ಖೋ ಖೋ ಆಟಗಾರ ವಿನಯಕುಮಾರ್‌ ಅಕಾಲ ಮರಣ

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ವಿನಯ್‌
ಸಾವಿಗೆ ಖಾಸಗಿ ನರ್ಸಿಂಗ್‌ ಹೋಂ ವೈದ್ಯರ ಬೇಜಾವಾಬ್ದಾರಿ ಕಾರಣವಾಯಿತೇ…?
ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದ ಆಕ್ರೋಶ

ಖಾಸಗಿ ಅಸ್ಪತ್ರೆ ಸೇರಲು ಸರ್ಕಾರಿ ವೈದ್ಯರ ಶಿಫಾರಸ್ಸು..!

ವಿನಯಕುಮಾರ್‌ ಜ್ವರ ಪೀಡಿತರಾಗಿ ನರ್ಸಿಂಗ್‌ ಹೋಮಿಗೆ ದಾಖಲಾಗುವಾಗ ವೈದ್ಯರು ಸರಿಯಾದ ಸಲಹೆ ನೀಡಿದ್ದರೆ ಖಂಡಿತವಾಗಿ ಬದುಕುವ ಸಾಧ್ಯತೆ ಹೆಚ್ಚಿತ್ತು ಎಂಬ ನೋವು ವಿನಯ್‌ ಅವರ ಗೆಳೆಯರಲ್ಲಿ ಕಾಡುತ್ತಿದೆ. ಅಚ್ಚರಿ ಸಂಗಂತಿ ಎಂದರೆ ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರೂ ಕೂಡ ಚಿಕಿತ್ಸೆ ಸಂದರ್ಭದಲ್ಲಿ ಈ ಖಾಸಗಿ ಆಸ್ಪತ್ರೆಯಲ್ಲೇ ಸೇರಿಕೊಳ್ಳುವಂತೆ ಶಿಫಾರಸ್ಸು ಮಾಡುವಂತ ಪ್ರವೃತ್ತಿ ಹೊಂದಿದ್ದಾರೆ ಎಂಬ ದೂರು ಸಾರ್ವಜನಿಕವಾಗಿದೆ. ವಿನಯ್‌ ಸಾವಿನ ಪ್ರಕರಣ ಸರ್ಕಾರಿ ವೈದ್ಯರೂ ಎಚ್ಚರದಿಂದ ಇರುವಂತೆ ಮಾಡಿದೆ.


ವಿನಯಕುಮಾರ್‌ ಅಕಾಲಿಕ ಮರಣಕ್ಕೀಡಾಗಿರುವುದು ಆತನ ಸ್ನೇಹವಲಯಕ್ಕೆ ದಿಗ್ಬ್ರಮೆ ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಆತನ ಸ್ನೇಹಿತರು ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಖೋ ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಹೆಸರಾಗಿದ್ದ ವಿನಯಕುಮಾರ್‌ ಏಕಲವ್ಯ ಸ್ಪೋರ್ಟ್ಸ್‌ ಕ್ಲಬ್‌ ಸದಸ್ಯರಾಗಿ ರಾಷ್ಟ್ರೀಯ ಖೋಖೋ ತಂಡವನ್ನು ಪ್ರತಿನಿಧಿಸಿದ್ದರು. ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಪ್ರಖ್ಯಾತ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಇವರ ಸಾಧನೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಖೋಖೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 2 ವರ್ಷದ ಹಿಂದಷ್ಟೆ ವಿವಾಹವಾಗಿದ್ದು 9 ತಿಂಗಳ ಪುಟ್ಟ ಮಗುವಿದೆ.

ದೈಹಿಕವಾಗಿ ಸದೃಢನಾಗಿದ್ದ ಹಾಗೂ ದಿನನಿತ್ಯ ಫಿಟ್‌ನೆಸ್‌ಗೆ ಸಂಬಂಧಪಟ್ಟ ಕಸರತ್ತು ಮಾಡುತ್ತಿದ್ದ ವಿನಯ್‌ ವಾರದ ಹಿಂದೆ ಜ್ವರ ಎಂದು ಇಲ್ಲಿನ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆಗೆಂದು ಸೇರಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಬೇಜಾವಾಬ್ದಾರಿಯಿಂದಲೋ ಅಥವಾ ತಮ್ಮ ಕಾರ್ಯಾಭಾರದ ಒತ್ತಡದಿಂದಲೋ ಇವರ ಖಾಯಿಲೆಯನ್ನು ಸರಿಯಾಗಿ ತಪಾಸಣೆ ಮಾಡದೆ ಉಲ್ಬಣಾವಸ್ಥೆಗೆ ಹೋದ ನಂತರ ಕೈಚೆಲ್ಲಿ ಮಣಿಪಾಲ ಆಸ್ಪತ್ರೆಗೆ ಕಳಿಸಿದ್ದು ಮತ್ತು ಆ ಹೊತ್ತಿಗಾಗಲೇ ಅದು ಮಿದುಳು ಜ್ವರದ ಸ್ವರೂಪ ಪಡೆದುಕೊಂಡಿದ್ದು ವಿನಯ್‌ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಸಾಧಾರಣವಾಗಿ ನರ್ಸಿಂಗ್‌ ಹೋಂಗೆ ಸೇರುತ್ತಲೇ ಹತ್ತಾರು ತರಹದ ಪರೀಕ್ಷೆ ಮಾಡಿಸುತ್ತಾರೆ. ಸರ್ವೆ ಸಾಮಾನ್ಯ ಈ ಭಾಗದಲ್ಲಿ ಕಂಡುಬರುವ ಎಲ್ಲಾ ರೀತಿಯ ಗಂಭೀರ ಸೋಂಕಿನ ಪರೀಕ್ಷೆಯನ್ನು ಮಾಡಲಾಗುತ್ತದೆ. ಅದೇ ರೀತಿ ವಿನಯ್‌ ಪ್ರಕರಣದಲ್ಲಿ ಆಗಿತ್ತು. ಹಾಗಿದ್ದಾಗಲೂ ನಿಖರವಾಗಿ ಯಾವ ಕಾಯಿಲೆ ಎಂದು ಕಂಡು ಹಿಡಿಯುವಲ್ಲಿ ಈ ವೈದ್ಯರು ಮಾಡಿದ ಎಡವಟ್ಟು ಈ ಕ್ರೀಡಾಪಟುವಿನ ಅಮೂಲ್ಯ ಜೀವವನ್ನು ಬಲಿ ಪಡೆಯಿತು ಎಂಬುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದು ಈ ಪ್ರಕರಣದ ಕುರಿತು ಸರ್ಕಾರ, ಸಂಬಂಧಪಟ್ಟ ಇಲಾಖೆಗಳು ಗಂಭೀರವಾಗಿ ಗಮನಿಸಬೇಕಾದ ಅವಶ್ಯಕತೆ ಇದೆ.

ಈ ಹಿಂದೆಯೂ ಕೂಡ ಈ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಇದೇ ರೀತಿಯ ಪ್ರಮಾದಗಳು ಸಂಭವಿಸಿದ್ದು ಅತ್ಯಂತ ಒತ್ತಡದಲ್ಲಿರುವ ಈ ವೈದ್ಯ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ ರೋಗಿಗಳ ಜೀವಕ್ಕೆ ಎರವಾಗುತ್ತಿದ್ದಾರೆ ಎಂಬ ಅರೋಪ ವಿನಯ್‌ ಮರಣ ಹೊಂದಿದ ನಂತರ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post