ಕೆ.ಪಿ. ನಾಗರಾಜ್ ಭಟ್ ವಿಧಿವಶ
ತೀರ್ಥಹಳ್ಳಿಯ ತುಂಗಾ ಕಾಲೇಜಿನ ಹಿರಿಯ ಸಿಬ್ಬಂದಿಗಳಗಿದ್ದ ಕೆ. ಪಿ ನಾಗರಾಜ್ ಭಟ್ಟ್ ಇವರು ತಮ್ಮ ಸೇವಾವಧಿಯಲ್ಲಿ ವಿಶಿಷ್ಟ ವ್ಯಕ್ತಿತ್ವದಿಂದ ಕಾಲೇಜಿನ ಸಹೋದ್ಯೋಗಿಗಳ, ಆಡಳಿತ ಮಂಡಳಿಯ, ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಗಮನಸೆಳೆದವರು.
ತೀರ್ಥಹಳ್ಳಿಯ ಸಮೀಪದ ಭಾರತೀಪುರದ, ವೃತ್ತಿಯಲ್ಲಿ ಕೃಷಿಕರಾದ ಕಲ್ಲಹಳ್ಳ ಕುಟುಂಬದ ಕೆ ಪುಟ್ಟ ಭಟ್ಟ್ ಮತ್ತು ನಾಗಮ್ಮ ದಂಪತಿಗಳ ಪುತ್ರರಾದ ಇವರು 4-7-1939 ರಲ್ಲಿ ಜನಿಸಿದರು. ತೀರ್ಥಹಳ್ಳಿಯ ಸಮೀಪದ ಭಾರತಿಪುರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣದ ಬಳಿಕ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದರು. ವೃತ್ತಿಜೀವನದ ಪ್ರಾರಂಭದಲ್ಲಿ ಶಿವಮೊಗ್ಗದ ಜಿ.ವಿ.ಎನ್ ಅಡಿಕೆ ಮಂಡಿಯಲ್ಲಿ ಮೂರು ವರ್ಷಗಳ ಕಾಲ ಗುಮಾಸ್ತರಾಗಿ ದುಡಿದು ನಂತರ 1967ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾದ ತುಂಗಾ ಕಾಲೇಜಿನ ಕಛೇರಿ ಸಿಬ್ಬಂದಿಯಾಗಿ ಸುದೀರ್ಘ ಸೇವೆ ಸಲ್ಲಿಸಿದವರು. ತುಂಗಾ ಕಾಲೇಜಿನ ಸ್ಥಾಪಕ ಅದ್ಯಕ್ಷರಾಗಿದ್ದ ಕಾಸರವಳ್ಳಿ ರಾಮಕೃಷ್ಣ ರಾಯರು ಹಾಗೂ ಪ್ರಪ್ರಥಮ ಪ್ರಾಂಶುಪಾಲರಾಗಿದ್ದ ಎಸ್.ಎಲ್. ಸೀತಾರಾಮ ರಾವ್ ಇವರ ಅವಧಿಯಲ್ಲಿ ಸೇವೆಗೆ ಸೇರಿದ್ದ ಇವರು 1997ರ ಗೋಪಾಲಕೃಷ್ಣ ಹೆಬ್ಬಾರರು ಪ್ರಾಂಶುಪಾಲರಾಗಿದ್ದ ಅವಧಿವರೆಗಿನ ಸರಿಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದವರು.
ಸೇವಾವಧಿಯಲ್ಲಿ ತಮ್ಮ ಅಗಾಧ ನೆನಪಿನ ಶಕ್ತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದ ಭಟ್ಟರು ಕ್ಷಣಮಾತ್ರದಲ್ಲಿ ವಿದ್ಯಾರ್ಥಿಗಳ ನೊಂದಣಿ ಸಂಖ್ಯೆಯನ್ನು (register number) ಹೇಳಿಬಿಡುತ್ತಿದ್ದ ಇವರು ಎಲ್ಲರ ಅಚ್ಚರಿಗೆ ಕಾರಣರಾಗಿದ್ದವರು. ಸಂಸ್ಥೆಯ ಬಗ್ಗೆ ಎಂಬತ್ತು-ತೊಂಬತ್ತರ ದಶಕದಲ್ಲಿ ತಮ್ಮ ಮಾಂತ್ರಿಕ ನೆನಪಿನ ಶಕ್ತಿಯ ಮೂಲಕ "ಕಂಪ್ಯೂಟರ್ ಭಟ್ಟರು" ಎಂದೇ ಕರೆಯಲ್ಪಡುತ್ತಿದ್ದ ಭಟ್ಟರ ಸ್ಮರಣಾ ಸಾಮರ್ಥ್ಯ ನಿಜಕ್ಕೂ ವಿಸ್ಮಯ. ಹಳೇ ವಿದ್ಯಾರ್ಥಿಗಳು ತಮ್ಮ ಹಳೇಯ ಕಾಲೇಜು ದಾಖಲೆಗಳನ್ನು ಪಡೆಯಲು ಬಂದಾಗ ಅಥವಾ ಹತ್ತಾರು ವರ್ಷಗಳ ಕಾಲದ ನಂತರ ಸಿಕ್ಕಾಗ ಅವರನ್ನು ನೊಂದಣಿ ಸಂಖ್ಯೆಯಿಂದಲೇ ಸಂಬೊದಿಸಿ ಅವರನ್ನು ಕರೆದು ಮಾತನಾಡಿಸುವ ಅವರ ಸ್ನೇಹಮಯ ವ್ಯಕ್ತಿತ್ವ ಎಂದಿಗೂ ಮರೆಯಲಾಗದು.
ತಮ್ಮ ಸುದೀರ್ಘ ಸೇವಾವಧಿಯ ಆ ದಿನಗಳ ಬಗ್ಗೆ ಮಾತಿಗೆಳೆದರೆ ಕಾಲೇಜು ನಡೆದು ಬಂದ ಹಾದಿ, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಹಕಾರವನ್ನು ನೆನೆದು ಭಾವುಕರಾಗುವ ಶ್ರೀಯುತರು ತಾವು ಸೇವೆ ಸಲ್ಲಿಸಿರುವ ವಿದ್ಯಾ ಸಂಸ್ಥೆಯ ಅವಿಭಾಜ್ಯ ಅಂಗವಾಗಿದ್ದವರು. ತೀರ್ಥಹಳ್ಳಿಯ ಪ್ರತಿಷ್ಠಿತ ತುಂಗಾ ವಿದ್ಯಾಲಯದ ಅವಿಭಾಜ್ಯ ಅಂಗವಾಗಿದ್ದ ಹಾಗು ಸಂಸ್ಥೆಯ ಶಿಕ್ಷಕರು,ಅಡಳಿತ ಮಂಡಳಿ ಮತ್ತು ಸಿಬ್ಬಂದಿಗಳೊಡನೆ ಸೌಹಾರ್ದ ಸಂಬಂಧವನ್ನು ಇರಿಸಿಕೊಂಡಿದ್ದ ನಾಗರಾಜ್ ಭಟ್ಟ್ ಇವರನ್ನು ಅದೇಕೋ ಕಾರಣಗಳಿಗಾಗಿ "ಕವಿ ಭಟ್ಟ್ರು" ಎಂದು ಕರೆಯಲ್ಪಡುತ್ತಿದ್ದರು. ಪ್ರಸ್ತುತ ಎಪ್ಪತ್ತೇಳರ ಹರೆಯದ ಶ್ರೀಯುತರು ಓರ್ವ ಪುತ್ರ ಹಾಗು ಓರ್ವ ಪುತ್ರಿಯನ್ನು ಹೊಂದಿದ್ದಾರಲ್ಲದೆ ಭಾರತೀಪುರದಲ್ಲಿ ತಮ್ಮ ನೆಚ್ಚಿನ ಕ್ರಿಯಾಶೀಲ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಅನಾರೋಗ್ಯದ ಸಮಸ್ಯೆಯಿಂದ ಬಳುತಿದ್ದ ಕೆ.ಪಿ ನಾಗರಾಜ ಭಟ್ಟ್ (82) ಇವರು 4-06-2022 ರ ಇಂದು ಮುಂಜಾನೆ ತೀವ್ರ ಸ್ವರೂಪದ ಹೃದಯಾಘಾತದಿಂದ ನಿಧನರಾದರು. ಶ್ರೀಯುತರ ಆತ್ಮಕ್ಜೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ತುಂಗಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ ಪ್ರಾರ್ಥಿಸುತ್ತೇವೆ.
ಬರಹ : ನವನೀತ್ ಮಕ್ಕಿಮನೆ (9481319601)