ಟಿ.ಎಲ್‌. ಸುಂದರೇಶ್‌ ಹೆಸರು ಜೆಡಿಎಸ್‌ನಲ್ಲಿ ಎಂಟ್ರಿ

ಯಡೂರು ರಾಜರಾಂಗೆ ಕೊಕ್...?
ಕ್ಷೇತ್ರ ಜೆಡಿಎಸ್‌ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ…?
ದಕ್ಷಿಣ ಕನ್ನಡ ವಲಸಿಗರ ವಲಯದಲ್ಲಿ ಪರಿಚಿತರಾಗಿರುವ ಸುಂದರೇಶ್‌ಗೆ ಮಣೆ..?


ರಾಜ್ಯ ವಿಧಾನಸಭಾ ಚುನಾವಣೆ ಬಹುತೇಕ 2023ರ ಮೇ ತಿಂಗಳಿನಲ್ಲಿ ನಡೆಯಲಿದೆ ಎನ್ನುವ ಮಾತು ಕೇಳಿ ಬರುತ್ತಿದ್ದರೂ ಅದಕ್ಕೂ ಮೊದಲು ಡಿಸೆಂಬರ್‌ ಅಂತ್ಯಕ್ಕೆ ಬಂದರೂ ಅಚ್ಚರಿಯಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮೀಕ್ಷೆಗಳು ಒಂದೆಡೆ ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನಗಳು ದೊರಕಲಿದೆ ಎನ್ನುವ ಭವಿಷ್ಯ ನುಡಿದಿದ್ದು ಬಳಿಕ ಬಿಜೆಪಿ ಮತ್ತು ಜೆಡಿಎಸ್‌ ಹಿಂಬಾಲಿಸಲಿವೆ ಎಂದಿವೆ.

ಈ ನಡುವೆ ಕಳೆದ ಬಾರಿಯಂತೆ ಅತಂತ್ರ ಸರ್ಕಾರ ರಚನೆಯಾದಲ್ಲಿ ಮತ್ತೊಮ್ಮೆ ಕಿಂಗ್‌ ಮೇಕರ್‌ ಆಗುವ ಹುಮ್ಮಸ್ಸಿನಲ್ಲಿರುವ ಜೆಡಿಎಸ್‌ ಕನಿಷ್ಟ 30 ಸ್ಥಾನವನ್ನಾದರೂ ಗೆದ್ದು ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಟಾಂಗ್‌ ಕೊಡುವ ಆಲೋಚನೆಯನ್ನು ಮಾಡುತ್ತಿದೆ. ತೀರ್ಥಹಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 80ರ ದಶಕದಲ್ಲಿ ಜನತಾದಳದ (ಅವಿಭಜಿತ) ಮೂಲಕ ಡಿ.ಬಿ.ಚಂದ್ರೇಗೌರಂತಹ ಮುತ್ಸದಿ ರಾಜಕಾರಣಿಯನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದ ಜೆಡಿಎಸ್‌ ಬಳಿಕ ಕಿಮ್ಮನೆ ರತ್ನಾಕರ್‌ ಅವರ ಮುಂದಾಳತ್ವದಲ್ಲಿ ಸಾಕಷ್ಟು ಭದ್ರವಾಗಿಯೇ ತಾಲ್ಲೂಕಿನಲ್ಲಿ ಬೇರೂರಿತ್ತು.

ಆದರೆ 2004ರಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ತಮ್ಮ ಪರವಾಗಿ ಚುನಾವಣೆ ಪ್ರಚಾರಕ್ಕೆ ಆಹ್ವಾನಿಸಿಯೂ ಮುಂದೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಿಮ್ಮನೆ ತಮ್ಮ ಪರಿವಾರ ಸಮೇತ ಕಾಂಗ್ರೆಸ್‌ ಪಾಳಯಕ್ಕೆ ಜಿಗಿದರೋ ಅಲ್ಲಿಗೆ ಜೆಡಿಎಸ್‌ ಮುಂದಿನ ಎರಡು ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳುವ ನಾಯಕನನ್ನೂ ಸೃಷ್ಟಿಸಲಿಲ್ಲ. ಕಿಮ್ಮನೆ ಬಳಿಕ ಮಣಿ ಹೆಗ್ಡೆ ಭಾರಿ ಉಮೇದಿನಲ್ಲಿ ಪಕ್ಷ ಸಂಘಟನೆಗೆ ಬಂದರಾದರೂ ಆಗಲೇ ಅಲ್ಲಿ ಭದ್ರವಾಗಿ ಬೇರೂರಿದ್ದ ಅಳಿದುಳಿದ ದಂಡ ನಾಯಕರು ಅವರನ್ನು ಕೆಲವೇ ಕಾಲದಲ್ಲಿ ಓಡಿಸುವಲ್ಲಿ ಯಶಸ್ವಿಯಾದರು. ಬಳಿಕ ಬಿಜೆಪಿಯಿಂದ ಜೆಡಿಎಸ್‌ಗೆ ಆಗಮಿಸಿದ್ದ ಆರ್‌. ಮದನ್‌ ವಿಶ್ವಾಸಾರ್ಹ ನಾಯಕನಾಗಿ ಬೆಳೆಯತೊಡಗಿದರಲ್ಲದೇ 2013ರ ಚುನಾವಣೆಯಲ್ಲಿ 22 ಸಾವಿರಕ್ಕೂ ಹೆಚ್ಚಿನ ಮತ ಪಡೆಯುವ ಮೂಲಕ ಭಾರಿ ಭರವಸೆ ಮೂಡಿಸಿದ್ದರು. ಆದರೆ 2018ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಎಂ. ಮಂಜುನಾಥ ಗೌಡ ಅವರು 40 ಸಾವಿರಕ್ಕೂ ಹೆಚ್ಚು ಮತ ಪಡೆದು ರಾಜಕೀಯ ಶಕ್ತಿ ತೋರಿದರೂ ಕೂಡ ಗೆಲುವು ಸಾಧ್ಯವಾಗಲಿಲ್ಲ. ಮಂಜುನಾಥ ಗೌಡ ಜೆಡಿಎಸ್‌ ತ್ಯಜಿಸಿದ ನಂತರ ಮತ್ತೆ  ಸಂಘಟನೆ ಶಿಥಿಲಾವಸ್ಥೆ ತಲುಪ ತೊಡಗಿತು.

ಈಗ ಕೆಲವೇ ತಿಂಗಳ ಹಿಂದೆ ಯುವ ನಾಯಕ ಯಡೂರು ರಾಜಾರಾಂ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಆಗಮಿಸಿದ್ದಲ್ಲದೆ ಹಾಗೇ ಬರುತ್ತಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರೇ ಘೋಷಣೆ ಮಾಡಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು. ಇತ್ತೀಚೆಗೆ ಕುವೆಂಪು ವೃತ್ತದಲ್ಲಿ ಜೆಡಿಎಸ್‌ ಕಚೇರಿ ಕೂಡ ರಾಜಾರಂ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ರಾಜಾರಾಂ ಹುಮ್ಮಸ್ಸಿನಿಂದಲೇ ಸಂಘಟನೆಯ ಕೆಲಸಗಳನ್ನೂ ಕೂಡ ಆರಂಭಿಸಿದ್ದಾರೆ.

ಈ ನಡುವೆ ಕಾಂಗ್ರೆಸ್‌ನ ಹಿರಿಯ ಮುಖಂಡ ಟಿ.ಎಲ್.‌ ಸುಂದರೇಶ್‌ ಜೆಡಿಎಸ್‌ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಶೃಂಗೇರಿ ಕ್ಷೇತ್ರದಲ್ಲಿ ಬಹುತೇಕ ಜೆಡಿಎಸ್‌ ಆಭ್ಯರ್ಥಿಯಾಗಲಿರುವ ಸುಧಾಕರ್‌ ಶೆಟ್ಟಿ ರಾಜಕಾರಣದ ಸಿದ್ದಾಂತ ಮೀರಿ ಸುಂದರೇಶ್‌ ಅವರಿಗೆ ಆಪ್ತರು. ಕಳೆದ ವರ್ಷವೇ ಅಂದರೆ ಯಡೂರು ರಾಜರಾಂ ಜೆಡಿಎಸ್‌ಗೆ ಆಗಮಿಸುವ ಮೊದಲೇ ಸುಂದರೇಶ್‌ ಸೇರ್ಪಡೆಯಾದಲ್ಲಿ ವಿಧಾನಸಭಾ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಆಫರ್‌ ಒಂದನ್ನು ಕುಮಾರಸ್ವಾಮಿ ಅವರ ಜೊತೆ ಚರ್ಚೆಯಾದ ಬಳಿಕ ಸುಂದರೇಶ್‌ ಅವರಿಗೆ ಸುಧಾಕರ್‌ ಶೆಟ್ಟರು ನೀಡಿದ್ದರು. ಆದರೆ, ಆಗ ಸುಂದರೇಶ್‌ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು ಎನ್ನಲಾಗಿದೆ.

ಸುಮಾರು ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವ ಉಳ್ಳ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಇದನ್ನು ಮೀರಿ ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾಗ ತಾಲ್ಲೂಕಿನಾದ್ಯಂತ ಜನ ಸಾಮಾನ್ಯರ ಪರಿಚಯ ಉಳ್ಳ ಸುಂದರೇಶರನ್ನು ಜೆಡಿಎಸ್‌ನ ಈಗಿನ ಬಿಕ್ಕಟ್ಟಿನ ಕಾಲದಲ್ಲಿ ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಆಲೋಚನೆ ಕುಮಾರಸ್ವಾಮಿಯಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆಯಾದ ಬಳಿಕ ಇಡೀ ಜಿಲ್ಲೆಯಲ್ಲಿಯೇ ಒಂದು ಮಟ್ಟಿಗೆ ಈಡಿಗ ಸಮುದಾಯದಲ್ಲಿ ಚಿರಪರಿಚಿತರಾಗಿರುವ ವ್ಯಕ್ತಿಯ ಹುಡುಕಾಟದಲ್ಲಿರುವ ಜೆಡಿಎಸ್‌ ಚುರುಕಾಗಿ ಜನರೊಂದಿಗೆ ವ್ಯವಹರಿಸಬಹುದಾದ ಸಾಮರ್ಥ್ಯವಿರುವ ಹಾಗೂ ಸರಾಗವಾಗಿ ತುಳು ಮಾತನಾಡುವ ಮೂಲಕ ಈಡಿಗ ಸಮುದಾಯವಲ್ಲದೇ ದಕ್ಷಿಣ ಕನ್ನಡದ ವಲಸಿಗ ಕೃಷಿ ಕಾರ್ಮಿಕ ವಲಯದಲ್ಲೂ ಪರಿಚಿತರಾಗಿರುವ ಸುಂದರೇಶ್‌ ಮೇಲೆ ಒಂದು ಕಣ್ಣಿಟ್ಟಿದೆ ಎನ್ನಲಾಗಿದೆ.

ಹಾಗೆ ನೋಡಿದರೆ ತೀರ್ಥಹಳ್ಳಿಯಲ್ಲಿ ಜೆಡಿಎಸ್‌ ಗೆಲ್ಲವುದು ಸುಲಭದ ಮಾತಲ್ಲ ಎನ್ನುವುದು ಕುಮಾರಸ್ವಾಮಿಯವರಿಗೂ ಗೊತ್ತಿದೆ. ಸರಿಯಾಗಿ ಅವರನ್ನು ಉಪಯೋಗಿಸಿಕೊಂಡು ಬಿಜೆಪಿ ಅಥವಾ ಕಾಂಗ್ರೆಸ್‌ ಯಾರನ್ನು ಸೋಲಿಸಬೇಕಾಗಿದೆಯೋ ಆ ವಿಚಾರಕ್ಕಂತೂ ಸುಂದರೇಶ್‌ ಬಳಸಿಕೊಳ್ಳಬಹುದಾದ ನಿಟ್ಟಿನಲ್ಲಿಯೂ ಚರ್ಚೆಗಳು ನಡೆದಿದೆ. ಹಾಗಾದಲ್ಲಿ ಸೋಲುವ ಗ್ರಹಚಾರ ಬಿಜೆಪಿ ಅಭ್ಯರ್ಥಿಯದ್ದೋ ಅಥವಾ ಕಾಂಗ್ರೆಸ್‌ನದ್ದೋ ಎನ್ನುವುದು ಚುನಾವಣೆಯಲ್ಲಿ ತೀರ್ಮಾನವಾಗಲಿದೆ. ಸದ್ಯಕ್ಕೆ ಜೆಡಿಎಸ್‌ ಘೋಷಿತ ಅಭ್ಯರ್ಥಿ ಯಡೂರು ರಾಜರಾಂ ಕ್ಷೇತ್ರ ತಿರುಗಾಟದಲ್ಲಿರುವ ನಡುವೆ ಟಿ.ಎಲ್.‌ ಸುಂದರೇಶ್‌ ಅವರ ಹೆಸರು ರಾಜಕೀಯ ವಯದಲ್ಲಿ ಚಾಲ್ತಿ ಪಡೆದರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ. ಶೃಂಗೇರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯೆಂದೇ ಬಿಂಬಿತರಾಗಿರುವ ಸುಧಾಕರ ಶೆಟ್ಟಿ ಜೊತೆಗಿ ಮಾತುಕತೆ ಕಾರ್ಯರೂಪಕ್ಕೆ ಬಂದರೆ ಯಡೂರು ರಾಜರಾಂಗೆ ಜೇಡಿಎಸ್‌ ಕೊಕ್‌ ನೀಡುವುದು ಬಹುತೇಕ ಖಚಿತ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post