ಕಾಂಗ್ರೆಸ್‌ ಸರ್ಕಾರಗಳು ನೀಡಿದ ಭೂ ಹಕ್ಕನ್ನು ಬಿಜೆಪಿ ಸರ್ಕಾರ ಕಸಿಯುತ್ತಿದೆ

ಬಿಜೆಪಿ ರೈತ ವಿರೋಧಿ
ಅಡಿಕೆ ಎಲೆಚುಕ್ಕಿ ರೋಗದ ಕುರಿತು ಆರಗ ನಿರ್ಲಕ್ಷ್ಯ ಏಕೆ
ಒಂದು ಅಂಗುಲ ಭೂಮಿ ಬಡವರಿಗೆ ನೀಡಿಲ್ಲ - ಆರ್‌ಎಂಎಂ

ಮುಳುಗಡೆ ಹಾಗೂ ಬಗರ್‌ ಹುಕುಂ ಸಂತ್ರಸ್ತರು ಯಾವ ಕಾರಣಕ್ಕೂ ಭೂಮಿ ಪಡೆಯಬಾರದು ಎಂದು ಈಗಿನ ಕೇಂದ್ರ ಹಾಗೂ ಬಿಜೆಪಿ ಸರ್ಕಾರ ಪಣ ತೊಟ್ಟಂತಿದೆ. ಕಳೆದ 60 ವರ್ಷಗಳಿಂದ ಚಕ್ರ, ವರಾಹಿ, ಸಾವೇಹಕ್ಲು, ಭದ್ರಾ ಮುಳುಗಡೆ ಸಂತ್ರಸ್ತರು ತಾವು ಕಳೆದುಕೊಂಡ ಸಾಗುವಳಿ ಭೂಮಿಗಳಿಗೆ ಪರಿಹಾರವಿಲ್ಲದೆ ಪರದಾಡುತ್ತಿದ್ದಾರೆ. ಈಗ ಅರಣ್ಯ ಕಾಯ್ದೆ ಕಾನೂನಿನ ಹೆಸರನ್ನು ಅವರನ್ನು ಒಕ್ಕಲೆಬ್ಬಿಸುವ ಕೆಲಸ ಸಾಗಿದೆ. ಸ್ವತಃ ಮುಖ್ಯಮಂತ್ರಿಗಳೆ ಸಾಗುವಳಿಗೆ ಒಳಗಾಗಿರುವ 42,104.09 ಹೆಕ್ಟರ್‌ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸಿ ಎಂಬ ಆದೇಶ ನೀಡಲಾಗಿದೆ ಎಂದು ವಿಧಾನಪರಿಷತ್ತಿನಲ್ಲಿ ಸೆಪ್ಟಂಬರ್‌ 20, 2020ರಲ್ಲಿ ಉತ್ತರ ನೀಡಿದ್ದಾರೆ.

ಒಂದು ವೇಳೆ ಉಚ್ಚ ನ್ಯಾಯಾಲಯದ ತೀರ್ಪು ಮುಳುಗಡೆ ಹಾಗೂ ಬಗರ್‌ಹುಕುಂ ಸಂತ್ರಸ್ತರ ವಿರುದ್ಧ ಬಂದರು ಮೇಲ್ಮನವಿ ಸಲ್ಲಿಸಲು ಹಾಗೂ ರಾಜ್ಯ ಸರ್ಕಾರದ ಅಡ್ವಕೇಟ್‌ ಜನರಲ್‌ ಸಮರ್ಥವಾಗಿ ವಾದ ಮಂಡಿಸಲು ಏನು ಸಮಸ್ಯೆ ಇದೆ. 2015ರಲ್ಲಿ ಮದನ್‌ ಗೋಪಾಲ್‌ ಸಮಿತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಸಹೃದಯತೆಯಿಂದ ಅಧ್ಯಯನ ಮಾಡಿದ ಕಾರಣ ಆ ವರದಿಯ ಮೇಲೆ 56 ಅಧಿಸೂಚನೆಗಳನ್ನು ಆಂದಿನ ರಾಜ್ಯ ಸರ್ಕಾರ ನೀಡಿತ್ತು. ಆದರೆ ಅದನ್ನು ಈಗಿನ ಬಿಜೆಪಿ ರಾಜ್ಯ ಸರ್ಕಾರ ರದ್ದುಪಡಿಸಿದೆ. ಆದರೆ ಹಾಗೆ ಮಾಡುವಾಗ ಜಿಲ್ಲ ಬಿಜೆಪಿಯ ಅತ್ಯಂತ ಪ್ರತಿಷ್ಠಿತ ಮುಖಂಡರ ಆಸ್ತಿ ಇದೆ ಎಂಬ ಕಾರಣಕ್ಕೆ ಎರಡು ಅಧಿಸೂಚನೆಗಳನ್ನು ರಾಜ್ಯ ಸರ್ಕಾರವೇ ಖುದ್ದು ಆಸಕ್ತಿ ವಹಿಸಿ ಉಳಿಸಿಕೊಳ್ಳುತ್ತದೆ. ಬಡವರಿಗೆ ಒಂದು ಬಲಾಡ್ಯರಿಗೆ ಒಂದು ಕಾನೂನು ಏಕೆ ಎಂದು ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಹೇಳಿದ್ದಾರೆ.

ತೀರ್ಥಹಳ್ಳಿಯ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅವರು ಬಸವರಾಜ ಬೊಮ್ಮಾಯಿ ಮೂಲತಃ ರಾಯಿಸ್ಟ್‌ ಚಿಂತನೆಯ ಕುಟುಂಬದವರು. ಅವರ ತಂದೆ ಎಸ್.ಅರ್.‌ ಬೊಮ್ಮಾಯಿ ಸಮಾಜದ ಕುರಿತು ಅಪಾರ ಕಳಕಳಿ ಇದ್ದವರು ಹಾಗಾಗಿ ಅವರ ಪುತ್ರ ಬಸವರಾಜ ಬೊಮ್ಮಾಯಿ ತೀರ್ಥಹಳ್ಳಿಗೆ ಆಗಮಿಸುತ್ತಿರುವ ಈ ಸಂದರ್ಭದಲ್ಲಿ ಮುಖ್ಯವಾಗಿ ಮುಳುಗಡೆ ಸಂತ್ರಸ್ತರು ಹಾಗೂ ಅಡಿಕೆ ಬೆಳಗಾರರ ಪಾಲಿಗೆ ಆಘಾತ ತಂದಿರುವ ಅಡಿಕೆ ಎಲೆಚುಕ್ಕಿ ರೋಗದ ಪರಿಹಾರಕ್ಕೆ ಏನಾದರು ಯೋಜನೆ ದೊರಕಬಹುದು ಎಂಬ ಆಶಾಭಾವನೆ ಇದೆ ಎಂದರು.

ಅಡಿಕೆ ಎಲೆಚುಕ್ಕಿ ರೋಗ ಇಡೀ ಮಲೆನಾಡಿಗರನ್ನು ಕಂಗೆಡಿಸಿದೆ. ಸ್ವತಃ ಅಡಿಕೆ ಬೆಳೆಗಾರ ಹಾಗೂ ಟಾಸ್ಕ್‌ ಪೋರ್ಸ್‌ ಅಧ್ಯಕ್ಷರಾಗಿರುವ ಆರಗ ಜ್ಞಾನೇಂದ್ರ ನೆಪ ಮಾತ್ರಕ್ಕೆ ವಿಜ್ಞಾನಿಗಳನ್ನು ಕರೆಸಿದ ಶಾಸ್ತ್ರ ಮಾಡಿದ್ದಾರೆ. ಈ ವಿಜ್ಞಾನಿಗಳು ಕೇವಲ 5 ನಿಮಿಷವನ್ನೂ ಕೂಡ ಅಡಿಕೆ ಬೆಳೆಗಾರರ ರೋಗ ಪೀಡಿತ ತೋಟ ವೀಕ್ಷಣೆಗೆ ನೀಡಿಲ್ಲ. ಇವರಿಂದ ಏನು ಪರಿಹಾರ ಸಾಧ್ಯ. ಅಲ್ಲದೇ ಹೇಳಿಕೆಗಳ ಮೂಲಕವೇ ಗೃಹಸಚಿವ ಕಾಲ ಕಳೆಯುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ 86 ಕೋಟಿ ರೂಪಾಯಿಗಳನ್ನು ಅಡಿಕೆ ಕೊಳೆ ರೋಗಕ್ಕೆ ನೀಡಲಾಗಿತ್ತು. ಈಗ ಕೇವಲ 36 ಲಕ್ಷ ಮಾತ್ರ ತೀರ್ಥಹಳ್ಳಿಗೆ ದೊರಕಿದೆ ಎಂಬ ಮಾಹಿತಿ ಇದೆ. ಎಷ್ಟು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದೆ. ಆದರೆ ಇಲ್ಲಿಯವರೆಗೆ ಒಂದು ಅಂಗುಲ ಭೂಮಿಯನ್ನು ಬಡವರಿಗೆ ನೀಡಿಲ್ಲ. ಇಡೀ ದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ, ರೈತರಿಗೆ, ಬಡವರಿಗೆ ನೀಡಿದ್ದರೆ ಅದು ಕಾಂಗ್ರೆಸ್‌ ಸರ್ಕಾರಗಳು ಮಾತ್ರ. ಬಿಜೆಪಿ ಸರ್ಕಾರ ಆಗ ಕಾಂಗ್ರೆಸ್‌ ಸರ್ಕಾರ ನೀಡಿದ ಭೂಮಿ ಹಕ್ಕನ್ನು ಕಾಯ್ದೆಗಳ ಮೂಲಕ ಕಸಿಯಲು ಹೊರಟಿದೆ. ಧಾರ್ಮಿಕತೆ ಮತ್ತು ಭಾವನಾತ್ಮಕ ವಿಚಾರಗಳೇ ಇವರ ಗೆಲುವಿನ ಹಾದಿಯಾಗಿದೆ. ಅಧಿಕಾರ ಇದ್ದರು ನಿರ್ಣಯಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವುದನ್ನು ಬಿಟ್ಟು ಸಾಮಾನ್ಯ ಜನರಂತೆ ಸಚಿವರ ಮುಂದೆ ಮನವಿ ಕೊಡುವ ನಾಟಕ ಮಾಡುತ್ತಿದ್ದಾರೆ. ಇದು ಸಂವೇದನೆಯೇ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು.

ಸುದ್ದಿಗೋಷ್ಟಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಸದಸ್ಯರಾದ ಶಬನಮ್‌, ಮಂಜುಳಾ ನಾಗೇಂದ್ರ, ರಹಮತುಲ್ಲಾ ಅಸಾದಿ, ಮುಖಂಡರಾದ ಹಾರೋಗೊಳಿಗೆ ಪದ್ಮನಾಭ, ಜೀನಾ ವಿಕ್ಟರ್‌, ಕಟ್ಟೇಹಕ್ಕಲು ಕಿರಣ್‌, ರಾಘವೇಂದ್ರ ಶೆಟ್ಟಿ, ಚಿಪ್ಪಿನಕೊಡಿಗೆ ವೆಂಕಟೇಶ್‌, ನಾಗರಾಜ್‌, ಮಟ್ಟಿನಮನೆ ರಾಮಚಂದ್ರ, ಯಲ್ಲಪ್ಪ, ಭುಜಂಗ ಪೂಜಾರಿ, ಹೊರಬೈಲು ರಾಮಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post