ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಕೀಳು ಮಟ್ಟಕ್ಕೆ ಇಳಿದಿದ್ದಾರೆ

2004ರಲ್ಲಿ ನೀವು (ಕಿಮ್ಮನೆ) ಎಷ್ಟಕ್ಕೆ ಡೀಲ್‌ ಆಗಿದ್ರಿ….
ಸುಧಾಕರ್‌ ಪುಗಸಟ್ಟೆ ಬಂದಿಲ್ಲ……
ಸಾಯೋತನಕ ಗುಮ್ಮಿ ನೀರು ಕುಡಿತಲೇ ಇರಬೇಕೇ, ನೀವು ಚಿನ್ನದ ಚಮಚದಲ್ಲಿ ತಿಂತಿರಿ – ಆರಗ
ರಾಜೀನಾಮೆ ನೀಡಿ 3 ತಿಂಗಳಾದ್ರು ಕಿಮ್ಮನೆ ಮಾತಾಡಿಸಿಲ್ಲ – ಹೊಸಹಳ್ಳಿ ಸುಧಾಕರ್

ನಾನು ತಾಲ್ಲೂಕು ಪಂಚಾಯಿತಿ ಸದಸ್ಯ, ಉಪಾಧ್ಯಕ್ಷನಾಗಿದ್ದ ಸಂದರ್ಭ ಪ್ರಾಮಾಣಿಕವಾಗಿ ಬದುಕಿದ್ದೇನೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನಸಾಮಾನ್ಯರ ಕೆಲಸ ಮಾಡಿದ್ದೇನೆ. ಯಾರಿದಂಲೂ ಒಂದು ನಯಾಪೈಸೆ ಪಡೆದಿಲ್ಲ. ಮತ್ತೆ ಫೋನ್‌ ಮಾಡುತ್ತೇನೆ ಎನ್ನುವವರು ಅವರ ಫೋನ್‌ ನಂಬರ್‌ ಇಲ್ಲ ಅಂತಾರೆ. ಕಳೆದ 5 ವರ್ಷಗಳಿಂದ ಕಿಮ್ಮನೆ ರತ್ನಾಕರ್‌ ಮಾತಾಡಿಸಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಎರಡೂವರೆ ತಿಂಗಳಾದ್ರು ಯಾಕೆ ರಾಜೀನಾಮೆ ಕೊಟ್ಟಿದ್ದೀರಿ ಎಂದು ಕೇಳುವವರಿಲ್ಲ. ಸುದ್ದಿಯಾದ ಬಳಿಕ ಹೋಗಬೇಡಿ ಅಂತ ಸಾಕಷ್ಟು ಫೋನ್‌ ಬಂದಿದೆ. ದೇಶ ಗಟ್ಟಿ ಉಳಿಯಲು ಬಿಜೆಪಿಯಿಂದ ಮಾತ್ರ ಸಾಧ್ಯ ಅಂತ ಸೇರಿದ್ದೇನೆ. ಚುನಾವಣೆಗೆ ನಿಲ್ಲುತ್ತೇನೆ ಎಂಬ ಆಸೆ ಇಲ್ಲದೆ ತ್ಯಾಗಕ್ಕಾಗಿ ಬಿಜೆಪಿಗೆ ಸೇರಿದ್ದೇನೆ ಎಂದು ನೂತನವಾಗಿ ಬಿಜೆಪಿಗೆ ಸೇರಿದ ಹೊಸಹಳ್ಳಿ ಸುಧಾಕರ್‌ ಹೇಳಿದರು.

ಜನರು ಸಾವಿರ ಮಾತನಾಡಿದರು ತೊಂದರೆ ಇಲ್ಲ ನಮ್ಮ ನಾಯಕರ ಬಗ್ಗೆ ವಿಶ್ವಾಸ, ನಂಬಿಕೆ ಇದೆ. ನಿಮ್ಮ ಆರೋಪದ ಮೇಲೆ ಹೇಸಿಗೆ ಅನ್ನಿಸುತ್ತೆ. 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಬೇಕಿದ್ದ ನೀವು ದೇವೇಗೌಡರನ್ನು ಹಳ್ಳಿಹಳ್ಳಿಯಲ್ಲಿ ಓಡಾಡಿಸಿ ನಾಲ್ಕು ದಿನದಲ್ಲಿ ಕಾಂಗ್ರೆಸ್‌ಗೆ ಓಡಿಹೋಗಿದ್ದೀರಾ. ಆಗ ಕಾರ್ಯಕರ್ತರ ಬಗ್ಗೆ ನೀವು ಯೋಚನೆ ಮಾಡಿದ್ರಾ. ಅಂದು ನೀವು ಎಷ್ಟು ಕೋಟಿ ತೆಗೆದುಕೊಂಡಿದ್ದೀರಿ… ಮಂತ್ರಿಯಾಗಿ ಮರಳು ಮಾಫಿಯಾ ಪರವಾಗಿ ಅಡಿಷನಲ್‌ ಎಸ್ಪಿ ಎದುರು ಧರಣಿ ನಡೆಸಿದ್ದು ಯಾಕೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದುವಳ್ಳಿ ಸೋಮಶೇಖರ್ ಪ್ರಶ್ನಿಸಿದರು.

ಯಾವನಿಗೂ ನಮ್ಮ ಮನೆಯಲ್ಲಿ ದುಡ್ಡು ಎಣಿಸುವ ಧೈರ್ಯ ಬಂದಿಲ್ಲ. ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಗುಜರಾತಿಗೆ ಹೋಗಿ ಸಾಕ್ಷಿನಾಶ ಮಾಡಿದ್ರು ಅಂತ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ನನ್ನನ್ನು ರಾಜಕೀಯವಾಗಿ ಮುಗಿಸುವ ಪಿತೂರಿ ನಡೆಸುತ್ತಿದ್ದಾರೆ. ಮಾಜಿ ಸಚಿವರು ಪತ್ರಿಕಾಗೋಷ್ಟಿಯಲ್ಲಿ ಏಕವಚನದಲ್ಲಿ ಬಹಳ ಮಾತನಾಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರೇ ಫೋನ್‌ ಮಾಡಿ ಏನಣ್ಣ ಇದು ಕಿಮ್ಮನೆ ಮೈಯೆಲ್ಲಾ ವಿಷ ತುಂಬಿಕೊಂಡಿದ್ದಾರೆ ಎಂದು ಬೇಸರಿಸುತ್ತಾರೆ. ನಮ್ಮ ನಾಲಿಗೆ ನಮ್ಮ ಕುಲವನ್ನು ಹೇಳುತ್ತೆ. ನನ್ನ ಸಂಸ್ಕೃತಿ ಮನೆತನದ ಗುಣಧರ್ಮವನ್ನು ತೋರಿಸುತ್ತೆ. ನನ್ನ ಚಾರಿತ್ರ್ಯವಧೆ ಪಿತೂರಿ ಮಾಡುತ್ತಿದ್ದು ನನಗೇನೂ ಆಗುವುದಿಲ್ಲ ಎಂದು ಹೆಚ್‌.ಡಿ. ಕುಮಾರಸ್ವಾಮಿ, ಕಿಮ್ಮನೆ ರತ್ನಾಕರ್‌ ಹೆಸರು ಹೇಳದೆ ಭಾನುವಾರ ಪಟ್ಟಣದ ಬಂಟರ ಭವನದಲ್ಲಿ ಕಾಂಗ್ರೆಸ್‌ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಆರಗ ಜ್ಞಾನೇಂದ್ರ ಹರಿಹಾಯ್ದರು.

ಪರೀಕ್ಷೆಯೇ ಬರೆಯದೆ ನೇಮಕಗೊಂಡ ಶಿಕ್ಷಕರ ಹಗರಣ ಸಿಓಡಿ ತನಿಖೆಯಿಂದ ಬಹಿರಂಗಗೊಂಡಿದೆ. ತೀರ್ಥಹಳ್ಳಿಯ ಆರ್‌ಎಂಎಸ್‌ಎ (ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ಕಟ್ಟಡದ ಗುತ್ತಿಗೆದಾರ ಆಂದ್ರಪ್ರದೇಶಕ್ಕೆ ಓಡಿಹೋಗಿದ್ದ. ನನ್ನ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಿದ್ದೇನೆ. ನಿಮ್ಮ ಹೊಲಸು ತೊಳೆಯುತ್ತಿದ್ದೇನೆ. ಅದೊಂದು ಕಾಲದಲ್ಲಿ ಸಾಲೂರು ಭಾಗದಲ್ಲಿ ಬಡವರ ಮಕ್ಕಳು ಒಳ್ಳೆ ಶರ್ಟ್‌ ಹಾಕಿದ್ರೆ ಕಳ್ಳ ನನ್‌ ಮಗ ಗಂಧ ಕದ್ದಿದ್ದಾನೆ ಅಂತಿದ್ರು. ಅಂದು ಬಡವರ ಕಥೆ ದುಸ್ಥಿತಿಗೆ ತಲುಪಿತ್ತು. ನಿಮ್ಮ ಪ್ರಕಾರ ಬಡವರ ಮಕ್ಕಳು ಸಾಯುವ ತನಕ ಗುಮ್ಮಿನೀರು ಕುಡಿತಲೇ ಇರಬೇಕೇ ಎಂದು ಆರಗ ಪ್ರಶ್ನಿಸಿದರು.

ಸುಧಾಕರ್‌ ಪಕ್ಷಕ್ಕೆ ಪುಗಸಟ್ಟೆ ಬಂದಿಲ್ಲ. ಕಳೆದ ಎರಡೂವರೆ ವರ್ಷದ ಅಭಿವೃದ್ಧಿಯನ್ನು ಗಮನಿಸಿ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ. ಇಲ್ಲಿಯವರೆಗೆ ತೀರ್ಥಹಳ್ಳಿ ಅಭಿವೃದ್ಧಿಗೆ 2700 ಕೋಟಿ ಹಣ ತಂದಿದ್ದೇನೆ. ಪಕ್ಷಾಂತರ ಒಳ್ಳೆಯದಲ್ಲ ಎಂದು ಹೇಳುವ ನೀವು ಯಾವ ಪಕ್ಷದಲ್ಲಿ ಇದ್ರಿ. 2004ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಲು ಎಷ್ಟು ಕೋಟಿಗೆ ಡೀಲ್‌ ಆಗಿದ್ರಿ. ಬಿಜೆಪಿ ಸಿದ್ದಾಂತ ಒಪ್ಪಿ ಬರುವವರಿಗೆ 10 ರಿಂದ 15 ಲಕ್ಷ ಅವರೇ ಫಿಕ್ಸ್‌ ಮಾಡಿದ್ದಾರೆ. ಕಾರ್ಯಕರ್ತರನ್ನು ಒಂದೊಂದು ಇಟ್ಟಿಗೆಯ ರೀತಿ ಜೋಡಿಸಿ ಪಕ್ಷ ಕಟ್ಟಿದ್ದೇವೆ. ಮೂಗು ಮುರಿಯುವವರು, ಲಗುವಾಗಿ ಮಾತನಾಡುವವರು ಎಚ್ಚರಿಕೆ ವಹಿಸಬೇಕು. ಪಕ್ಷ ಸೇರ್ಪಡೆ ಕೇವಲ ಬೋಣಿಗೆ ಅಷ್ಟೇ. ಇನ್ನು ಸ್ವಲ್ಪದಿನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಬಿಜೆಪಿಗೆ ಇನ್ನಷ್ಟು ಬರಲಿದ್ದಾರೆ ಎಂದರು.

ಅವ ಯಾವನ್ರಿ ಸ್ಯಾಂಟ್ರೋ, ಇನೋವಾ…

ನಿಮ್ಮ ಪ್ರೀತಿ, ವಿಶ್ವಾಸದಿಂದ ನನ್ನ ಮನೆಯಲ್ಲಿ ನಾನು ಊಟ ಮಾಡಿದ್ದು ಬಹಳ ಕಡಿಮೆ. ಮಂತ್ರಿಯಾದಾಗ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಸಂತೋಷ, ಖುಷಿ ಪಟ್ಟಿದ್ದೀರಿ. ಹಾಗಾಗಿ ನಿಮ್ಮ ಮೇಲೆ ಅಪಾರ ನಂಬಿಕೆ ಇದೆ. ನನ್ನ ಮನೆಗೆ ದಿನನಿತ್ಯ ಸಾವಿರಾರು ಜನ ಬರುತ್ತಾರೆ. ಫೋಟೊ ತೆಗಿಸ್ತಾರೆ. ಇವ ಯಾವನ್ರಿ ಸ್ಯಾಂಟ್ರೋ, ಇನೋವಾ ಅವನು ಬಂದರೆ ಗುರುತು ಹಿಡಿಯೋದಕ್ಕೂ ನನಗೆ ಸಾಧ್ಯವಿಲ್ಲ. ಐದಾರು ಜನ ಬಂದಿರುತ್ತಾರೆ. ಅವನೊಬ್ಬನ ಫೋಟೊ ಮಾತ್ರ ಹಾಕಿದ್ದಾರೆ. ಗುಜರಾತ್‌ನಲ್ಲಿ ಸರ್ಕಾರದ ಕೆಲಸಕ್ಕೆ ಹೋಗಿದ್ದು ಮಿನಿಟ್‌ ಟು ಮಿನಿಟ್‌ ದಾಖಲೆ ಸಾರ್ವಜನಿಕರಿಗೆ ಲಭ್ಯವಿದೆ. ಪಿಂಪ್‌ ಅಲ್ಲೇ ಸಿಕ್ಕಿದ್ದು ಕಾಕತಾಳಿಯ. ಪ್ರಕರಣ ಮುಚ್ಚುವಂತಿದ್ದರೆ ನಾನು ಹಿಡಿಸುತ್ತಲೇ ಇರಲಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್‌, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್‌, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ, ಕವಿರಾಜ್‌ ಬೇಗುವಳ್ಳಿ, ಕಾಸರವಳ್ಳಿ ಶ್ರೀನಿವಾಸ್‌, ಚಂದವಳ್ಳಿ ಸೋಮಶೇಖರ್‌, ಪ್ರಶಾಂತ್‌ ಕುಕ್ಕೆ, ಚಕ್ಕೋಡಬೈಲು ರಾಘವೇಂದ್ರ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post