ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ಬಿಇ ಪದವೀಧರ ಕಟ್ಟೇಗದ್ದೆ ಆಕರ್ಷ ರಾಜ್ (26) ಮೃತದೇಹ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ಕ್ರಾಸ್ ಸಮೀಪದ ಕೆರೆಯಲ್ಲಿ ಮುಂಜಾನೆ ಪತ್ತೆಯಾಗಿದೆ.
ಗುತ್ತಿಗೆದಾರ ಆಕರ್ಷ ರಾಜ್ ಬೆಂಗಳೂರಿನಲ್ಲಿ ಬಿಇ ಪದವಿ ಪಡೆದಿದ್ದರು. ಭಾನುವಾರ ಸಂಜೆ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗಾ ಹೋಗುವ ಮಾರ್ಗ ಮಧ್ಯೆ ದುರ್ಗಾ ಕ್ರಾಸ್ ಬಳಿ ಅವರು ತೆಗೆದುಕೊಂಡು ಹೋಗಿದ್ದ ಬ್ರಿಜ್ಜಾ ಕಾರು ವಿದ್ಯುತ್ ಕಂಬಕ್ಕೆ ತಗಲಿ ಅಪಘಾತವಾಗಿತ್ತು. ಅದೇ ದಿನ ಸಂಜೆಯಿಂದ ಆಕರ್ಷ ರಾಜ್ ಕಾಣೆಯಾಗಿದ್ದರು. ಮಂಗಳವಾರ ಬೆಳಿಗ್ಗೆ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಆದರೆ ಅದಕ್ಕೂ ಮೊದಲು ಕಾರು ಅಪಘಾತವಾದ ಸ್ಥಿತಿಯಲ್ಲಿಯೇ ಕಂಡು ಬಂದಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಆಕರ್ಷ ರಾಜ್ ಹಿರಿಯ ಸಹಕಾರಿ ಧುರೀಣ, ತೀರ್ಥಹಳ್ಳಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಕಟ್ಟೇಗದ್ದೆ ಹಾಲಪ್ಪ ದಂಪತಿಯ ದ್ವಿತೀಯ ಪುತ್ರ.
