ದೇವನೂರು ಮಹದೇವ ಪ್ರತಿರೋಧ....

ಪಠ್ಯ ಪರಿಷ್ಕರಣೆಗೆ ವಿರೋಧ
ತನ್ನ ಪಠ್ಯ ಕೈ ಬಿಡಲು ದೇವನೂರು ಮಹಾದೇವ ಪತ್ರ

ದೇವನೂರು ಮಹದೇವ ಪ್ರತಿರೋಧ....

ಪಠ್ಯ ಪರಿಷ್ಕರಣೆಯ ವಾದವಿವಾದಗಳು ನಡೆಯುತ್ತಿದೆ. ಹತ್ತನೆ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಪಠ್ಯದ ಪಿಡಿಎಫ್ ಬರಹಗಳನ್ನು ಇಲ್ಲ ಅಂತ, ಉಂಟು ಅಂತ, ಕೆಲವು ಸಲ ಸೇರಿದ್ದನ್ನು ಕೈಬಿಡುವುದು, ಮತ್ತೆ ಸೇರಿಸುವುದು ಇತ್ಯಾದಿಗಳಿಗೆ ಗಳಿಗೆಗೂ ಬದಲಾಗುತ್ತಿದೆ. ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ 'ಸೇರಿಸಿರದಿದ್ದರೆ' ನನಗೆ ಹೆಚ್ಚು ಸಂತೋಷವಾಗುತ್ತದೆ. 'ಸೇರಿದ್ದರೆ' ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸುವುದಕ್ಕಾಗಿ ಈ ಪ್ರಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ.

ಯಾಕೆಂದರೆ,

(೧) ಈ ಹಿಂದೆ ಪಠ್ಯಗಳಲ್ಲಿದ್ದ ಎಲ್‌.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕರ್  ಮುಂತಾದವರ ಕತೆ, ಲೇಖನಗಳನ್ನು ಕೈಬಿಡಲಾಗಿದೆ ಎಂದರೆ, ಯಾರು ಕೈಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೊ ತಿಳಿದಿಲ್ಲ ಎಂತಲೇ ಅರ್ಥ.

(೨) ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತನಗೆ ಲೇಖಕರ ಜಾತಿ ತಿಳಿದಿಲ್ಲ ಎನ್ನುತ್ತಾರೆ! ಭಾರತದಂತಹ ಸಂಕೀರ್ಣ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಅಲ್ಲಿ ಸಹಜವಾಗಿ ಶೇ.90ರಷ್ಟು ಅವರ ಜಾತಿಯವರೇ ತುಂಬಿಕೊಳ್ಳುತ್ತಾರೆ. ಅವರವರ ಅಡಿಗೆಮನೆ ವಾಸನೆ ಪ್ರಿಯವಾಗುವಂತೆ! ಹೀಗಾಗಿ ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದೆ. ಇದು ಈಗಿನದ್ದಲ್ಲ. ಡಾ. ಮುರಳಿ ಮನೋಹರ ಜೋಷಿಯವರು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುರ್ವರ್ಣ ಹಿಂದೂ ಪ್ರಭೇದದ ಆರೆಸ್ಸೆಸ್‌ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ಇಲ್ಲೂ ಇದೇ ಆಗಿದೆ.

ಈ ಪಠ್ಯಗಳೆಲ್ಲಾ ಪ್ರಕಟವಾದ ಮೇಲೆ ಅವುಗಳನ್ನು ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಗಳನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸ್ಆಪ್, ಇಮೇಲ್, ಆನ್ಲೈನ್ ಕ್ಲಾಸ್  ಇತ್ಯಾದಿಗಳನ್ನು ರೂಪಿಸಲು ಆಲೋಚಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ.

                                                            
~ ದೇವನೂರ ಮಹಾದೇವ
    (24ನೇ ಮೇ 2022)
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post