ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ಕಮಿಷನ್‌ ವ್ಯವಹಾರ

ಶೇಕಡಾ 4 ರಷ್ಟು ಹಣ ಪೀಕುವ ಸಚಿವರ ಅತ್ಯಾಪ್ತ ಬಂಟ
ಹಣ ಸಂಗ್ರಹಕ್ಕೆ ಗ್ರಾಮೀಣಾಭಿವೃದ್ದಿ ಅಧಿಕಾರಿ ನೇಮಕ
ಬಿಜೆಪಿ ಪಡಸಾಲೆಯಲ್ಲಿ ಭುಗಿಲೆದ್ದ ಅಸಮಾಧಾನ
ಅತ್ಯಾಪ್ತನಿಂದ ಫೋನ್‌ ಸಂಭಾಷಣೆ,  ಯಾರಾಗ್ತಾರೆ ಅಂದಾಜು 2 ಕೋಟಿ ವಾರಸುದಾರ
52 ಕೋಟಿ ಕಾಮಗಾರಿ ವ್ಯವಹಾರದಲ್ಲಿ ಕಿಂಗ್‌ ಪಿನ್‌ ಯಾರು…?

ಹಣಬಿಡುಗಡೆ ಮಾಡಬೇಕಾದರೆ ಎಫ್‌ಡಿಗೆ (ಹಣಕಾಸು ಇಲಾಖೆಗೆ) ಲಂಚ ನೀಡಬೇಕು. ಇದಕ್ಕಾಗಿ ತಾಲ್ಲೂಕಿನ ಗ್ರಾಮೀಣಾಭಿವೃದ್ದಿ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರಿಗೆ ಕಾಮಗಾರಿಯ ಶೇಕಡಾ 4 ರಷ್ಟು ಹಣ ಸಂದಾಯ ಮಾಡು. ಎಂದು ಗೃಹಸಚಿವ ಆರಗ ಜ್ಞಾನೇಂದ್ರರ ಅತ್ಯಾಪ್ತ ಬಂಟ ಹಾಗೂ ಜಾಲದ ಕಿಂಗ್‌ಪಿನ್‌ ಫೋನ್‌ ಸಂಭಾಷಣೆಯಲ್ಲಿ ಬಿಜೆಪಿ ಮುಖಂಡರೊಬ್ಬರಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಖಂಡ ನಾನು ಒಂದು ರೂಪಾಯಿಯೂ ಕೊಡುವುದಿಲ್ಲ. ಎನ್ನುವಷ್ಟರಲ್ಲಿ ಕಿಂಗ್‌ಪಿನ್ ಫೋನ್‌ ಕಟ್ಟ್‌ ಮಾಡಿದ್ದಾರೆ.

ಕಮಿಷನ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಅಧಿಕಾರಿಗೆ ಫೋನ್‌ ಮಾಡಿದಾಗ ಆತ ನಾನೇ ಎಲ್ಲರದ್ದು ಸಂಗ್ರಹ ಮಾಡುತ್ತಿದ್ದೇನೆ. ನೀವು ಯಾವಾಗ ಕೊಡ್ತೀರಾ ಅಂತ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಖಂಡ ನಾನು ಕಮಿಷನ್‌ ನೀಡಲ್ಲ. ಅವನೇನು ಮಾಡ್ತಾನೆ ನೋಡ್ಕೊತೀನಿ. ಅಂದಿದ್ದಾರೆ. ಇದಕ್ಕೆ ಉತ್ತರಿಸಿದ ಅಧಿಕಾರಿ ನಿಮ್ಮಿಬ್ಬರಿಗೆ ಬಿಟ್ಟ ವಿಚಾರ. ನಾವೇನು ಕೈಯಿಂದ ಹಾಕಿ ಬೆಂಗಳೂರಿನ ಅಧಿಕಾರಿಗೆ ಕೊಡಲು ಆಗುವುದಿಲ್ಲ. ಇದೆಲ್ಲ ಪದ್ಧತಿ ಅನುಸರಿಸಬೇಕು ಎಂದು ಫೋನ್‌ ಕಟ್‌ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಶೇಕಡಾ 40 ರಷ್ಟು ಕಮಿಷನ್‌ ಆರೋಪ ಕೇಳಿಬಂದಿದ್ದು ಆಡಳಿತರೂಢ ಬಿಜೆಪಿಗೆ ಕಿರಿಕಿರಿ ಉಂಟಾಗಿದೆ. ಈ ಮಧ್ಯೆ ತಾಲ್ಲೂಕಿನಲ್ಲೂ ಕಮಿಷನ್‌ ಆರೋಪಗಳನ್ನು ಸ್ವತಃ ಬಿಜೆಪಿ ಕಾರ್ಯಕರ್ತರು, ವಿರೋಧ ಪಕ್ಷ ನಿರಂತರ ಮಾಡಿಕೊಂಡು ಬಂದಿದೆ. ಅಲ್ಲದೆ ಇದರಲ್ಲಿ ಅಧಿಕಾರಿಗಳು ಪಾಲುದಾರರಾಗಿದ್ದಾರೆ ಎಂಬಂತ ವಾದಗಳು ಇತ್ತೀಚೆಗೆ ಕೇಳಿಬರುತ್ತಿದ್ದು ಹಣವಿಲ್ಲದೆ ಜನಸಾಮಾನ್ಯರ ಯಾವುದೇ ಕೆಲಸ ಆಗುತ್ತಿಲ್ಲ ಎಂಬ ತೀವ್ರ ಅಸಮಾಧಾನ ತೀರ್ಥಹಳ್ಳಿಯಲ್ಲಿ ಸೃಷ್ಟಿಯಾಗಿದೆ.

ಇತ್ತೀಚೆಗೆ ಮುಖ್ಯಮಂತ್ರಿ ವಿಶೇಷ ಅಭಿವೃದ್ದಿ ನಿಧಿಯಿಂದ ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಸುಮಾರು 52 ಕೋಟಿ ಅನುದಾನ ನೀಡಲಾಗಿದೆ. ಯಾವುದೇ ಅಪೇಕ್ಷೆ ಇಲ್ಲದೆ ಪಕ್ಷ ಸೇವೆ ಮಾಡಿಕೊಂಡು ಬಂದಿದ್ದ ಕಾರ್ಯಕರ್ತರ ವಲಯಕ್ಕೂ ಈ ನಿಧಿ ಆಶಾದಾಯಕವಾಗಿತ್ತು. ಇನ್ನೇನು ಕಾಮಗಾರಿ ಮುಗಿತು ಎನ್ನುವಷ್ಟರಲ್ಲಿ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳಿಗೆ 52 ಕೋಟಿ ರೂಪಾಯಿಯ ಅನುದಾನ ಬಿಡುಗಡೆ ಮಾಡಲು ಶೇಕಡ 4 ರಷ್ಟು ಕಮಿಷನ್‌ ನೀಡಬೇಕು ಎಂಬ ಸುದ್ದಿ ಗುತ್ತಿಗೆದಾರ ವಲಯಕ್ಕೆ ಆಘಾತ ನೀಡಿದೆ.

ಅಭಿವೃದ್ದಿಯ ಕನಸು ಕಂಡಿದ್ದ ಕೆಲವು ಗುತ್ತಿಗೆದಾರರು ಅತ್ಯಂತ ಪ್ರಮಾಣಿಕವಾಗಿ ಕೆಲಸವನ್ನು ಮಾಡಿ ಮುಗಿಸಿದ್ದು ಇದೀಗ ಹೆಚ್ಚುವರಿ ಕಮಿಷನ್‌ ನೀಡಬೇಕೆಂಬ ಆಘಾತಕಾರಿ ಧೋರಣೆಗೆ ಕಂಗಾಲಾಗುವಂತೆ ಮಾಡಿದೆ. ಇದರ ಹಿಂದೆ ಗೃಹಸಚಿವರ ಅತ್ಯಾಪ್ತ ಬಂಟ ಇದ್ದು ಆತನ ಮೂಲಕ ಸಂಗ್ರಹವಾದ ಅಂದಾಜು 2 ರಿಂದ 3 ಕೋಟಿ ಕಮಿಷನ್ ಹಣವನ್ನು ಗುತ್ತಿಗೆದಾರರ ಹೆಸರಿನಲ್ಲಿ ಹಣಕಾಸು ಇಲಾಖೆಗೆ ಸಂದಾಯ ಮಾಡುತ್ತಾರಂತೆ. ಅದಾದ ನಂತರ ಕಾಮಗಾರಿಯ ಪೂರ್ಣ ಅನುದಾನ ಬಿಡುಗಡೆ ಆಗುತ್ತದೆ ಎಂಬ ವಾದವನ್ನು ಮಂಡಿಸಿದ್ದಾರೆ.

ವಿಶೇಷವೆಂದರೆ ಈ ಕಮಿಷನ್‌ ವ್ಯವಹಾರದ ಹಣವನ್ನು ಸಂಗ್ರಹ ಮಾಡುವ ಜವಾಬ್ದಾರಿಯನ್ನು ಸರ್ಕಾರಿ ಸೇವೆಯಲ್ಲಿರುವ ಗ್ರಾಮೀಣಾಭಿವೃದ್ದಿ ಇಲಾಖೆಯ ಅಧಿಕಾರಿಗೆ ವಹಿಸಲಾಗಿದೆ. ಆತ ಈಗಾಗಲೇ ಬಹುತೇಕ ಗುತ್ತಿಗೆದಾರರಿಂದ ಹಣವನ್ನು ಸಂಗ್ರಹಿಸಿದ್ದು ಕೆಲವರದಷ್ಟೇ ಬಾಕಿ ಉಳಿಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಜಾಲದಲ್ಲಿ ಹಣ ನೀಡಿದವರು ಮತ್ತು ನೀಡದವರಿಂದ ಬಾರಿ ವಿರೋಧ ವ್ಯಕ್ತವಾಗಿದೆ. ಸಾಲಸೂಲ ಮಾಡಿ ಕೆಲಸ ಮಾಡಿದರೆ ಕೆಲಸಕ್ಕೆ ಸರಿಯಾದ ಮರ್ಯಾದೆ ಸಿಗುವುದಿಲ್ಲ. ಅಷ್ಟು ಮಾತ್ರವಲ್ಲದೆ ಹಣ ಬಿಡುಗಡೆ ಮಾಡುವಾಗ ಇನ್ನಿಲ್ಲದ ಕಾನೂನುಗಳನ್ನು ಹೇಳುತ್ತಾರೆಂಬ ಆಕ್ರೋಶ ಹೊರಹಾಕುತ್ತಿದ್ದಾರೆ.

ಮೇಲ್ನೋಟಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆ ಅಧಿಕಾರಿ ಮತ್ತು ಗೃಹಸಚಿವರ ಅತ್ಯಾಪ್ತ ಬಂಟನ ಮೂಲಕ ಹಣಕಾಸು ಇಲಾಖೆ ಉನ್ನತ ಅಧಿಕಾರಿಗಳಿಗೆ ಲಂಚ ನೀಡುವಂತೆ ಕಾಣಿಸುತ್ತಿದೆ. ಆದರೆ ಇದರಲ್ಲಿ ಇಂತಹ ಕಮಿಷನ್‌ ವ್ಯವಹಾರ ಇರಲಾರದು. ಇದರಲ್ಲಿ ಬಾರಿ ಪ್ರಮಾಣದ ಮೋಸ ಅಡಗಿದೆ ಎಂಬ ಅನುಮಾನಗಳು ಕಾಡುತ್ತಿದೆ. ಈ ಸಂಬಂಧ ಪಕ್ಷದ ನಾಯಕರು, ಮುಖಂಡರ ಗಮನಕ್ಕೂ ತಂದಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲವಂತೆ. ಪಕ್ಷದ ಸೇವೆ ಮಾಡುತ್ತಿದ್ದರೂ ನಮ್ಮಿಂದಲೇ ಲಂಚ ಪಡೆಯುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಅಲ್ಲದೇ ಬಿಜೆಪಿ ಪಡಸಾಲೆಯಲ್ಲಿ ದೊಡ್ಡ ಮಟ್ಟಿಗೆ ಚರ್ಚೆಗೆ ಕಾರಣವಾಗಿದ್ದು ಮುಂಬರುವ ವಿಧಾನಸಭೆಯಲ್ಲಿ ಈ ಬಿರುಕು ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಹೆಚ್ಚು ಮಾಡಿದೆ ಎಂಬ ವಾದಗಳು ಕೇಳಿ ಬರುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post