ಇಬ್ಬರು ಮುಖಂಡರು ಸಭೆ ಮಧ್ಯೆ ಕಾಲ್ಕಿತ್ತಿದ್ಯಾಕೆ

ಸುನಿಲ್‌ ಕುಮಾರ್‌, ಕುಮಾರ್‌ ಬಂಗಾರಪ್ಪ ಹಿಂಗ್ಯಾಕೆ
ಉತ್ಸಾಹ ಕಳೆದುಕೊಂಡರೇ ಬಿಜೆಪಿ ಕಾರ್ಯಕರ್ತರು
ಬಡವರ ಮಕ್ಕಳು ಸೈನ್ಯಕ್ಕೆ ಸೇರಲಿ - ಆರಗ
ನಾಡಗೀತೆಗೆ ಅವಮಾನಿಸಿದ್ರೆ..?
ಬಿಜೆಪಿ ಸಿದ್ಧಾಂತ ಒಪ್ಪಿ ಬಂದವರಲ್ಲ ನಾವು- ಕುಮಾರ್

ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಧನ ಸಚಿವ ಸುನಿಲ್‌ ಕುಮಾರ್‌ ಮತ್ತು ಶಾಸಕ ಕುಮಾರ್‌ ಬಂಗಾರಪ್ಪ ಯಾವ ಗಣ್ಯರಿಗೂ ಹೇಳದೇ ಕೇಳದೆ ಮಾತು ಮುಗಿಯುತ್ತಿದ್ದಂತೆ ಕಾಲ್ಕಿತ್ತರು. ಇಂಧನ ಸಚಿವರ ವರಸೆಯನ್ನು ಬಿಜೆಪಿ ಕಟ್ಟಾ ಅಭಿಮಾನಿಗಳು ಕಿಡಿ ನುಡಿಯಿಂದ ಟೀಕಿಸಿದರು. ಸಭೆಗೆ ಗೌರವ ನೀಡಲಿಲ್ಲ ಎಂಬ ಆಪಾದನೆ ಕೇಳಿ ಬಂತು. ಬಿಜೆಪಿಯ ಎಲ್ಲಾ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಕಾಣಿಸಿಕೊಳ್ಳುತ್ತಿದ್ದ ಕೆಲವು ಕಾರ್ಯಕರ್ತರು ಸಭೆಯಲ್ಲಿ ಇರಲಿಲ್ಲ. ಈ ಹಿಂದೆ ಘೋಷಣೆಗಳಿಗೆ ಮೊಳಗುತ್ತಿದ್ದ ಗಟ್ಟಿ ಧ್ವನಿಗಳು ಉತ್ಸಾಹ ಕಳೆದುಕೊಂಡ ಸ್ಥಿತಿ ಸಭೆಯಲ್ಲಿ ನಿರ್ಮಾಣವಾಗಿತ್ತು.


ಶಾಸಕ ಕುಮಾರ್‌ ಬಂಗಾರಪ್ಪ ಮಾತು ಆರಂಭಿಸುತ್ತಿದ್ದಂತೆ ಬಿಜೆಪಿ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬಂದಿಲ್ಲ. ಆದರೆ ಈಚೆಗೆ ನರೇಂದ್ರ ಮೋದಿ ಅವರ ಕೆಲಸ ಖುಷಿ ನೀಡಿದೆ. ಕೇಡರ್‌ ಬೇಸ್‌ನಿಂದ ಮಾಸ್‌ ಬೇಸ್‌ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮುತ್ತಿದೆ. ರಾಜ್ಯದಲ್ಲಿ 39 ಸೀಟ್‌ ಇದ್ದ ಬಿಜೆಪಿಯನ್ನು 79ಕ್ಕೆ ಏರಿಸಿದ ಕೀರ್ತಿ ಬಂಗಾರಪ್ಪಜೀಗೆ ಸೇರುತ್ತದೆ. ಚೀನಾ ಎದುರಿಸುವ ಉದ್ದೇಶದಿಂದ 100 ವರ್ಷದ ದೂರಾಲೋಚನೆಯಿಂದ ಅಗ್ನಿಪಥ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಶಾಲಾ ಶುಲ್ಕ ಭರಿಸಲಾಗದ ವಿದ್ಯಾರ್ಥಿಗಳು, ಬಡ ಬಗ್ಗರ ಮಕ್ಕಳು ಅಗ್ನಿಪಥ ಯೋಜನೆಯಲ್ಲಿ ಸೈನ್ಯಕ್ಕೆ ಸೇರಲಿ. 4 ವರ್ಷದ ಸೇನೆಯ ಸೇವೆಯಿಂದ ಆರ್ಥಿಕವಾಗಿ ಬಡವರು ಚೇತರಿಸಿಕೊಳ್ಳುತ್ತಾರೆ. ದೇಶದಲ್ಲಿ 40 ಸಾವಿರ ಸೈನಿಕ ನೇಮಕಾತಿ ನಡೆಯುತ್ತಿದೆ. ಗೃಹ ಇಲಾಖೆಯ ನೇಮಕಾತಿಯಲ್ಲಿ ಅಗ್ನಿ ವೀರರಿಗೆ ವಿಶೇಷ ರಿಯಾಯಿತಿ ನೀಡುತ್ತೇವೆ, ಪೊಲೀಸ್‌ ಇಲಾಖೆ, ಅಗ್ನಿ ಶಾಮಕ ದಳ, ಸೆಕ್ಯೂರಿಟಿ ಹುದ್ದೆಗಳಿಗೆ ಅವಕಾಶ ನೀಡುತ್ತೇವೆ. ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಸೇರುವ ಬದಲು ರಾಷ್ಟ್ರಸೇವೆ ಮಾಡಲಿ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಬಿಜೆಪಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಮೋರ್ಚಾ ಆಯೋಜಿಸಿದ್ದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ ದುರಾಡಳಿತದಿಂದ ಸಣ್ಣ ಸಮೂದಾಯ ಗುರುತಿಸಿ ಮೇಲಕ್ಕೆತ್ತುವ ಕೆಲಸ ಆಗಲಿಲ್ಲ. ವಿದ್ಯಾರ್ಥಿಗಳನ್ನು ಪ್ರಚೋಧಿಸಿ ದೇಶದ ಸಂಪತ್ತಿಗೆ ಬೆಂಕಿ ಹಚ್ಚುತ್ತಿದ್ದಾರೆ. ನಗಣ್ಯವಾಗಿರುವ ಕಾಂಗ್ರೆಸ್‌ ಪಕ್ಷ ಸ್ಥಾನ ಕಳೆದುಕೊಂಡು ಅಸ್ಥಿತ್ವ ಉಳಿಸುವ ಹೋರಾಟ ಮಾಡುತ್ತಿದೆ. ಸಮಗ್ರ ಅಭಿವೃದ್ದಿ ಸಹಿಸದೇ ಹೀನ ಕೃತ್ಯಕ್ಕೆ ಸಾಕ್ಷಿಯಾಗುತ್ತಿದೆ. ಮೋದಿ ಸರ್ಕಾರದ ಉಪಕಾರ ಪಡೆದ ಸಮೂದಾಯ ಗಟ್ಟಿಧ್ವನಿಯಾಗುತ್ತಿಲ್ಲ. ಸಂವಿಧಾನದ ಹೆಸರಿನಲ್ಲಿ ಪ್ರಜಾಪ್ರಭುತ್ವ ದಮನ ಮಾಡುವ ಅನಾಚಾರ ನಡೆಯುತ್ತಿದೆ. ಕುವೆಂಪು ಹೆಸರಲ್ಲಿ ಒಕ್ಕಲಿಗ, ಅಂಬೇಡ್ಕರ್‌ ನೆಪದಲ್ಲಿ ಪರಿಶಿಷ್ಠ ಜಾತಿ, ಪಂಗಡ, ಬಸವಣ್ಣ ಜಪದಲ್ಲಿ ಲಿಂಗಾಯತ ಸಮೂದಾಯ ಎತ್ತಿಕಟ್ಟಲಾಗುತ್ತಿದೆ. ಇದೆಲ್ಲವೂ ಯಾರ ಮೇಲಿನ ಪ್ರೇಮ, ಭಕ್ತಿಯಿಂದ ಮಾಡುತ್ತಿಲ್ಲ. ಚುನಾವಣಾ ಪೂರ್ವ ಸಿದ್ದತೆಗಾಗಿ ಮಾಡಲಾಗುತ್ತಿದೆ ಎಂದು ದೂರಿದರು.

ಇಂಧನ ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಮಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಸಮೂದಾಯದ ಯುವಕರ ಕಗ್ಗೊಲೆಯಾದಾಗ ಕಾಂಗ್ರೆಸ್ ಮೌನವಹಿಸಿತ್ತು. ಅಂಬೇಡ್ಕರ್‌ ಹೆಸರಿನಲ್ಲಿ ರಾಜಕಾರಣ ಮಾಡುವವರಿಂದ ದೆಹಲಿಯಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಸಿಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಣ್ಣ ಸಮೂದಾಯಕ್ಕೂ ಅವಮಾನ ಮಾಡಿಲ್ಲ. ಓಬವ್ವ, ಕೈವಾರ ತಾತಯ್ಯ, ನಾರಾಯಣಗುರು, ಹಿಂದುಳಿದ ವರ್ಗಕ್ಕೆ 400 ಕೋಟಿ ಅನುದಾನ ನೀಡಿದ್ದೇವೆ. ಹಿಂದುಳಿದವರ ಸೋಗು ಹಾಕಿ ಕಾಂಗ್ರೆಸ್‌ ಮುಸ್ಲೀಂ ಓಲೈಕೆ ಮಾಡುತ್ತಿದೆ. ನಾವೇ ಹಿಂದುಳಿದ ವರ್ಗದ ಚಾಂಪಿಯನ್‌ ಎಂದು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲೇ ಕುರುಬ ಸಮೂದಾಯಕ್ಕೆ ಮಾನ್ಯತೆ ಸಿಕ್ಕಲಿಲ್ಲ. ಕನಕದಾಸರ ಜಯಂತಿಯನ್ನು ಯಡಿಯೂರಪ್ಪ ಸರ್ಕಾರ ಘೋಷಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕುಮಾರ ಬಂಗಾರಪ್ಪ, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋಕಮೂರ್ತಿ, ಜಿಲ್ಲಾಧ್ಯಕ್ಷ ಸಿ.ಹೆಚ್‌. ಮಾಲ್ತೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್‌ ಟಿ.ಡಿ., ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಮುಂತಾದವರು ಇದ್ದರು.

ನಾಡಗೀತೆ ವಿರೋಧಿ ಅಲ್ಲ ಎಂದು ಬಿಂಬಿಸುವ ಉತ್ಸಾಹದಲ್ಲಿ ಯಕ್ಷಗಾನ ರೂಪದಲ್ಲಿ ಹೊಸಬಗೆಯ ನಾಡಗೀತೆ ಕಾರ್ಯಕ್ರಮದಲ್ಲಿ ಮೊಳಗಿತು. ಭರತಮಾತೆ ಮುಂಭಾಗ ಯಕ್ಷಗಾನ ಕಲಾವಿದರು ಹೆಜ್ಜೆ ಹಾಕಿದರು. ನಾಡಗೀತೆಗೆ ಸಾಂಸ್ಕೃತಿಕ ರೂಪ ನೀಡುವ ಉದ್ದೇಶದಲ್ಲಿ ಮಾಡಿದ ನಾಡಗೀತೆ ಭಾಗವತಿಕೆ ವಿವಾದಕ್ಕೆ ಕಾರಣವಾಗಿದೆ. ವೇದಿಕೆಯಲ್ಲಿ ಕಲಾವಿದರು ಹೆಜ್ಜೆ ಹಾಕುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಕಲಾವಿದರು ಸಿಳ್ಳೆ ಹಾಕುವ ಮೂಲಕ ಯಕ್ಷಗಾನವನ್ನು ರಂಜಿಸಿದರು. ಮತ್ತೊಂದು ಕಡೆಯಿಂದ ಮೈಸೂರು ಅನಂತಸ್ವಾಮಿ ಅವರ ಅಧಿಕೃತಗೊಂಡ ರಾಗ ಸಂಯೋಜನೆ ಯಕ್ಷಗಾನಕ್ಕೆ ಇಳಿದಿತ್ತು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post