ್ಶನದ ಮೇಲೆ ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಗ್ರಾಮಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮಪಂಚಾಯತ್‌ ಸದಸ್ಯರು ಯಾವುದೇ ಪ್ರತಿರೋಧವನ್ನು ಮಾಡದೇ ಇರುವ ಕಾರಣ, ಸಚಿವರ ಮಾರ್ಗದರ್ಶನದಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಬಳಸಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಒಂಬತ್ತು ಸದಸ್ಯರನ್ನು ಜೈಲಿಗೆ ಕಳುಹಿಸುವ ಉದ್ದೇಶ ಹೊಂದಿದ್ದು, ಸದರಿ ಕಾರಣಕ್ಕಾಗಿ ಪ್ರತಿರೋಧ ತೋರಿರುವುದಿಲ್ಲ.

ವಾಸ್ತವದಲ್ಲಿ ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಪಿಡಿಓ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸುವ ಅನಿವಾರ್ಯತೆ ಇದ್ದು ಮತ್ತು ಅವರಿಗೆ ಸಹಕರಿಸಿದ ಬಿಜೆಪಿ ಬೆಂಬಲಿತ ಸದಸ್ಯರ ಸದಸ್ಯತ್ವ ರದ್ದು ಮಾಡಲು ಶಿಫಾರಸ್ಸು ಮಾಡಬೇಕಾಗಿತ್ತು. ಸದರಿ ವಿಫಲತೆಯ ವಿರುದ್ಧ ಗ್ರಾಮಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಇತರೆ ಗ್ರಾಮ ಪಂಚಾಯತ್ ಸದಸ್ಯರು ಹಲವಾರು ಮನವಿಗಳನ್ನು, ಪ್ರತಿಭಟನೆಯನ್ನು ದಾಖಲಿಸಿದ್ದರು ಕೂಡಾ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇವರನ್ನು ಈ ಕೂಡಲೆ ಅಮಾನತ್ತು ಮಾಡಿ ತನಿಖೆಗೆ ಒಳಪಡಿಸಿ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಳಿಸಬೇಕಾಗಿ ಆಗ್ರಹಿಸಿದೆ.

ತಮಗೆ ತಿಳಿದಂತೆ ಮೇಲ್ಕಂಡ ಘಟನೆ ಪ್ರಥಮ ಘಟನೆಯೇನಲ್ಲಾ, ಈ ಹಿಂದೆ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಸಾಮಾನ್ಯ ಸಭೆಯಲ್ಲಿ ಗ್ರಾಮಪಂಚಾಯತ್‌ ಮಹಿಳಾ ಸದಸ್ಯರಾದ ವಿಶಾಲಾಕ್ಷಿ ಪ್ರಮಲ್ಲಚಂದ್ರ ಇವರ ಮೇಲೆ ಹಲ್ಲೆ ನಡೆಸಿರುತ್ತಾರೆ. ಅಂತೆಯೇ ಮತ್ತೊಮ್ಮೆ ಕೋಣಂದೂರು ಗ್ರಾಮ ಪಂಚಾಯತ್‌ ಸದಸ್ಯರು ಕಾಂಗ್ರೆಸ್‌ ಬೆಂಬಲಿತ ಸದಸ್ಯರಾದ ಸುರೇಶ್ ಮೇಲೂ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಹಲ್ಲೆ ನಡೆಸಿರುತ್ತಾರೆ. ಮೇಲ್ಕಂಡ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ಲಿಖಿತ ದೂರುಗಳು, ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಗಳು, ಮೊಬೈಲ್‌ನಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ್ದರು. ಯಾವುದೇ ಕ್ರಮಕೈಗೊಂಡಿರುವುದಿಲ್ಲಾ. ಈ ಎಲ್ಲಾ ಮೇಲ್ಕಂಡ ಘಟನೆಗಳ ಹಿಂದೆ ಗೃಹ ಸಚಿವರ ನೈತಿಕ ಬೆಂಬಲ ಗೂಂಡಾ ವರ್ತನೆಗಳಿಗೆ ಕಾರಣವಾಗಿದೆ.

ತಮಗೆ ತಿಳಿದಂತೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳು ಏನೇ ಕ್ರಿಮಿನಲ್ ವರ್ತನೆಗಳನ್ನು ಮಾಡಿದರೂ ಕೇಸ್‌ಗಳು ದಾಖಲಾಗುವುದಿಲ್ಲ. ಇದು ತೀರ್ಥಹಳ್ಳಿ ಕ್ಷೇತ್ರದ ದುರಂತವಾಗಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ನೊಣಬೂರು ಶೂಟ್ ಔಟ್, ನೆಗಿಲೋಣಿ ಶೂಟ್ ಔಟ್ ಪ್ರಕರಣಗಳು, ನೊಣಬೂರು ಪಂಚಾಯತ್‌ನ ಮೂಡ್ಲಿ ಹಲ್ಲೆ ಪ್ರಕರಣ, ಗುಡ್ಡೆಕೊಪ್ಪ ಗ್ರಾಮ ಪಂಚಾಯತ್‌ನ ಆಗಸಾಡಿ ಕೊಲೆ ಪ್ರಕರಣ, ಹೊಸನಗರದ ತ್ರಿವೇಣಿ ಇಟ್ಟಕ್ಕಿಯಲ್ಲಿ ನಡೆದ ದೌರ್ಜನ್ಯ ಪ್ರಕರಣ, ಮೇಲಿನ ಕುರುವಳ್ಳಿಯಲ್ಲಿ ನಡೆದ ಹಲ್ಲೆ ಪ್ರಕರಣ ಇಂತಹ ಹಲವು ಪ್ರಕರಣಗಳಲ್ಲಿ ಅಪರಾಧಿಗಳಾಗಿರುವ ಬಿಜೆಪಿಯ ಮುಖಂಡರನ್ನು ಕೈ ಬಿಟ್ಟಿರುವುದು, ಮೇಲಿನಕುರುವಳ್ಳಿ ಬಂಡೆ ಕಾರ್ಮಿಕರನ್ನು (1500 ಕ್ಕೂ ಹೆಚ್ಚು) ಒಕ್ಕಲೆಬ್ಬಿಸಲು ಹುನ್ನಾರ ನಡೆಸಿರುವುದು, ಕೆಲ ಪ್ರಕಣರಣಗಳಲ್ಲಿ ನಿರಪರಾಧಿ ಕಾಂಗ್ರೆಸ್‌ ಕಾರ್ಯಕರ್ತರ ಹೆಸರನ್ನು ಸೇರಿಸಿರುವುದು ಪೋಲಿಸ್ ಇಲಾಖೆ ಕೆಲವರ ಹಿತಾಸಕ್ತಿಗೆ ಅಡಿಯಾಳಾಗಿ ವರ್ತಿಸುತ್ತಿದ್ದು, ನ್ಯಾಯ ಪಡೆಯಲು ವಿಫಲವಾಗಿದ್ದು ಪ್ರತಿಭಟನೆಯ ಮೂಲಕವೇ ನ್ಯಾಯಕ್ಕೆ ಆಗ್ರಹಿಸುವ ಅನಿವಾರ್ಯತೆ ಬಂದೊದಗಿದೆ. ಮೇಲ್ಕಂಡ ವಿಷಯಗಳ ಬಗ್ಗೆ ನಾನು ಹತ್ತಾರು ಬಾರಿ ಮೌಖಿಕವಾಗಿ, ಲಿಖಿತವಾಗಿ ನ್ಯಾಯಕ್ಕಾಗಿ ಮನವಿ ಮಾಡಿದರು ಯಾವುದೂ ಫಲಪ್ರದವಾಗಿಲ್ಲ.

ಮೇಲ್ಕಂಡ ಕಾರಣಗಳಿಗಾಗಿ ನಾನು ದಿನಾಂಕ: 7-3-2023 ರ ಮಂಗಳವಾರ ಬೆಳಿಗ್ಗೆ ಹನ್ನೊಂದು ಘಂಟೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತೇನೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದ ಪ್ರತಿಗಳನ್ನು ಕಳುಹಿಸಿರುವುದು ಪತ್ರಿಕಾ ಪ್ರಕಟಣೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತಿಳಿಸಿರುತ್ತಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post