24 ಘಂಟೆಯಲ್ಲಿ ಟಿಸಿ ರಿಪೇರಿ
ತಿಂಗಳಿಗೆ 150 ರಿಂದ 200 ಟಿಸಿ ರಿಪೇರಿ
ಗುಣಮಟ್ಟದ ವಿದ್ಯುತ್ ಪೂರೈಕೆಯ ಸಂಕಲ್ಪ
ಇನ್ನಾದರೂ ತಪ್ಪಿದೆ ವೋಲ್ಟೇಜ್ ಸಮಸ್ಯೆ
ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆಯ ಮೆಸ್ಕಾಂ ಇಲಾಖೆಯ ಸಮೀಪ ನಿರ್ಮಿಸಿರುವ ನೂತನ ಟಿಸಿ ರಿಪೇರಿ ಕೇಂದ್ರವನ್ನು ಶನಿವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬದುಕಿನ ಭಾಗವಾಗಿ ವಿದ್ಯುತ್ ಬಳಕೆ ಆರಂಭವಾಗಿದೆ. ಮಿಕ್ಸಿ ರನ್ ಮಾಡಲು ವಿದ್ಯುತ್ ಅವಶ್ಯಕ. ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಕೆಲವು ಸಂದರ್ಭ ತಾಂತ್ರಿಕ ಸಮಸ್ಯೆ ಎದುರಾಗುತ್ತಿತ್ತು. ಅಂತಹ ಸಮಸ್ಯೆ ಗುರುತಿಸಿ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಕೋಣಂದೂರು, ಕಮ್ಮರಡಿ, ಬೆಜ್ಜವಳ್ಳಿ ಉಪಕೇಂದ್ರ ಸ್ಥಾಪಿಸಿದ್ದು, ಬೇಡಿಕೆ ಇರುವ ಹೆದ್ದೂರು, ಎಂಕೆಬೈಲು ಉಪಕೇಂದ್ರ ನಿರ್ಮಾಣಕ್ಕೆ ಕ್ರಮ ಕೃಗೊಳ್ಳಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಾಳಾದ ವಿದ್ಯುತ್ ಪರಿವರ್ತಕ ರಿಪೇರಿ ಮಾಡಲು ಈ ಹಿಂದೆ ವಾರಗಟ್ಟಲೆ ಕಾಯಬೇಕಿತ್ತು. ಇದೀಗ ರಿಪೇರಿ ಕೇಂದ್ರ ಉದ್ಘಾಟನೆಗೊಂಡಿದ್ದು 24 ಗಂಟೆಯೊಳಗೆ ದುರಸ್ಥಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ವಿಭಾಗದ ಎಇಇ ವೀರೇಂದ್ರ ಮಾತನಾಡಿ, ತಾಲ್ಲೂಕಿನಲ್ಲಿ 74 ಸಾವಿರ ಬಳಕೆದಾರರಿದ್ದು, ಮೂರುವರೆ ಸಾವಿರ ಟಿಸಿಗಳು ಕಾರ್ಯನಿರ್ವಹಿಸುತ್ತಿದೆ. ವರ್ಷಕ್ಕೆ 450 ರಿಂದ 500 ಟಿಸಿಗಳು ಹಾಳಾಗುತ್ತವೆ. ರಿಪೇರಿ ಕೇಂದ್ರದಿಂದ ತಿಂಗಳಿಗೆ ಸುಮಾರು 150 ರಿಂದ 200 ಟಿಸಿಗಳನ್ನು ದುರಸ್ಥಿ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸಂದೇಶ್ ಜವಳಿ, ಶಿವಮೊಗ್ಗ ವಿಭಾಗದ ಅಧೀಕ್ಷಕ ಇಂಜಿನಿಯರ್ ಶ್ರೀಧರ್, ಮುಖ್ಯ ಇಂಜಿನಿಯರ್ ಬಸಪ್ಪ ಇದ್ದರು.