ಹೆಚ್.‌ಎಸ್.ಸುಂದರೇಶ್‌ ಸ್ವಪಕ್ಷೀಯರ ವಿರುದ್ಧದ ಹೇಳಿಕೆ

ಸಚಿವ ಮಧು ಬಂಗಾರಪ್ಪ ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಲಿ

ಹೆಚ್.ಎಸ್.ಸುಂದರೇಶ್‌ ಪಕ್ಷದ ಆಂತರಿಕ ಸಮಸ್ಯೆ ಕುರಿತು ಮಾತನಾಡಿರುವುದರ ಬಗ್ಗೆ ತಕರಾರಿಲ್ಲ. ಆದರೆ ತನ್ನ ಬಳಿ ಜಿಲ್ಲಾ ಉಸ್ತುವಾರಿ ಸಚಿವರು 25 ಲಕ್ಷ ಲಂಚ ಕೇಳಿದ್ದಾರೆ ಎನ್ನುವುದು ಗಂಭೀರ ಆರೋಪವಾಗಿದ್ದು, ಮಧು ಬಂಗಾರಪ್ಪ ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಲಿ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಆಗ್ರಹಿಸಿದ್ದಾರೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಸ್ವಪಕ್ಷೀಯರ ವಿರುದ್ಧವೇ ಹೀನಮಾನವಾಗಿ ಬೈದಿದ್ದು, ಈಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಸುದ್ದಿ ಶಿವಮೊಗ್ಗ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಕುರಿತು ತೀರ್ಥಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿನ ಜಿಲ್ಲಾ ನಾಯಕತ್ವದ ವಯಕ್ತಿಕ ವಿಷಯಗಳು ಹಾಗೂ ಅವರ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಏನೇ ಇರಲಿ, ಆದರೆ ಎಚ್.ಎಸ್.ಸುಂದರೇಶ್ ಸರ್ಕಾರದ ಸಚಿವ ಸಂಪುಟದ ಮಂತ್ರಿಯ ಮೇಲೆ ಗಂಭೀರ ಆರೋಪ ಮಾಡಿದ್ದು, ಈ‌ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.

ತನ್ನ ಬಳಿ ಸಚಿವ ಮಧು ಬಂಗಾರಪ್ಪ ಅತ್ಯಾಪ್ತನೊಬ್ಬ ಸೂಡಾ ಕಚೇರಿಗೆ ಬಂದು 25 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಸುಂದರೇಶ್ ಹೇಳಿರುವುದು ಆಘಾತಕಾರಿಯಾಗಿದೆ. ಯಾರೋ ವಿರೋಧಪಕ್ಷದ ನಾಯಕರು ಇದನ್ನು ಹೇಳಿದ್ದರೆ ಹಗುರವಾಗಿ ಪರಿಗಣಿಸಬಹುದಿತ್ತು. ಆದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ, 40 ವರ್ಷಕ್ಕೂ ಹೆಚ್ಚಿನ ಕಾಲ ಆ ಪಕ್ಷಕ್ಕೆ ದುಡಿದಿರುವ ಹಿರಿಯ ನಾಯಕರೊಬ್ಬರು ತಮ್ಮದೇ ಪಕ್ಷದ ಸಚಿವರ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದನ್ನ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಪಷ್ಟನೆ ನೀಡಬೇಕು ಹಾಗೂ ನಿಜ ಸಂಗತಿಗಳು ಜಿಲ್ಲೆಯ ಜನರಿಗೆ ಗೊತ್ತಾಗಬೇಕು ಎಂದು ಹೆದ್ದೂರು ನವೀನ್ ಆಗ್ರಹಿಸಿದ್ದಾರೆ.

ಇದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದ್ದರಿಂದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ಜನರಿಗೆ ಸತ್ಯ ತಿಳಿಯುವ ಹಕ್ಕಿದೆ. ಸುಂದರೇಶ್ ಪತ್ರಿಕಾಗೋಷ್ಠಿಯಿಂದ ಕೇವಲ ಕಾಂಗ್ರೆಸ್ಸಿನ ಒಳಗಿರುವ ಮುಸುಕಿನ ಗುದ್ದಾಟ, ಬಣ ರಾಜಕೀಯ, ನಾಯಕತ್ವದ ತಿಕ್ಕಾಟವಷ್ಟೇ ಬೀದಿಗೆ ಬರದೇ,ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವು ಹೊರಬಂದಿದೆ ಎಂದು ಟೀಕಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post