ತೀರ್ಥಹಳ್ಳಿಯಲ್ಲಿ ಗೋಮಾಂಸ ದಂಧೆ
ಮಾಳೂರು ಪೊಲೀಸರಿಂದ ಗ್ಯಾಂಗ್ ಮೇಲೆ ಅಟ್ಯಾಕ್
ಓರ್ವ ಅರೆಸ್ಟ್…
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡಿದ್ದರು ಗೋಹತ್ಯೆ, ಗೋ
ಕಳ್ಳ ಸಾಗಾಣೆ ದಂಧೆಗೆ ಕಡಿವಾಣ ಬಿದ್ದಿಲ್ಲ. ಗುರುವಾರ ಬೆಳ್ಳಂಬೆಳಗ್ಗೆ ತೀರ್ಥಹಳ್ಳಿ ತಾಲ್ಲೂಕಿನ
ಮಾಳೂರು ಪೊಲೀಸ್ ಠಾಣೆಯ ಪಿಎಸ್ ಐ ನವೀನ್ ಮಠಪತಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಗೋಹತ್ಯೆ ಪ್ರಯತ್ನದ
ಪ್ರಕರಣ ಬಹಿರಂಗವಾಗಿದೆ.
ವಶಕ್ಕೆ ಪಡೆದ ಗೋವು
ಮಂಡಗದ್ದೆಯ ವಲಯಾರಣ್ಯ ಕಚೇರಿ ಸಮೀಪ ಗೋಹತ್ಯೆಗೆ ಕೆಲ ದುಷ್ಕರ್ಮಿಗಳು ಸಂಚು
ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿ ಯಜಾಜ್ ಸಹಿತ ಗೋವನ್ನು ವಶಕ್ಕೆ
ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿ ಮನೆಯಲ್ಲಿ ಗೋವನ್ನು ವಶಕ್ಕೆ ಪಡೆಯಲಾಗಿದೆ.
ಮಂಡಗದ್ದೆ, ತೀರ್ಥಹಳ್ಳಿ, ಕೋಣಂದೂರು, ಹಣಗೆರೆ , ಹೊಸೂರು, ಕಮ್ಮರಡಿ, ಕಡ್ತೂರು,
ಬೆಜ್ಜವಳ್ಳಿ ಸೇರಿದಂತೆ ಅನೇಕ ಭಾಗದಲ್ಲಿ ಗೋಮಾಂಸ ಮಾರಾಟ ದಂಧೆ ವಿಪರೀತವಾಗಿದ್ದು ಸ್ಥಳೀಯರ ಅನೇಕ
ದೂರಿನ ನಡುವೆಯೂ ದಂಧೆ ನಿಯಂತ್ರಣವಾಗಿಲ್ಲ. ಗೋಮಾಂಸ, ಗೋ ಕಳ್ಳ ಸಾಗಾಣೆ ದಂಧೆಗೆ ತೀರ್ಥಹಳ್ಳಿ ಕೇಂದ್ರ
ಸ್ಥಾನದಂತಿದ್ದು ಪೊಲೀಸರಿಗೆ ಸವಾಲಾಗಿದೆ.
ಗೃಹಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ,
ಗೋವು ಕಳ್ಳ ಸಾಗಣೆ ದಂಧೆ ಸಲೀಸಾಗಿ ನಡೆಯಲು ಅವಕಾಶ ಸಿಕ್ಕಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೆ
ಗುರಿಯಾಗಿದೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಭಾರೀ ಪ್ರಚಾರದೊಂದಿಗೆ ಹೆಬ್ಬುಬ್ಬೆಯಲ್ಲಿ
ಜಾರಿಗೆ ತಂದು ಈಗ ಮೌನಕ್ಕೆ ಜಾರಿರುವ ಹಿಂದಿನ ಗುಟ್ಟೇನು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.
ಪೊಲೀಸರ ದಾಳಿ ತಂಡದಲ್ಲಿ ಸಿಬ್ಬಂದಿಗಳಾದ ಸಂದೀಪ್, ಅಭಿಲಾಷ್, ಪುನೀತ್, ಜೀಪ್ ಚಾಲಕ ಅಭಿಲಾಷ್ ಮತ್ತಿತರರು ಇದ್ದರು.