ಅಕ್ಟೋಬರ್‌ ತಿಂಗಳಲ್ಲಿ ಅಡಿಕೆ ವಿರುದ್ಧದ ಗುಮ್ಮ

ಆರಗ ಜ್ಞಾನೇಂದ್ರ ಕೇಂದ್ರ ಸರ್ಕಾರದ ಕಿವಿ ಹಿಂಡುವರೇ…?
ಜುಲೈ ಒಳಗೆ 7217 ಟನ್‌ ಆಮದು
ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ
ರೈತರ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ವಾ…

ಭೂತಾನ್‌ ದೇಶದಿಂದ 17 ಸಾವಿರ ಟನ್‌ ಹಸಿ ಅಡಿಕೆಯನ್ನು ಎಐಪಿ (ಕನಿಷ್ಠ ಆಮದು ದರ) ಇಲ್ಲದೆಯೇ ಆಮದು ಮಾಡಿಕೊಳ್ಳುವ ಕುರಿತು ನಿನ್ನೆ ನೆಲದ ಧ್ವನಿಯ ಸುದ್ದಿಗೆ ಜಿಲ್ಲೆಯ ಪ್ರಜ್ಞಾವಂತ ಜನತೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ನಿಜವಾ ಎಂದೂ ಕೇಳಿದ್ದಾರೆ.

ಕೇಂದ್ರ ಸರ್ಕಾರದ ಅಧಿಕೃತ ಆದೇಶ ಪ್ರತಿ ಪಡೆಯಿರಿ

ಖಂಡಿತ ನಿಜ, ಅಡಿಕೆ ಬೆಳೆಗಾರರ ಪ್ರತಿಭಟನೆ ವಿನಂತಿ ಹಾಗೂ ಬಹಳ ಮುಖ್ಯವಾಗಿ ಶಿವಮೊಗ್ಗ, ದಕ್ಷಿಣ ಕನ್ನಡ, ಚೆನ್ನಗಿರಿ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ರಾಜಕೀಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿಯೇ ಕೇಂದ್ರ ಬಿಜೆಪಿ ಸರ್ಕಾರ ಕ್ಯಾಂಪ್ಕೋ, ಅಡಿಕೆ ಟಾಸ್ಕ್‌ ಫೋರ್ಸ್‌ ಸಮಿತಿ ಅಧ್ಯಕ್ಷ ಮತ್ತು ಈಗಿನ ಕರ್ನಾಟಕ ಸರ್ಕಾರದ ಗೃಹಸಚಿವ ಆರಗ ಜ್ಞಾನೇಂದ್ರ ಮುಂತಾದವರ ಸತತ ಒತ್ತಾಯದ ಬಳಿಕ 2017ರಲ್ಲಿ ಯಾವುದೇ ದೇಶದಿಂದ ಆಮದಾಗುವ ಪ್ರತಿ ಕೆಜಿ ಅಡಿಕೆಗೆ 251 ರೂಪಾಯಿ ಕನಿಷ್ಠ ಆಮದು ದರ ನಿಗಧಿಗೊಳಿಸಲಾಗಿತ್ತು. ಆದರೆ ಆಡಳಿತಾರೂಢ ಬಿಜೆಪಿ ಕೇಂದ್ರ ಸರ್ಕಾರ ಇದನ್ನು ತೆಗೆದುಹಾಕುವ ಮೂಲಕ ಅಡಿಕೆ ಬೆಳೆಗಾರನ ದಿಕ್ಕೆಡಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ನಿಸಂಶಯವಾಗಿ ಕೇಂದ್ರ ಬಿಜೆಪಿ ಸರ್ಕಾರದ ಈ ಕೆಟ್ಟ ನಿರ್ಧಾರದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗುವುದು ತೀರ್ಥಹಳ್ಳಿ ಹಾಗೂ ಹೊಸನಗರ ಪ್ರದೇಶಗಳ ಅಡಿಕೆ ಬೆಳೆಗಾರರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ, ಕೊಪ್ಪ ಭಾಗಗಳ ರೈತರು ಕಾರಣ ಈ ಭಾಗಗಳಲ್ಲಿ ಅಡಿಕೆಗೆ ರೋಗವೂ ಜಾಸ್ತಿ, ನಿರ್ವಹಣೆಯ ವೆಚ್ಚವೂ ಹೆಚ್ಚು ಇಳುವರಿಯೂ ಕಡಿಮೆ ಆದರೆ ಈ ಸಮಸ್ಯೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹೊಳೆಹೊನ್ನೂರು, ಸಾಗರ ಮುಂತಾದ ಕಡೆಗಳಲ್ಲಿ ಇಲ್ಲ. ಇನ್ನೂ ಅತೀ ಹೆಚ್ಚು ಅಡಿಕೆ ಬೆಳೆಯುವ ಮುಂತಾದ ಕಡೆಗಲ್ಲಿ ಅಕಸ್ಮಾತ್‌ ಅಡಿಕೆ ಬೆಳೆ ಕೈಕೊಟ್ಟರು ಪರಿರ್ಯಾಯ ಬೆಳೆ ಬೆಳೆದು ಉಳಿದುಕೊಳ್ಳಬಹುದು. ಆದರೆ ತೀರ್ಥಹಳ್ಳಿ ಹೊಸನಗರ, ಶೃಂಗೇರಿ ಭಾಗಗಳ ಅಡಿಕೆ ಬೆಳೆಗಾರರಿಗೆ ಅನ್ಯ ಮಾರ್ಗವೇ ಇಲ್ಲ.

ಅಧಿಕೃತ ದಾಖಲೆಗಳ ಪ್ರಕಾರವೇ 2022-23ರ ಇಲ್ಲಿಯವರೆಗೆ 7217 ಟನ್‌ ಅಡಿಕೆಯನ್ನು ಜುಲೈ ಅಂತ್ಯದ ವೇಳೆಗೆ ಆಮದು ಮಾಡಿಕೊಳ್ಳಲಾಗಿದೆ. ಈ ಆರ್ಥಿಕ ವರ್ಷದಲ್ಲಿಯೇ ಇನ್ನೂ 8,500 ಟನ್‌ ಹಸಿ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಮಾಹಿತಿಯ ಪ್ರಕಾರ ನೋಡುವುದಾದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಅಧಿಕೃತ ಹಾಗೂ ಅನಧಿಕೃತ ಅಮದು ತಡೆದ ಕಾರಣವೇ ಕಳೆದ ವರ್ಷ ಭರ್ಜರಿ ದರ ದೊರಕಿತು ಎಂಬ ಗೃಹಸಚಿವ ಆರಗ ಜ್ಞಾನೇಂದ್ರರ ಕೇಂದ್ರ ಸರ್ಕಾರ ಶ್ಲಾಘನೆ ಮತ್ತು ಸ್ವಪ್ರಶಂಸೆ ಪೊಳ್ಳು ಎಂಬುದು ಸ್ಪಷ್ಟವಾಗಿ ಆರ್ಥವಾಗುತ್ತದೆ. ಇಷ್ಟಕ್ಕೂ ಇಡೀ ಸ್ವತಂತ್ರ್ಯ ಭಾರತ ಇತಿಹಾಸಲ್ಲಿ ಅನ್ನದಾತ ಎಂದು ಪೂಜ್ಯ ಭಾವನೆಯಿಂದ ಕಾಣಲಾಗುವ ರೈತರನ್ನೇ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೀದಿಗಿಳಿದರು ಎಂಬ ಒಂದೇ ಕಾರಣಕ್ಕಾಗಿ ಭಯೋತ್ಪಾದಕರು ಎಂದು ಕರೆದುದಲ್ಲದೇ 700ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಹುತಾತ್ಮರಾದರೂ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವ ಧನಾತ್ಮಕ ಅಂಶವೂ ಕಂಡು ಬಂದಿಲ್ಲ. ವಾಸ್ತವವಾಗಿ ನಮ್ಮ ದೇಶದಲ್ಲಿಯೇ ವಾರ್ಷಿಕವಾಗಿ 10 ಲಕ್ಷ ಟನ್‌ ವರೆಗೆ ಅಡಿಕೆ ಉತ್ಪಾದನೆಯಾಗುತ್ತಿದೆ. ಹಾಗಿರುವಾಗ ಭೂತಾನ್‌ ದೇಶದಿಂದ 17 ಸಾವಿರ ಟನ್‌ನಷ್ಟು ಹಸಿ ಅಡಿಕೆಯನ್ನು ಕನಿಷ್ಠ ಆಮದು ದರ ನೀತಿಯನ್ನು ತೆಗೆದುಹಾಕಿ ಆಮದು ಮಾಡಿಕೊಳ್ಳುವ ಅವಕಾಶ ಕಲ್ಪಿಸುವುದು ಅಡಿಕೆ ಬೆಳೆಗಾರರನ್ನು ಕಾಪಾಡುವುದಕ್ಕೋ ಅಥವಾ ಬೆರಳೆಣಿಕೆಯ ಗುಟ್ಕಾ ಫ್ಯಾಕ್ಟರಿ ಮಾಲಿಕರುಗಳ ಹಾಗೂ ಸದಾ ರೈತರನ್ನು ಶೋಷಿಸುವ ಅಡಿಕೆ ವರ್ತಕರ ಹಿತಾಸಕ್ತಿಗಾಗಿಯೇ ಎಂಬುದು ಈಗ ಚರ್ಚೆಯಾಗಬೇಕಾದ ವಿಷಯವಾಗಿದೆ. ಏಕೆಂದರೆ ಈ ಕಿತಾಪತಿಗಳೆಲ್ಲ ಕಳೆದ 10 ವರ್ಷಗಳಿಂದ ಹೊಸ ಅಡಿಕೆ ಬೆಳೆ ಮಾರುಕಟ್ಟೆಗೆ ಪ್ರವೇಶಿಸುವ ಅಕ್ಟೋಬರ್‌ ಮೊದಲ ವಾರದಲ್ಲಿಯೇ ಹೊರಬರುತ್ತಿವೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಗುಮ್ಮ ಹರಿದಾಡಿರುವುದನ್ನು ನೆನಪಿಸಿಕೊಳ್ಳಬಹುದು.

ಸದ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಬಳಿ ಧೈರ್ಯವಾಗಿ ಈ ವಿಚಾರವನ್ನು ಪ್ರಸ್ತಾಪಿಸಿ ಮನವರಿಕೆ ಮಾಡಿಕೊಳ್ಳುವವರು ಯಾರು ಕಾಣಿಸುತ್ತಿಲ್ಲ. ಹೆಚ್ಚೆಂದರೆ ಹಾಗೂ ಹೀಗೂ ಭೇಟಿ ಮಾಡುವ ಅವಕಾಶ ಗಿಟ್ಟಿಸಿ ಒಂದೆರಡು ನಿಮಿಷದಲ್ಲಿ ಪೋಟೋ ಹೊಡೆಸಿಕೊಂಡು ಬಳಿಕ ಕಥೆ ಕಟ್ಟುವ ನಾಯಕರೇ ಹೆಚ್ಚಿರುವಾಗ ಈಗ ಕರ್ನಾಟಕ ಸರ್ಕಾರದ ಗೃಹಮಂತ್ರಿಯಾಗಿ ರಾಷ್ಟ್ರೀಯ ಮಟ್ಟದ ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರೆಂಬ ಗೌರವಕ್ಕೆ ಪಾತ್ರರಾಗಿರುವ ಆರಗ ಜ್ಞಾನೇಂದ್ರರ ಮೇಲೆ ಜವಾಬ್ದಾರಿ ಹೆಚ್ಚಿದೆ. ಅಡಿಕೆ ಬೆಳೆಗಾರರಲ್ಲಿ ಎಲ್ಲಾ ಪಕ್ಷ ಜಾತಿ, ಮತದವರಿದ್ದಾರೆ. ಕೇಂದ್ರ ಸರ್ಕಾರದ ಬಳಿ ಅಧಿಕಾರಯುತವಾಗಿ ಮಾತನಾಡಲು ಅವರ ಬಳಿ ಅಧಿಕಾರವೂ ಇದೆ, ಅರ್ಹತೆಯೂ ಇದೆ. ಸ್ವತಃ ಅಡಿಕೆ ಬೆಳೆಗಾರರಾಗಿ ಈ ತಳಮಳದ ಆಳ ಅಗಲವೂ ಗೊತ್ತಿದೆ. ಅವರೀಗ ಮುನ್ನುಗಬೇಕಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post