ಸೇತುವೆ
ನಿರ್ಮಾಣ ವಿಳಂಬ - ಚುನಾವಣೆ ಬಹಿಷ್ಕಾರ
ಸಂಪರ್ಕದ
ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ
ಸೇತುವೆ
ಕುಸಿದು ವಾಹನ ಸ್ಥಗಿತಗೊಂಡು 4 ವರ್ಷ ಕಳೆದರು ಹೊಸಸೇತುವೆ ನಿರ್ಮಾಣವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ
ಆಗಿದ್ದು ಟೆಂಡರ್ ಕರೆಯಲಾಗಿದೆ ಎಂಬ ಉತ್ತರ ಆಡಳಿತದಿಂದ ಸಿಗುತ್ತಿದೆ. ಸೇತುವೆ ನಿರ್ಮಾಣ
ವಿಳಂಬವಾದರೆ ಚುನಾವಣೆ ಬಹಿಷ್ಕರಿಸಲಾಗುತ್ತದೆ. ಶಿವಮೊಗ್ಗ -ತೀರ್ಥಹಳ್ಳಿ ಸಂಪರ್ಕದ ರಾಷ್ಟ್ರೀಯ
ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದು ಬೈಲುಬಡಿಗೆ – ಹಿರೇಬೈಲು
ಗ್ರಾಮಸ್ಥರು ಶುಕ್ರವಾರ ಬೆಜ್ಜವಳ್ಳಿ ನಾಡಕಚೇರಿ ಪ್ರತಿಭಟನೆ ನಡೆಸಿ ಎಚ್ಚರಿಸಿದರು.ಬೈಲುಬಡಿಗೆ, ಹಿರೇಬೈಲು ಸೇರಿದಂತೆ ಅನೇಕ ಗ್ರಾಮಗಳ ಜನರಿಗೆ ಕುಸಿದ ಸೇತುವೆ ಮಾರ್ಗ ಅತೀ ಹತ್ತಿರವಾಗಿದೆ. ಸೇತುವೆ ಇಲ್ಲದ ಕಾರಣ ಸುಮಾರು 15 ಕಿ.ಮೀ. ದೂರದಿಂದ ಕ್ರಮಿಸಿ ಪ್ರಮುಖ ಮಾರ್ಗ ಸಂಪರ್ಕಿಸಬೇಕಿದೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಪರಿಶಿಷ್ಟ ಪಂಗಡ, ವರ್ಗದ ಕುಟುಂಬದವರ ವಾಸ ಹೆಚ್ಚಾಗಿದ್ದು ಸೇತುವೆ ಇಲ್ಲದೆ ಸಂಚಾರಕ್ಕೆ ತುಂಬಾ ತೊಂದರೆ ಆಗಿದೆ. ಜನರ ಬೇಡಿಕೆಯನ್ನು ಆಡಳಿತ ಹಗುರವಾಗಿ ಪರಿಗಣಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಬೆಜ್ಜವಳ್ಳಿ ಗ್ರಾ.ಪಂ. ಸದಸ್ಯ ಮೇಲಿನಕೊಪ್ಪ ಹರೀಶ್ ಹೇಳಿದರು.
ಹಿಂದೆ ಸಚಿವರಾಗಿದ್ದ ಈಶ್ವರಪ್ಪ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಸಚಿವ ಆರಗ ಜ್ಞಾನೇಂದ್ರ 4 ವರ್ಷದ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು 2 ವರ್ಷದಿಂದ ಸುಳ್ಳು ಹೇಳಲಾಗುತ್ತಿದೆ. ಸೇತುವೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು 1 ವರ್ಷದಿಂದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. 3 ತಿಂಗಳ ಒಳಗೆ ಸೇತುವೆ ಕಾಮಗಾರಿ ಆರಂಭವಾಗದಿದ್ದರೇ ಜನಪ್ರತಿನಿಧಿ, ಅಧಿಕಾರಿಗಳಿಗೆ ಘೇರಾವ್ ಹಾಕಲಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ
ನೂರಾರು ಗ್ರಾಮಸ್ಥರು ಸೇರಿ ತಹಶೀಲ್ದಾರ್,
ಇತರೆ ಅಧಿಕಾರಿಗಳ ಬಳಿ ಅಹವಾಲು
ಮಂಡಿಸಿದರು. ಈ ಸಂದರ್ಭದಲ್ಲಿ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೂರು ಉಮೇಶ್, ಗಬಡಿ ಉದಯ್, ತೂದೂರು ಗ್ರಾ.ಪಂ. ಸದಸ್ಯರಾದ ಶರತ್, ರಕ್ಷಿತಾ ಗ್ರಾಮಸ್ಥರಾದ ಸುಬ್ರಹ್ಮಣ್ಯ, ಹಿರೇಬೈಲು ಸತ್ಯಪ್ಪ,
ಸುರೇಶ್ ಬೈಲುಬಡಿಗೆ ಸೇರಿದಂತೆ ಅನೇಕರು
ಇದ್ದರು. ತಹಶೀಲ್ದಾರ್ ಅಮೃತ್ ಅತ್ರೇಶ್ ಮನವಿ ಸ್ವೀಕರಿಸಿದರು.


