ಪರಿಹಾರ ನೀಡಲು ಆಡಳಿತ ವಿಫಲ

ಗೃಹಸಚಿವರು ಬೆಂಗಳೂರು-ತೀರ್ಥಹಳ್ಳಿ ಟ್ರಿಪ್‌ಗೆ ಸೀಮಿತ
ತಾಲ್ಲೂಕು ಆಡಳಿತ ನಿಯಂತ್ರಿಸಲು ವಿಫಲ
ಸಚಿವರ ಮಾತು ಅಧಿಕಾರಿಗಳಿಗೆ ಲೆಕ್ಕಕಿಲ್ಲ
ನಿಜ ಪ್ರಾಮಾಣಿಕ ರಾಜಕಾರಣಿ ಕಡಿದಾಳು ಮಂಜಪ್ಪ

ಗೃಹಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲೇ ಆಡಳಿತ ನಿಯಂತ್ರಿಸಲು ವಿಫಲರಾಗಿದ್ದಾರೆ. ಅಧಿಕಾರಿಗಳು ಆಡಿದ್ದೇ ಆಟ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಸಚಿವರ ಗಮನಕ್ಕೂ ತಾರದೆ ಕೆಲವು ಕೆಲಸದಲ್ಲಿ ಭಾಗಿಯಾಗಿದ್ದಾರೆ. ಮಳೆಯಿಂದ ಭಾರಿ ಪ್ರಮಾಣದ ಹಾನಿಯಾಗಿದ್ದು ಪರಿಹಾರ ನೀಡುವ ಕ್ರಮಕ್ಕೆ ತಾಲ್ಲೂಕು ಆಡಳಿತ ಮುಂದಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಎಲ್ಲಾ ತಹಶೀಲ್ದಾರ್‌ ಖಾತೆಯಲ್ಲಿ ಪರಿಹಾರ ಹಣ ಇದೆ ಎಂದು ಹೇಳುತ್ತಿದ್ದಾರೆ. ಆದರೆ ತೀರ್ಥಹಳ್ಳಿ ತಹಶೀಲ್ದಾರ್‌ ಖಾತೆಯಿಂದ ಸಂತ್ರಸ್ತರಿಗೆ ಹಣ ಸಂದಾಯವಾಗಿಲ್ಲ. ಹಣದ ಕೀಲಿಕೈ ಯಾರ ಹತ್ತಿರ ಇದೆ ಎಂದು ಕುಟುಕಿದರು.

ಕೆಪಿಸಿಸಿ ನಿರ್ದೇಶನದಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ 75 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಅನೇಕ ಮಹನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಅವರ ಸ್ಮರಣಾರ್ಥ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಸಮಾಧಿಯಿಂದ ತೀರ್ಥಹಳ್ಳಿಯ ತಾಲ್ಲೂಕು ಕಚೇರಿಯ ವರೆಗೆ ಜುಲೈ 28ರ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಪಾದಯಾತ್ರೆ ನಡೆಯಲಿದೆ. ಕಡಿದಾಳು ಮಂಜಪ್ಪ ಸ್ವಾತಂತ್ರ್ಯ ಹೋರಾಟ ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮಧ್ಯಾಹ್ನ ತಾಲ್ಲೂಕು ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ ಎಂದು ಮಂಜುನಾಥ ಗೌಡ ತಿಳಿಸಿದರು. ಸಿಎಂ ಪದತ್ಯಾಗದ ನಂತರ ಹಣಕ್ಕಾಗಿ ವಕೀಲಿ ವೃತ್ತಿ ಮುಂದುವರೆಸಿದವರು. ಅವರು ನಿಜ ಪ್ರಾಮಾಣಿಕ ರಾಜಕಾರಣಿ, ಸಮಾಜವಾದಿಯಾಗಿದ್ದರು ಎಂದರು

ಕಾಂಗ್ರೆಸ್‌ ಮುಖಂಡ, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಬೆಟ್ಟಮಕ್ಕಿಯಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ದೊರೆತಿಲ್ಲ. ಸರ್ಕಾರ ಆದೇಶ, ಪರಿಹಾರ ಎಲ್ಲವು ಹೇಳಿಕೆಗೆ ಮತ್ತು ಸರ್ಕಾರಿ ಪತ್ರ ವ್ಯವಹಾರಕ್ಕೆ ಸೀಮಿತವಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಗ್ರಾಮ ವಾಸ್ತವ್ಯ ಸರ್ಕಾರಿ ಪ್ರಚೋದಿತ ನಾಟಕದಂತೆ ಕಾಣಿಸುತ್ತಿದ್ದು ಜನ ಸಾಮಾನ್ಯರ ಕೆಲಸ ಆಗುತ್ತಿಲ್ಲ. ಪೂರ್ಣ ಮನೆ ಕಳೆದುಕೊಂಡ ಕುಟುಂಬ ಬಸ್‌ ನಿಲ್ದಾಣ, ಕೋಳಿ ಒಡ್ಡಿಗಳಲ್ಲಿ ವಾಸಿಸುತ್ತಿದ್ದರು ಕಂದಾಯ ಅಧಿಕಾರಿಗಳು ಸರ್ವೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಆಡಳಿತ ತಕ್ಷಣ 15 ಸಾವಿರ, ಪೂರ್ಣ ಪ್ರಮಾಣದ ಹಾನಿಗೆ 6 ಲಕ್ಷ ಪರಿಹಾರ ಘೋಷಿಸಿದ್ದರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಗೃಹಸಚಿವರು ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಾರೆ, ಗುದ್ದಲಿ, ಪಿಕಾಸಿ ಪೂಜೆಗೆ ಸೀಮಿತರಾಗಿದ್ದಾರೆ. ಸರ್ಕಾರದ ದುಸ್ಥಿತಿ ನೋಡಿ ಗ್ರಾಮಸ್ಥರೇ ಸಂತ್ರಸ್ತರಿಗೆ ಟಾರ್ಪಲ್‌, ಅಕ್ಕಿ, ಬಟ್ಟೆ ವ್ಯವಸ್ಥೆ ಮಾಡುತ್ತಿದ್ದಾರೆ. ಒಂದು ತಿಂಗಳೊಳಗೆ ಪರಿಹಾರ ನೀಡದಿದ್ದರೆ ತಾಲ್ಲೂಕು ಕಚೇರಿ ಮುಂಭಾಗ ವಾಸ್ತವ್ಯ ಹೂಡುತ್ತೇವೆ. ಸರ್ಕಾರ ಬಳಿ ಹಣ ಇಲ್ಲದಿದ್ದರೆ ಕಾಂಗ್ರೆಸ್‌ ವತಿಯಿಂದ ಬಿಕ್ಷೆ ಬೇಡಿ ಮಳೆಹಾನಿ ಪರಿಹಾರ ನೀಡುವ ಆಂದೋಲನ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಲ್‌. ಸುಂದರೇಶ್‌ ಮಾತನಾಡಿ, ನಾಲೂರು, ಬಿದರಗೋಡು, ಹೊನ್ನೇತಾಳು, ಆಗುಂಬೆ, ಗಾರ್ಡರಗದ್ದೆ, ಮೇಗರವಳ್ಳಿ ಭಾಗದಲ್ಲಿ ಹೆಚ್ಚಿನ ಹಾನಿಯಾಗಿದೆ. ತಾಲ್ಲೂಕಿನ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ತಣ್ಣೀರು ಸ್ನಾನದಿಂದಾಗಿ ವಿದ್ಯಾರ್ಥಿಗಳು ಚಳಿಯಿಂದ ಕಾಯಿಲೆ ಬೀಳುವಂತಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಯಾವುದೇ ಸ್ವಂದನೆ ಆಡಳಿತದಿಂದ ಸಿಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಸದಸ್ಯರಾದ ಬಿ. ಗಣಪತಿ, ಸುಶೀಲ ಶೆಟ್ಟಿ, ಗೀತಾ, ಮಂಜುಳಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪಿ. ರಾಮಚಂದ್ರ, ಹಾರೊಗೊಳಿಗೆ ಪದ್ಮನಾಬ್‌, ಬೇಡನಬೈಲು ಯಲ್ಲಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪರಮೇಶ್ವರ್‌, ಕೊಡಚಾದ್ರಿ ಮಹಿಳಾ ಬ್ಯಾಂಕ್‌ ಅಧ್ಯಕ್ಷೆ ಚೇತನಾ ಮತ್ತಿತರರು ಇದ್ದರು.

 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post