ಕರವೇ ತೊರೆಯುವ ನಿರ್ಧಾರ

ಕರವೇ ತೊರೆಯುವ ಸಿದ್ಧತೆಯಲ್ಲಿ ಸುರೇಂದ್ರ

ಸಭೆ ಕರೆದು ರಾಜೀನಾಮೆ

ಎರಡು ಜವಾಬ್ದಾರಿ ನಿರ್ವಹಿಸಲು ಕಷ್ಟ ಎಂಬ ಸಬೂಬು
ಪಕ್ಷದ ಆಜ್ಞೆ ಪಾಲಿಸಲು ಸಿದ್ದರಾದರೇ ಸುರೇಂದ್ರ…?


ವೆಂಕಟೇಶ್‌ ಹೆಗ್ಡೆ ಕರವೇಯ ಜಿಲ್ಲಾಧ್ಯಕ್ಷರಾದ ಬಳಿಕ ತಾಲ್ಲೂಕು ಅಧ್ಯಕ್ಷರಾಗಿ ನೇಮಕೊಂಡಿದ್ದ ಯಡೂರು ಸುರೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಸುರೇಂದ್ರ ಇತ್ತೀಚೆಗಷ್ಟೇ ಪಟ್ಟಣ ಆಶ್ರಯ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಧ್ಯಕ್ಷರಾದ ಆರಂಭದಲ್ಲಿ ಒಂದಿಷ್ಟು ಹೋರಾಟಗಳ ಮೂಲಕ ಸದ್ದು ಮಾಡಿದ್ದ ಸುರೇಂದ್ರ ಬಳಿಕ ತಮ್ಮ ರಾಜಕೀಯ ಗುರು ಆರ್.‌ ಮದನ್‌ ಬಿಜೆಪಿ ಸೇರುತ್ತಿದ್ದಂತೆಯೇ ಮೆತ್ತಗಾಗಿದ್ದರು. ರಾಜ್ಯ ಜಿಲ್ಲಾ ಮಟ್ಟದಲ್ಲಿ ಕರವೇ ನಾಡು ನುಡಿಯ ವಿಚಾರದಲ್ಲಿ ಹೋರಾಟಗಳನ್ನು ದಿಟ್ಟವಾಗಿ ಹಮ್ಮಿಕೊಳ್ಳುತ್ತಿದ್ದರೆ ತಮ್ಮ ಹೊಸ ಪಕ್ಷದ ವಿರುದ್ಧ ಹೋರಾಡಲು ಬೇಕಾದ ಧೈರ್ಯ ಹಾಗೂ ಬದ್ದತೆ ತೋರದೆ ಸುರೇಂದ್ರ ಅಂತಹ ಸಂದರ್ಭಗಳಲ್ಲಿ ಸುಮ್ಮನಿರುತ್ತಿದ್ದುದು ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಕರವೇ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

ಹಾಗೂ ಹೀಗೂ ಇತ್ತೀಚೆಗೆ ರೋಹಿತ್‌ ಚಕ್ರತೀರ್ಥನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಬುದ್ದ, ಬಸವಣ್ಣ, ನಾರಾಯಣಗುರು, ಅಂಬೇಡ್ಕರ್‌, ಕುವೆಂಪು ಸೇರಿದಂತೆ ಎಲ್ಲರನ್ನು ಅವಮಾನಿಸಿದ್ದಾರೆ. ಮುಖ್ಯವಾಗಿ ಕುವೆಂಪು ವಿರಚಿತ ನಾಡಗೀತೆಯನ್ನು ಅತ್ಯಂತ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂಬುದು ರಾಜ್ಯದಾದ್ಯಂತ ಪ್ರತಿಭಟನೆಗೆ ನಾಂದಿ ಹಾಡಿದ ಹಿನ್ನಲೆಯಲ್ಲಿ ತೀರ್ಥಹಳ್ಳಿಯಲ್ಲೂ ಕೂಡ ಕರವೇ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿಸಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಲ್ಲದೇ ರೋಹಿತ್‌ ಚಕ್ರತೀರ್ಥನ ವಿರುದ್ಧ ಕೆಂಡಕಾರಿದ್ದ ಸುರೇಂದ್ರರನ್ನು ಬಿಜೆಪಿ ಹಾಗೂ ಸಂಘ ಪರಿವಾರ ಪಡೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.


ಆ ಹಂತದಲ್ಲಿಯೇ ಆಶ್ರಯ ಸಮಿತಿ ಸದಸ್ಯರಾಗಿ ಆರಗ ಜ್ಞಾನೇಂದ್ರರ ಶಿಫಾರಸ್ಸಿನ ಮೇಲೆ ಆಯ್ಕೆಯಾಗಿದ್ದಾರೆ. ಪಕ್ಷದ ಆಂತರಿಕ ವಲಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಯಿತು. ಅಂತಿಮವಾಗಿ ಪಕ್ಷದ ಆಜ್ಞೆ ಹಾಗೂ ಎಲ್ಲರ ನಿರೀಕ್ಷೆಯಂತೆ ಬಹುತೇಕ ಸುರೇಂದ್ರ ಕರವೇ ಅಧ್ಯಕ್ಷ ಸ್ಥಾನವನ್ನು ತೊರೆದು ಇನ್ನು ಮುಂದೆ ಪಟ್ಟಣದ ಆಶ್ರಯ ಸಮಿತಿ ಸದಸ್ಯರಾಗಿ ಮುಂದುವರೆಯುವ ಸಾಧ್ಯತೆ ಇದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post