ಅತ್ತಿದ್ಯಾಕೆ ಶಬನಮ್...

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್ ರಾಜೀನಾಮೆ
ಉಪಾಧ್ಯಕ್ಷರ ರಾಜೀನಾಮೆಗೆ ಒತ್ತಡ...?
ರೆಬೆಲ್ ಅಂತಿದ್ದ ಯುವ ಪಡೆಗೆ ಟ್ರಬಲ್...!
ನಡೆಯುತ್ತಾ ಆಪರೇಷನ್ ಕಮಲ...?
ಕುತೂಹಲ ಘಟ್ಟ ತಲುಪಿದ ಕಾಂಗ್ರೆಸ್ ಆಡಳಿತ...!

ಭ್ರಷ್ಟಾಚಾರದ ವೀಡಿಯೋ ಸಾಕ್ಷ್ಯ ವಿಚಾರ ಮುನ್ನೆಲೆಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಮುನ್ನೆಲೆಗೆ ಬಂದಂತಿದೆ. ಅಣ್ಣ, ಅಕ್ಕ ನಾವು ರೆಬಲ್ ಆಗಿದ್ದೇವೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಡುವುದಿಲ್ಲ ಎಂದು ಸವಾಲು ಹಾಕುತ್ತಿದ್ದ ಯುವಕರು ಬೆಪ್ಪುಮೋರೆ ಹಾಕಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಆಡಳಿತದಿಂದಲೇ ಟ್ರಬಲ್ ಆಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಟೆಂಡರ್, ಗುತ್ತಿಗೆ ವಿಚಾರದಲ್ಲಿ ಅನಾವಶ್ಯಕ ಸದಸ್ಯರು ಮಧ್ಯಸ್ಥಿಕೆ ವಹಿಸುತ್ತಿದ್ದು ಅಧಿಕಾರ ಬಂದ ನಂತರ ಪಕ್ಷಕ್ಕೆ ದುಡಿದವರ ಸ್ಥಿತಿ ನಾಯಿಪಾಡು ಆದಂತೆ ಕಾಣಿಸುತ್ತಿದೆ.

ಕೇವಲ 10 ತಿಂಗಳಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಭಿವೃದ್ದಿಗೆ ಸುಮಾರು ಒಂದೂವರೆ ಕೋಟಿ ಅನುದಾನ, ಕಾಮಗಾರಿ ನೀಡಿದ್ದ ಕ್ರಿಯಾಶೀಲ ಅಧ್ಯಕ್ಷೆ ಶಬನಮ್ ಗುರುವಾರ ರಾಜೀನಾಮೆ ನೀಡಿದ್ದಾರೆ. ಸದ್ಯ ರಾಜೀನಾಮೆ ಅಂಗೀಕಾರ ಆಗುವವರೆಗೆ ಶಬನಮ್ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ದಿಢೀರ್ ಬೆಳವಣಿಗೆ ತಾಲ್ಲೂಕಿನಲ್ಲಿ ಹಲವು ಪ್ರಶ್ನೆಗೆ ಕಾರಣವಾಗಿದ್ದು ಮುಂದಿನ ಅಧ್ಯಕ್ಷರು ಯಾರು ಎಂಬ ಗುಸು ಗುಸು ಆರಂಭವಾಗಿದೆ. ಈ ನಡುವೆ ಹಾಲಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಪ್ರಕಾಶ್ ಶೆಟ್ಟಿ ರಾಜೀನಾಮೆ ನೀಡುವ ಸಾಧ್ಯತೆ ಇದೆಯಾ. ಒಳ ಒಪ್ಪಂದ ನಡೆದಿದೆಯಾ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಂತಿದೆ.
ಸುದೀರ್ಘ 23 ವರ್ಷಗಳ ಬಿಜೆಪಿ ಆಡಳಿತದಿಂದ ಕಾಂಗ್ರೆಸ್ ತೆಕ್ಕೆಗೆ ಆಗಮಿಸಿರುವ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಲವು ಮೊದಲಿಗೆ ಕಾರಣವಾಗಬಹುದು. ಪಟ್ಟಣದ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ದಶಕಗಳ ಬೇಡಿಕೆ ಈಡೇರಬಹುದು ಎಂಬ ಆಶಾಭಾವನೆ ಪೂರ್ಣಗೊಳ್ಳುವುದರೊಳಗೆ ಕಾಂಗ್ರೆಸ್ ನೇತೃತ್ವದ ಪಟ್ಟಣದ ಆಡಳಿತ ಕುತೂಹಲ ಘಟ್ಟ ತಲುಪಿದೆ. ಇನ್ನೊಂದು ಕಡೆಯಿಂದ ವಿರೋಧ ಪಕ್ಷ ಬಿಜೆಪಿಯಲ್ಲಿಯೂ ಅಧಿಕಾರಕ್ಕಾಗಿ ಸರ್ಕಸ್ ಆರಂಭವಾಗಿದ್ದು ಪ್ರವಾಸ ರಾಜಕಾರಣ, ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆ ಚಾಲ್ತಿಯಾಗಿದೆ. ಕಾಂಗ್ರೆಸ್ ಹಾಲಿ ಪ್ರಭಾವಿ ನಾಯಕರಾದ ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡ ಒಳಜಗಳದಲ್ಲಿ ಮತ್ತೆ ಕೂಸು ಬಡವಾಯಿತೇ ಎಂಬ ಆತಂಕವೂ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ಕಾಂಗ್ರೆಸ್ ಬಹುಮತ ಪಡೆಯುತ್ತಿದ್ದಂತೆ ಮೂವರು ಆಕಾಂಕ್ಷಿಗಳ ಪೈಕಿ ಶಬನಮ್ ಆಯ್ಕೆಯಾಗಿರುವುದು ಜಗಜಾಹೀರಾಗಿದೆ. ಇದೀಗ ಸದಸ್ಯರಾದ ಗೀತಾ ರಮೇಶ್ ಅಥವಾ ಸುಶೀಲ ಶೆಟ್ಟಿ ಪೈಕಿ ಯಾರು ಅಧ್ಯಕ್ಷಗಾಧಿಗೆ ಏರುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ. ಅಲ್ಲದೇ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೂತನ ಕಟ್ಟಡ ಮುಕ್ತಾಯದ ಹಂತ ತಲುಪಿದ್ದು ಉದ್ಘಾಟನೆ ಮಾಡಲಿರುವ ನಸೀಬ್ ಯಾರದ್ದು. ಕಲ್ಲಿನ ಫಲಕದಲ್ಲಿ ಮುದ್ರಣಗೊಳ್ಳುವ ಅಧ್ಯಕ್ಷರ ಹೆಸರಿಗೆ ರೇಸ್ ಹೆಚ್ಚತೊಡಗಿದೆ.
ಉಪಾಧ್ಯಕ್ಷರ ಪೈಪೋಟಿಗೆ ಆಸಕ್ತಿ ತೋರಿಸಿದ ಮೊದಲಿಗ ಸದಸ್ಯ ಬಿ.ಗಣಪತಿ, ಪಟ್ಟಣ ಆಡಳಿತದಲ್ಲಿ ಅನುಭವದ ಕೊರತೆ ಕೂಡ ಒಂದು ಹೆಜ್ಜೆ ಹಿಂದೆ ಸರಿಯುವಂತೆ ಮಾಡಿದೆ. ಇನ್ನೊಬ್ಬ ಮಾಜಿ ಅಧ್ಯಕ್ಷ ರಹಮತುಲ್ಲಾ ಅಸಾಧಿ ಹೆಸರು ಕೂಡ ಪ್ರಭಲವಾಗಿ ಕೇಳಿ ಬರುತ್ತಿದ್ದರೂ ಉಪಾಧ್ಯಕ್ಷ ಸ್ಥಾನ ಬೇಡ ಎಂಬ ಮನೋಭಾವ ಅವರದ್ದಾಗಿದೆ. ಈಗಾಗಲೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹೊಂದಿರುವ ರತ್ನಾಕರ್ ಶೆಟ್ಟಿ ಇರುವ ಹುದ್ದೆಯಲ್ಲಿ ಮುಂದುವರೆಯುವ ಆಸಕ್ತಿಯಲ್ಲೇ ಇದ್ದಂತಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post