ಕುಪ್ಪಳ್ಳಿಯಿಂದ ತೀರ್ಥಹಳ್ಳಿಗೆ ಬೃಹತ್‌ ಕಾಲ್ನಡಿಗೆ

ತೀರ್ಥಹಳ್ಳಿಗೆ ಬರ್ತಾರೆ ಹುಲಿಯಾ...

ಪಾದಯಾತ್ರೆ ಅಂದಾಗ ನಕ್ಕುಬಿಟ್ರು ಕಿಮ್ಮನೆ…
ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ…‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್… ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಜರ್

 ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣಕ್ಕೆ ಪಾದಯಾತ್ರೆ ಸೇರಿಸಬಹುದು ಎಂದು ಪತ್ರಕರ್ತರೊಬ್ಬರು ಹೇಳಿದರು. ಅದಕ್ಕೆ ಹಿರಿಯ ಪತ್ರಕರ್ತ ರಾಮಚಂದ್ರ ಕೊಪ್ಪಲು ಮೂರು ಜನರ ಪಾದಯಾತ್ರೆ ಕೇಳಿ ಬೇಸರ ಆಗಿದೆ ʼಪಯಣʼನೇ ಇರಲಿ ಎಂದರು. ಅಷ್ಟರಲ್ಲಾಗಲೇ ಪಾದಯಾತ್ರೆಯ ನೆನಪುಗಳನ್ನು ಮೆಲುಕು ಹಾಕಿದ ಮುಖಂಡರು ಮುಗುಳುನಗೆ ತೋರಿಸಿದ್ದರು. ಕಿಮ್ಮನೆನೂ ತಡೆಯಲಾಗದೆ ನಕ್ಕು ಬಿಟ್ರು.

ಕಾಲ್ನಡಿಗೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನ ಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌, ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಮಾಜಿ ಶಾಸಕ ವೈಎಸ್‌ವಿ ದತ್ತಾ, ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ರಮೇಶ್‌ ಹನಗವಾಡಿ, ಕೆ.ಎ. ವಿಮಲ, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್. ಆರ್‌. ಬಸವರಾಜಪ್ಪ, ಮುಖಂಡ ಕೆ.ಟಿ. ಗಂಗಾಧರ್‌, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಗುರುಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆ. 

ಪಠ್ಯ ಪರಿಷ್ಕರಣೆಯಲ್ಲಿ ಸಮಿತಿಯಿಂದ ವೈಚಾರಿಕ, ಸಾಂಸ್ಕೃತಿಕ ಚಿಂತಕರಿಗೆ ಅವಮಾನ ಮತ್ತು ಅಧ್ಯಕ್ಷ ರೋಹಿತ್‌ ಚಕ್ರತೀರ್ಥನಿಂದ ನಾಡಗೀತಗೆ ಆಗಿರುವ ಅಗೌರವ ಖಂಡಿಸಿ ತೀರ್ಥಹಳ್ಳಿಯಲ್ಲಿ ಬೃಹತ್‌ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ. ʼಕುವೆಂಪು ವಿಶ್ವಮಾನವ ವೇದಿಕೆʼ ನೇತೃತ್ವದಲ್ಲಿ ಜೂನ್‌ 15ರ ಬುಧವಾರ ಬೆಳಿಗ್ಗೆ ಕುಪ್ಪಳ್ಳಿಯ ಕವಿಶೈಲ ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ ಕಾಲ್ನಡಿಗೆಯನ್ನು ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜಾತಿ ಧರ್ಮದ ಆಧಾರದಲ್ಲಿ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಸಮಾಜದ ಆಗು ಹೋಗುಗಳ ಜ್ಞಾನ ಪಡೆಯಬೇಕಿದ್ದ ವಿದ್ಯಾರ್ಥಿಗಳನ್ನು ಕತ್ತಲಿಗೆ ತಳ್ಳುವ ಕೆಲಸ ಶಿಕ್ಷಣ ಇಲಾಖೆಯಿಂದ ನಡೆಯುತ್ತಿದೆ. ಈಗಾಗಲೇ ಇಲಾಖೆಯಲ್ಲಿ ರಾಜ್ಯ, ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯ ಕ್ರಮದಿಂದ ಗೊಂದಲ ಏರ್ಪಟ್ಟಿದೆ. ಶಿಕ್ಷಣ ವಿದ್ಯಾರ್ಥಿಗಳ ಸಮಾನತೆ ಕಸಿದುಕೊಳ್ಳುವಂತಾಗಿದೆ. ವ್ಯವಸ್ಥೆಯನ್ನು ಸರಿಪಡಿಸುವ ಬದಲು ಕಲುಷಿತ ಮಾಡುವ ಪ್ರಯತ್ನ ನಡೆದಿದೆ. ಘಟನೆಯ ನಂತರ ಶಿಕ್ಷಣ ಸಚಿವ ನಾಗೇಶ್ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರ ಚರ್ಕತೀರ್ಥ ಪರವಾಗಿ ನಿಂತಿದೆ. ಆಡಳಿತದ ಕೀಲಿ ಕೈ ಸರ್ಕಾರದ ಸ್ವಾಧೀನದಲ್ಲಿ ಇಲ್ಲ ಎಂದು ಕುಟುಕಿದರು.

ಓರ್ವ ಸಾಹಿತಿ ಬರೆದಿದ್ದೆಲ್ಲಾ ಸಾಹಿತ್ಯ ಆಗುವುದಿಲ್ಲ. ಅದ್ಬುತವಾದ ಸಾಹಿತ್ಯ ರಚಿಸಿದವರು ಕೆಲವು ಸಂದರ್ಭ ಯಶಸ್ವಿಯಾಗಿಲ್ಲ. ಸಾಹಿತ್ಯ ಎಂದಾಗ ಗ್ರಾಮೀಣ ಬದುಕು, ನಗರ ಜೀವನ, ಕಾಡು, ಹಳ್ಳಿ, ಸುಖ, ದುಃಖ, ಸಂತೋಷ ಮುಂತಾದ ರೂಪಕ ಒಳಗೊಂಡ ಕ್ರಿಯಾತ್ಮಕ ಸಂವಹನ ನಡೆದಿರಬೇಕು. ತಿಳುವಳಿಕೆ ಇಲ್ಲದೆ ಅಪಹಾಸ್ಯ ಮಾಡುವರಿಗೆ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಸಾಹಿತ್ಯದ ಬಗ್ಗೆ ಊಹಾಪೋಹ ಚರ್ಚೆಯಾಗುತ್ತಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಮುಖಂಡರಾದ ಅಮ್ರಪಾಲಿ ಸುರೇಶ್‌, ವಿಲಿಯಂ, ಜಯಕರ ಶೆಟ್ಟಿ, ಕಿಸಾನ್‌ ಸೆಲ್‌ ಅಧ್ಯಕ್ಷ ಧರ್ಣೇಶ್‌, ಹಿಂದುಳಿದ ವರ್ಗದ ಅಧ್ಯಕ್ಷರಾದ ರಾಮಚಂದ್ರ ಜನಗಲ್,‌ ಬಸವಾನಿ ಉದಯ್‌ ಕುಮಾರ್ ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post