ಸುದ್ದಿ ಮಾಧ್ಯಮಗಳು ಜನಪರವಾಗಿರಬೇಕು

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್

ಡಿಜಿಟಲ್‌ ಮಾದ್ಯಮದ ಬೆಳವಣಿಗೆ ಹೆಚ್ಚಾದಂತೆ ದೃಶ್ಯ ಮಾದ್ಯಮಗಳಲ್ಲಿ ಸಾಮಾಜಿಕ ಕಾಳಜಿಯ ವರದಿಗಳು ಕಡಿಮೆಯಾಗುತ್ತಿದೆ ಎಂಬ ಕಳವಳ ಸಾರ್ವಜನಿಕರಲ್ಲಿ ಮೂಡುತ್ತಿದೆ. ಸುದ್ದಿ ಮಾದ್ಯಮಗಳು ಜನಪರವಾಗಿರದೆ ಮಾಲೀಕರ ಪರವಾಗಿ ಕೆಲಸ ಮಾಡುತ್ತೇವೆ ಎಂಬ ಭಾವನೆ ಇದೆ. ಈ ದೆಸೆಯಲ್ಲಿ ಸಾಮಾಜಿಕ ಕಳಕಳಿ ಇರುವ ಎಲ್ಲಾ ಪತ್ರಕರ್ತರು ಆಲೋಚಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ತೀರ್ಥಹಳ್ಳಿಯ ಬಂಟರ ಭವನದಲ್ಲಿ ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ನೇತೃತ್ವದ ವಿಸ್ತಾರ ಕನ್ನಡ ನ್ಯೂಸ್‌ ಚಾನಲ್‌ ವತಿಯಿಂದ ಏರ್ಪಡಿಸಲಾಗಿದ್ದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಭವ್ಯ ಇತಿಹಾಸವಿದೆ. ಅನೇಕ ಬಾರಿ ಮಾದ್ಯಮ ಸರ್ಕಾರವನ್ನೇ ಬದಲಾಯಿಸುವಷ್ಟು ಪ್ರಭಾವವಾಗಿ ಕೆಲಸ ಮಾಡಿದೆ. ಈಗಲೂ ಕೂಡ ಜನತೆ ಸುದ್ದಿ ಮಾದ್ಯಮಗಳಲ್ಲಿ ಬರುವ ಸುದ್ದಿಗಳನ್ನು ನಿಜವೆಂದು ನಂಬುವುದರಿಂದ ವೃತ್ತಿ ಬದ್ದತೆ ಎಲ್ಲಾ ಪತ್ರಕರ್ತರಿಗೂ ಬಹಳ ಮುಖ್ಯ. ವಿಸ್ತಾರ ಕನ್ನಡ ಚಾನೆಲ್‌ ತನ್ನ ಧೇಯ ವಾಕ್ಯದಂತೆ ನಿಖರ ಹಾಗೂ ಜನಪರವಾಗಿ ಮೂಡಿಬರಲಿ ಎಂದು ಹಾರೈಸಿದರು.

ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾದ ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ ಮಾದ್ಯಮಗಳು ವಿಶ್ವಾಸಾರ್ಹ ವಿರೋಧಪಕ್ಷದ ರೀತಿ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡುವ ಬದಲು ತೀರಾ ಸಾಧಾರಣ ವಿಚಾರಗಳನ್ನು ವೈಭವೀಕರಿಸಲಾಗುತ್ತಿದೆ. ಇದು ಸಲ್ಲದು ಎಂದರಲ್ಲದೇ ಯಾವುದೇ ಆಡಳಿತ ಪಕ್ಷವಿದ್ದರು ಅವರ ಲೋಪದೋಷಗಳನ್ನು ಎತ್ತಿ ಹಿಡಿದು ಜಾಗ್ರತೆ ಮೂಡಿಸುವ ಮೂಲಕ ಜನಪರವಾಗಿ ಕೆಲಸ ಮಾಡುವ ಬದಲು ಇತ್ತೀಚೆಗೆ ಸರ್ಕಾರದ ಪರವಾಗಿ ಚಾನಲ್‌ಗಳೇ ವಾದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಜನತೆ ಆಡಳಿತ ವ್ಯವಸ್ಥೆ ಕೈಕೊಟ್ಟಾಗ ನಂಬುವುದು ಸುದ್ದಿ ಮಾಧ್ಯಮಗಳನ್ನು ಈ ಜವಾಬ್ದಾರಿಯನ್ನು ಪತ್ರಕರ್ತರು ಮರೆಯಬಾರದು ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್‌ ಶೆಟ್ಟಿ ಮಾತನಾಡಿ, ಸ್ಪರ್ಧೆ ಹೆಚ್ಚಾದಂತೆ ಪತ್ರಕರ್ತರ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಟಿವಿ ಚಾನೆಲ್‌ಗಳಲ್ಲಿ ಜನತೆಗೆ ಅಗತ್ಯವೇ ಇರದ ವಿಚಾರಗಳ ಕುರಿತ ಚರ್ಚೆ ಹೆಚ್ಚುತ್ತಿದೆ. ಇಷ್ಟವಿಲ್ಲದಿದ್ದರೂ ಪ್ರತಿಸ್ಪರ್ಧಿ ಚಾನೆಲ್‌ನ ಸ್ಪರ್ಧೆಯ ಭೀತಿಯಿಂದಾಗಿ ಅನಿವಾರ್ಯವಾಗಿ ರಾಜೀಯಾಗಬೇಕಾದ ಪ್ರವೃತ್ತಿ ಹೆಚ್ಚುತ್ತಿದೆ. ಇದು ಜನಪರ ಪತ್ರಿಕೋದ್ಯಮಕ್ಕೆ ಒಳ್ಳೆಯ ಲಕ್ಷಣವಲ್ಲ. ವಿಸ್ತಾರ ಚಾನೆಲ್‌ ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜನಪರವಾಗಿ ಬೆಳೆಯಲಿ ಎಂದು ಹಾರೈಸಿದೆ.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾನ್‌ ರಾಮಣ್ಣ ಮಾತನಾಡಿ, ಪತ್ರಿಕೋದ್ಯಮದಲ್ಲಿ ಹಿಂದೆಂದೂ ಕಂಡು ಕೇಳರಿಯದ ಸ್ಫರ್ಧೆ ಆರಂಭವಾಗಿದೆ. ಯಾವುದೇ ಸುದ್ದಿ ಸಂಸ್ಥೆ ಜಿಲ್ಲೆ ತಾಲ್ಲೂಕು ಮಟ್ಟದ ವರದಿಗಾರರಿಗೆ ಮುಕ್ತ ಸ್ವಾತಂತ್ರ್ಯ ನೀಡದಿದ್ದಲ್ಲಿ ಜನಪರ ಕೆಲಸ ನಿರ್ವಹಿಸುವುದು ಅಸಾಧ್ಯವಾಗುತ್ತದೆ. ಆಗ ಸಾರ್ವಜನಿಕ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಡಿ.ಎಸ್.‌ ವಿಶ್ವನಾಥ ಶೆಟ್ಟಿ ಮಾತನಾಡಿ, ದೃಶ್ಯ ಮಾದ್ಯಮ ಹಿಂದೆಂದಿಗಿಂತಲೂ ಪ್ರಭಾವಶಾಲಿಯಾಗಿದೆ. ಆದರೆ ಮುದ್ರಣ ಮಾದ್ಯಮಕ್ಕೆ ಹೋಲಿಸಿದ್ದಲ್ಲಿ ಬ್ರೇಕಿಂಗ್‌ ಸುದ್ದಿಗಳನ್ನು ಕೊಡುವ ಗಡಿಬಿಡಿಯಲ್ಲಿ ವಸ್ತು ನಿಷ್ಠತೆ ಕಡಿಮೆಯಾಗುತ್ತಿದೆ. ಯಾವುದೇ ಸುದ್ದಿ ಸಂಸ್ಥೆ ದೀರ್ಘಕಾಲ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ನಿಖರವಾದ ವಿಶ್ಲೇಷಣಾತ್ಮಕ ಸುದ್ದಿ ನೀಡುವುದು ಮುಖ್ಯವಾಗುತ್ತದೆ. ಯಾವ ಸಿದ್ಧಾಂತದ ಪರವಾಗಿಯೂ ಇರದೇ ಜನಪರವಾಗಿದ್ದಾಗ ಸುದ್ದಿ ಸಂಸ್ಥೆ ಹಾಗೂ ಪತ್ರಕರ್ತರ ಮೌಲ್ಯ ಹೆಚ್ಚುತ್ತದೆ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಮಾತನಾಡಿ, ಮುದ್ರಣ ಮಾಧ್ಯಮ ಇಂದು ತೀವ್ರ ಸಂಕಷ್ಟದಲ್ಲಿದೆ. ಸರ್ಕಾರದಿಂದ ಮುದ್ರಣ ಮಾದ್ಯಮಕ್ಕೆ ಯಾವ ನೆರವೂ ಸಿಗದಿರುವುದು ವಿಶಾದಕರ. ಇಂತಹ ಪರಿಸ್ಥಿತಿ ಹಿಂದೆಂದೂ ಇರಲಿಲ್ಲ. ಬಹುತೇಕ ಗ್ರಾಮೀಣ ಪತ್ರಿಕೆಗಳು ಮುದ್ರಣ ಕಾಗದ ಸಿಗದೆ ಸ್ಥಗಿತಗೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.

ಬ್ಯೂರೋ ಮುಖ್ಯಸ್ಥ ವಿವೇಕ್‌ ಮಾಹಾಲೆ ಮಾತನಾಡಿ, ರಾಜ್ಯದ ಹಿರಿಯ ಪರ್ತಕತ್ರ ಹರಿಪ್ರಕಾಶ್‌ ಕೋಣೆಮನೆ ನೇತೃತ್ವದಲ್ಲಿ ಆರಂಭಗೊಂಡಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ಜನಪರವಾಗಿ ಕಾರ್ಯನಿರ್ವಹಿಸುವ ಕುರಿತು ಸುದೀರ್ಘವಾಗಿ ತಯಾರಿ ಮಾಡಿಕೊಂಡಿದೆ ಅಲ್ಲದೇ ಅಧ್ಯಯನವನ್ನು ನಡೆಸಿದೆ. ಮುದ್ರಣ ಮಾಧ್ಯಮ ಮುಂದಿನ ದಿನಗಳಲ್ಲಿ ಹೆಚ್ಚಿನ ಬಿಕ್ಕಟ್ಟಿಗೆ ತಲುಪುವುದರಿಂದ ಡಿಜಿಟಲ್‌ ಮಾಧ್ಯಮವೇ ಸೂಕ್ತ ಎಂಬ ಭರವಸೆಯಿಂದ ಸಮಾಜದ ಎಲ್ಲರನ್ನು ತಲುಪುವ ಆಶಯದೊಂದಿಗೆ ಈ ಚಾನೆಲ್‌ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ವರದಿಗಾರರಿದ್ದು 365ಕ್ಕೂ ಹೆಚ್ಚು ಅನುಭವಿ ಪತ್ರಕರ್ತರನ್ನು ಹೊಂದಿದೆ. ನಿಖರ ಜನಪರವಾಗಿ ಕಾರ್ಯನಿರ್ವಹಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದರು.

ಶೇಷಾದ್ರಿ ಬುಕ್ಲಾಪುರ ಆರಂಭ ಗೀತೆ ಹಾಡಿದರು. ಚಾನೆಲ್‌ನ ತಾಲ್ಲೂಕು ವರದಿಗಾರ ಮೋಹನ್‌ ಮುನ್ನೂರು ಸ್ವಾಗತಿಸಿದರು. ನಿಶ್ಚಲ್‌ ಜಾದೂಗಾರ್‌ ವಂದಿಸಿದರು. ಗಾಯತ್ರಿ ಶೇಷಗಿರಿ ಕಾರ್ಯಕ್ರಮ ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post