ತೂದೂರಿನಲ್ಲಿ ತಬ್ಬಲಿಯಾದ ಕುಟುಂಬ
ಮಳೆಯಿಂದಾದ ಬಾರೀ ಅನಾಹುತ
ಅಕಾಲಿಕ ಮಳೆ ಕಾರಣ ರೈತ ಕಾರ್ಮಿಕ ಮೃತಪಟ್ಟ ಧಾರುಣ ಘಟನೆ ತೀರ್ಥಹಳ್ಳಿ ತಾಲೂಕಿನ
ತೂದೂರು ಗ್ರಾಮದಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಶಂಕರಪ್ಪ (52) ಮೇಲಿನ ತೂದೂರಿನವರು ಎಂದು ಗುರುತಿಸಲಾಗಿದೆ.
ರೈತ ಕಾರ್ಮಿಕ ಶಂಕರಪ್ಪ ಮಳೆಯ ನಡುವೆ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಅಕಾಲಿಕ ಮಳೆಯಿಂದ ಸೃಷ್ಟಿಯಾಗಿದ್ದ
ಜಮೀನಿನಲ್ಲಾದ ಅನಾಹುತವನ್ನು ತಪ್ಪಿಸಲು ಹೋಗಿ ಪ್ರಾಣಕಳೆದುಕೊಂಡಿದ್ದಾರೆ.
ಮೃತ ಶಂಕರಪ್ಪ ಅವರಿಗೆ ಪತ್ನಿ ಹಾಗೂ ಸಣ್ಣ ಪ್ರಾಯದ ಮಗ ಇದ್ದಾರೆ. ಕೂಲಿ ಕಾರ್ಮಿಕನಾಗಿ
ಬದುಕು ಕಟ್ಟಿಕೊಂಡಿದ್ದ ಶಂಕರಪ್ಪ ಕುಟುಂಬಕ್ಕೆ ಆಸರೆಯಾಗಿದ್ದರು. ಈಗ ಶಂಕರಪ್ಪ ಅವರ ನಿಧನದಿಂದ ಕುಟುಂಬ
ಅನಾಥವಾಗಿದೆ. ದುಡಿಯುವ ಕೈಗಳನ್ನು ಕಳೆದುಕೊಂಡ ಶಂಕರಪ್ಪ ಅವರ ಪತ್ನಿ, ಮಗನಿಗೆ ದಿಕ್ಕು ಕಾಣದಂತಾಗಿದೆ.
ಅಕಾಲಿಕ ಮಳೆಗೆ ತಾಲ್ಲೂಕಿನಲ್ಲಿ ಮೊದಲ ಬಲಿಯಾಗಿದ್ದು ಮುಂದೆ ಯಾವ ರೀತಿಯ ಅನಾಹುತಕ್ಕೆ ಅಕಾಲಿಕ ಮಳೆ
ಕಾರಣವಾಗಲಿದೆಯೋ ಎಂಬ ಆತಂಕ ಜನರಲ್ಲಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಡಾ. ಶ್ರೀಪಾದ, ತೂದೂರು ಗ್ರಾ.ಪಂ. ಅಧ್ಯಕ್ಷ
ಮಧುರಾಜ್ ಹೆಗ್ಡೆ, ರಾಜಸ್ವ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ
ನಡೆಸಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲ್ಲೂಕಿನ
ಆಗುಂಬೆ ಸಮೀಪದ ಕೆಂದಾಳಬೈಲಿನಲ್ಲಿ ತಾಯಿ ಜತೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ಅಶಿಕಾ ಸಂಕ ದಾಟುತ್ತಿರುವ
ವೇಳೆ ತಾಯಿ ಕೈಯಿಂದಲೇ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಇದೇ ಸಂದರ್ಭದಲ್ಲಿ
ವಿಧಾನಸಭೆಯ ಅಧಿವೇಶನ ನಡೆಯುತ್ತಿತ್ತು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘಟನೆಯ ವಿವರ ಪಡೆದು
ಮಲೆನಾಡಿನಲ್ಲಿ ಆರ್ಭಟಿಸಿ ಹರಿಯುವ ಸಣ್ಣಪುಟ್ಟ ಹಳ್ಳ ತೊರೆಗಳಿಗೆ ಕಾಲುಸಂಕ ನಿರ್ಮಿಸಲು ನೂರು ಕೋಟಿಗೂ
ಹೆಚ್ಚು ಅನುದಾನ ಬಿಡುಗಡೆಗೊಳಿಸಿದ್ದರು.
ಮಲೆನಾಡಿನಲ್ಲಿ ಹರಿಯುವ ಸಣ್ಣಪುಟ್ಟ ಹಳ್ಳ ತೊರೆಗಳಿಗೆ ಕಾಲುಸಂಕ ನಿರ್ಮಾಣದ
ಯೋಜನೆಯಲ್ಲಿ ಕಾಲುಸಂಕ ನಿರ್ಮಿಸಲಾಯಿತು. ಈ ಯೋಜನೆಯಿಂದ ಸಾಕಷ್ಟು ಅನುಕೂಲವೂ ಆಯಿತು. ಆದರೆ ಮಲೆನಾಡಿನಲ್ಲಿ
ಮಳೆ ಒಂದಲ್ಲ ಒಂದು ವಿಧದಲ್ಲಿ ಜನರ ಜೀವಕ್ಕೆ ಕಂಠಕವಾಗುತ್ತಲೇ ಮುಂದುವರೆದಿದೆ. ಹಳ್ಳ ದಾಟುವಾಗ, ಜಮೀನಿನಲ್ಲಿ
ದುಡಿಯುವಾಗ ರೈತರು, ಕೂಲಿ ಕಾರ್ಮಿಕರು ಸಾವನಪ್ಪುತ್ತಲೇ ಇದ್ದಾರೆ.
ತೂದೂರಿನಲ್ಲಿ ನಡೆದ ಸಾವಿನ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಶೀಘ್ರ ಕ್ರಮ
ತೆಗೆದುಕೊಳ್ಳುವ ಮೂಲಕ ತಬ್ಬಲಿಯಾದ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಬೇಕು. ಗೃಹಸಚಿವ ಆರಗ
ಜ್ಞಾನೇಂದ್ರ ಅವರು ಶಂಕರಪ್ಪ ಕುಟುಂಬಕ್ಕೆ ಸ್ಪಂದಿಸಿ ಕುಟುಂಬದಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ
ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.


