ನಿರೀಕ್ಷೆಗೂ ಮೀರಿದ ಜನ ಸಾಗರ

ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು
ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಆರಗ
ಪಾದಯಾತ್ರೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ಗೃಹಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ತೀರ್ಥಹಳ್ಳಿ ಬಿಜೆಪಿ ಘಟಕ ಬಹಳ ನಿರೀಕ್ಷೆಯಿಂದ ಕಾದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಭರ್ಜರಿ ಯಶಸ್ಸು ಕಂಡಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಕಾರಣ ಹಾಗೂ ಅನಿರೀಕ್ಷಿತವಾಗಿ ಸುರಿಯುತ್ತಿದ್ದ ಮಳೆಯ ದೆಸೆಯಿಂದ ಹಳ್ಳಿಗಾಡಿನ ಅಡಿಕೆ ಬೆಳೆಗಾರರು ಈ ಸಮಾವೇಶಕ್ಕೆ ಬರುವುದು ಕಷ್ಟ ಎಂಬುದನ್ನು ಹುಸಿಯಾಗಿಸಿದ ಆರಗ ಜ್ಞಾನೇಂದ್ರರ ಅಭಿಮಾನಿಗಳು ಇಲ್ಲಿನ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನ ತುಂಬಿ ತುಳುಕುವಂತೆ ಸೇರುವ ಮೂಲಕ ಗಡಿಬಿಡಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತೆ ಕಾಣುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊಗದಲ್ಲಿ ಮಂದಹಾಸ ಉಕ್ಕುವಂತೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಅಭಿವೃದ್ಧಿಗೆ ಬದ್ದವಾಗಿದೆ. ತೀರ್ಥಹಳ್ಳಿ ಒಂದರಲ್ಲೇ 2700 ಕೋಟಿ ಅಭಿವೃದ್ಧಿ ಅನುದಾನವನ್ನು ಕ್ಷೇತ್ರ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ. ಒಂದೂವರೆ ವರ್ಷದಲ್ಲಿ ರಾಜ್ಯದ 30 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಮುಂದಿನ ವರ್ಷದಲ್ಲಿ 20 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಶರಾವತಿ ಸಂತ್ರಸ್ತರ ಕುರಿತು ಮಾತನಾಡಿದ ಅವರು ಕಳೆದ 60 ವರ್ಷಗಳ ಕಾಲ ಈ ಸಮಸ್ಯೆ ಬಗೆಹರಿಸಲಾಗದವರು ಪಾದಯಾತ್ರೆ ಮಾಡುತ್ತಿದ್ದಾರೆ. 1980ರ ಒಳಗೆ ಈ ಸಮಸ್ಯೆಯನ್ನು ಬಹಳ ಸುಲಭವಾಗಿ ಬಗೆಹರಿಸುವ ಅವಕಾಶ ಆಗಿನ ಸರ್ಕಾರಗಳಿಗೆ ಇತ್ತು. ಆಗ ಏನು ಮಾಡದೆ ಈಗ ಇದೇ ವಿಚಾರದಲ್ಲಿ ರಾಜಕಾರಣ ಮಾಡುತ್ತ ಮತ ಪಡೆಯುವ ಹುನ್ನಾರ ಮಾಡುವುದು ನನಗೆ ನೋವಿನ ಸಂಗತಿಯಾಗಿದೆ ಎಂದರು.

ಇಲ್ಲಿನ ಅಡಿಕೆ ಬೆಳೆ ಮತ್ತು ಬೆಳೆಗಾರರ ಉಳಿಸಿಕೊಳ್ಳುವುದು ನಮ್ಮ ಸರ್ಕಾರದ ಜವಾಬ್ದಾರಿ. ಈಗಾಗಲೇ ಎಲೆಚುಕ್ಕಿ ರೋಗಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಜೊತೆಗೆ ಮಾತನಾಡಿ ತಜ್ಞರನ್ನು ಇಲ್ಲಿಗೆ ಕರೆತರಲಾಗಿದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ತೀರ್ಥಹಳ್ಳಿಗೆ ಹಲವು ಬಾರಿ ಆಗಮಿಸಿದ್ದೇನೆ. ಈ ಮಟ್ಟಿನ ಜನಸ್ತೋಮ ಹಿಂದೆಂದು ಕಂಡಿರಲಿಲ್ಲ. ರಾಜ್ಯ ಸರ್ಕಾರದ ಅಭಿವೃದ್ಧಿ ಜನರನ್ನು ಸೆಳೆಯುತ್ತಿದೆ. ಪ್ರತಿಪಕ್ಷ ಅಧಿಕಾರದ ಹಗಲು ಗನಸು ಕಾಣುತ್ತಿದೆ. ಆರಗ ಜ್ಞಾನೇಂದ್ರ 50 ಸಾವಿರ ಅಂತರದಲ್ಲಿ ಗೆಲ್ಲುವುದು ನಿಶ್ಚಿತ. ಎರಡು ತಿಂಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಗೊಳ್ಳಲಿದ್ದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದರು.

ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಅಭಿವೃದ್ಧಿಯ ಹೊಸ ಪರ್ವವೇ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಂಭಗೊಂಡಿದೆ. ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ ತೃಪ್ತಿ ನನಗಿದೆ. 60 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರು ಮೂರು ಕಾಸಿನ ಕೆಲಸ ಮಾಡಿಲ್ಲ. ಶರಾವತಿ ಸಂತ್ರಸ್ತರ ಹೆಸರಲ್ಲಿ ಓಟಿಗಾಗಿ ಪೊಳ್ಳು ಜಾಥ ಮಾಡಲಾಗುತ್ತಿದೆ. ಎಲೆಚುಕ್ಕಿ ರೋಗಕ್ಕೆ ಪಾದಯಾತ್ರೆ ಮದ್ದಲ್ಲ. ಅಡಿಕೆ ಬೆಳೆಗಾರರು ಗಾಭರಿಗೊಳ್ಳುವುದು ಬೇಡ. ₹10 ಕೋಟಿ ಪರಹಾರ ಮಂಜೂರಾಗಿದೆ ಎಂದರು.

ವೇದಿಕೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಕೆ.ಸಿ. ನಾರಾಯಣ ಗೌಡ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ,‌ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಅರ್.ಸೆಲ್ವಮಣಿ, ಎಸ್ಪಿ ಮಿಥುನ್‌ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಓ ಪ್ರಕಾಶ್‌ ಇದ್ದರು.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post