ಮ್ಯಾಮ್‌ಕೋಸ್‌ ವಿರುದ್ಧ ಸಹಕಾರ ಇಲಾಖೆ ವಿಚಾರಣೆಗೆ ಆದೇಶ

ಅಕ್ಟೋಬರ್‌ 8 ರಂದು ಬೆಂಗಳೂರಿನ ಇಲಾಖಾ ಕಚೇರಿಯಲ್ಲಿ ವಿಚಾರಣೆ
ಸಹಕಾರ ಸಚಿವ ಲಕ್ಷ್ಮಣ ಸವದಿ – ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಪತ್ರ ಗಂಭೀರವಾಗಿ ಪರಿಗಣಿಸಿದ ಇಲಾಖೆ

ಇತ್ತೀಚೆಗೆ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಶಿವಮೊಗ್ಗ (ಮ್ಯಾಮ್‌ಕೋಸ್)‌ ಹೊದಲ-ಅರಳಾಪುರ ಗ್ರಾಮ ಪಂಚಾಯಿತಿಯ ಯಡೇಹಳ್ಳಿ ಗ್ರಾಮದಲ್ಲಿ ಗೋದಾಮು ನಿರ್ಮಾಣಕ್ಕೆಂದು ಖರೀದಿಸಿದ ಜಾಗ ವ್ಯಾಪಕ ಚರ್ಚೆಗೀಡಾಗಿತ್ತಲ್ಲದೇ ಷೇರುದಾರರ ಅಸಮಾಧಾನಕ್ಕೂ ಗುರಿಯಾಗಿತ್ತು.

ಸಹಕಾರ ಸಚಿವ ಲಕ್ಷ್ಮಣ ಸವದಿ ಮತ್ತು ಶೃಂಗೇರಿ ಶಾಸಕ ರಾಜೇಗೌಡರ ಪತ್ರದ ಆಧಾರದ ಮೇಲೆ ಸಹಕಾರ ಇಲಾಖೆ ಅಕ್ಟೋಬರ್‌ 8 ರಂದು ವಿಚಾರಣೆಗೆ ಹಾಜರಾಗುವಂತೆ ಮ್ಯಾಮ್ಕೋಸ್‌ಗೆ ನೋಟೀಸ್‌ ನೀಡಿದೆ.

ದೂರು ಪತ್ರಗಳಲ್ಲಿ ಇದೊಂದು ಅಸಹಜ ಖರೀದಿ ಪ್ರಕ್ರಿಯೆಯಾಗಿದ್ದು ತೀರ್ಥಹಳ್ಳಿಯ ಭಾಗದಲ್ಲಿ ಎಲ್ಲೂ ಇಲ್ಲದ ದರವನ್ನು ಷೇರುದಾರರ ಹಣದಿಂದ ನೀಡುವ ಪ್ರಮಾದ ನಡೆದಿದೆ. ಕೇವಲ 62 ಸಾವಿರ ಅಡಿಗೆ 7 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಖರೀದಿಗಾಗಿ ಖರ್ಚು ಮಾಡಲಾಗಿದೆ. ತಾಂತ್ರಿಕವಾಗಿ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ 2 ಕೋಟಿ ಮುದ್ರಾಂಕ ಶುಲ್ಕ ಪಾವತಿ ಮಾಡಲಾಗಿದೆ ಎಂದು ಆರೋಪಗಳಿದ್ದವು.

ಅಲ್ಲದೇ ಈ ಕುರಿತು ಆರಂಭದಿಂದಲೇ ಧ್ವನಿ ಎತ್ತಿದ್ದ ಕಡ್ತೂರು ದಿನೇಶ್ ಸಮರ್ಪಕವಾದ ಜಾಹೀರಾತು ನೀಡದೆ ಹಾಗೂ ವ್ಯಾಪಕ ಚರ್ಚೆಯನ್ನು ಮಾಡದೆ ಈ ಜಾಗವನ್ನು ಖರೀದಿ ಮಾಡುವ ಮೂಲಕ ದೊಡ್ಡ ಅವ್ಯವಹಾರ ನಡೆದಿದೆ. ಈ ಖರೀದಿ ಒಪ್ಪಂದವನ್ನು ಅಮಾನತ್ತಿನಲ್ಲಿಟ್ಟು ಉಪಾಧ್ಯಕ್ಷ ಮತ್ತು ಅಧ್ಯಕ್ಷರುಗಳಿಂದ ಹಣವನ್ನು ಮರು ಪಾವತಿ ಮಾಡಿಸಿಕೊಳ್ಳಬೇಕೆಂದು ದೂರು ನೀಡಿದ್ದರು.

ಅಲ್ಲದೇ ಸಹಕಾರ ಭಾರತಿಯ ಪ್ರಮುಖ ಹಿರಿಯ ಸಹಕಾರಿ ಸಿ.ಬಿ.ಈಶ್ವರ್‌ ಈ ಖರೀದಿ ಪ್ರಕ್ರಿಯೆ ವಿರುದ್ಧ ಮಾಧ್ಯಮಗಳಲ್ಲಿ ಪತ್ರ ಬರೆದು ಸತ್ಯಕ್ಕಾಗಿ ಆಗ್ರಹಿಸಿದಾಗ ಇದು ಮತ್ತಷ್ಟು ಚರ್ಚೆಗೀಡಾಗಿತ್ತು. ಈ ದೂರಿನೊಂದಿಗೆ ಇಲ್ಲಿಯವರೆಗೆ ಮೇಲ್ನೋಟಕ್ಕಾದರು ಎಲ್ಲವು ಸರಿಯಿದ್ದಂತೆ ಕಾಣುತ್ತಿದ್ದಂತೆ ಕಾಣುತ್ತಿದ್ದ ಮ್ಯಾಮ್‌ಕೋಸ್‌ ಈಗ ಇಲಾಖಾ ವಿಚಾರಣೆಯ ಅಪಖ್ಯಾತಿಯನ್ನು ಎದುರಿಸಿದೆ. ಫಲಿತಾಂಶ ಏನಾಗಬಹುದೆಂದು ಸಹಕಾರ ವಲಯ ಕುತೂಹಲದಿಂದ ನಿರೀಕ್ಷಿಸುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post