5% ಹೆಚ್ಚುವರಿ ನಿಯಮಾವಳಿ ಇದ್ದಲ್ಲಿ ಏಕೆ ಅದನ್ನು ಮೊದಲೇ ಜಾಹೀರಾತಿನಲ್ಲಿ
ತಿಳಿಸಲಿಲ್ಲ…?
ಬಸ್ ಸ್ಟಾಂಡ್ ಹೋಟೆಲ್ ವಿಚಾರದಲ್ಲಿ ನಡೆದಿದೆಯೇ ಅಕ್ರಮ….?
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಪೋರೇಷನ್ ಬ್ಯಾಂಕ್, ಮುಖ್ಯ
ಬಸ್ ನಿಲ್ದಾಣದಲ್ಲಿನ ನೆಲ ಅಂತಸ್ತು ಹಾಗೂ ಕೆಳ ಅಂತಸ್ತಿನ ಮಳಿಗೆಗೆಳು, ಮುಖ್ಯ ಬಸ್ ನಿಲ್ದಾಣದ
ಪೋಸ್ಟ್ ಸಮೀಪದ, ಎಲ್‌ಐಸಿ ಆಫೀಸ್ ಮುಂಭಾಗದ, ಗಾಂಧಿ ಚೌಕದ ಡಾ.ಎಪಿಜೆ ಅಬ್ದುಲ್ ಕಲಾಂ ವಾಣಿಜ್ಯ
ಸಂಕೀರ್ಣದ ನೆಲ ಹಾಗೂ ಮೊದಲ ಅಂತಸ್ತಿನ ಒಟ್ಟಾರೆ 52 ವಾಣಿಜ್ಯ ಮಳಿಗೆಗಳನ್ನು ದಿನಾಂಕ:
20-05-2022ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಇ-ಟೆಂಡರ್, ಸೀಲ್ ಟೆಂಡರ್ ಕಂ ಬಹಿರಂಗ
ಹರಾಜು ಪ್ರಕ್ರಿಯೆ ಮೂಲಕ ಹಾರಾಜು ಮಾಡಲಾಗಿದೆ. ಆದರೆ ಈ ಹರಾಜು ಪ್ರಕ್ರಿಯೆ ಸಂಪೂರ್ಣ ದೋಷ ಪೂರಿತವಾಗಿದ್ದು
ಭಾರೀ ಅಕ್ರಮದ ವಾಸನೆಯೂ ಕೇಳಿ ಬಂದಿದ್ದು ಮರು ಹರಾಜಿಗಾಗಿ ಹರಾಜಿನಲ್ಲಿ ಪಾಲ್ಗೊಂಡ ಉಮೇದುವಾರರು ಮತ್ತು
ಸಾರ್ವಜನಿಕರಿಂದ ಕೇಳಿ ಬಂದಿದೆ.
ಸುತ್ತೋಲೆಯ ಪ್ರಕಾರ ಒಟ್ಟು 26 ಷರತ್ತುಗಳನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ
ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಾ ಕೋಸ್ ಅವರ ಹೆಸರಿನ ಜಾಹೀರಾತು
ಹಾಗೂ ಕರಪತ್ರದಲ್ಲಿ ನಮೂದಿಸಲಾಗಿತ್ತು.
ಸ್ವಾಭಾವಿಕವಾಗಿ 12 ವರ್ಷಗಳ ಸುಧೀರ್ಘ ಕಾಲದ ನಂತರ ಈ ಎಲ್ಲಾ ಮಳಿಗೆಗಳು ಮತ್ತೆ
ಹರಾಜು ಪ್ರಕ್ರಿಯೆಗೆ ಒಳಪಟ್ಟಿದ್ದರಿಂದ ಪೈಪೋಟಿ ಜೋರಾಗಿತ್ತು. ವಿಶೇಷವಾಗಿ ಮುಖ್ಯ ಬಸ್ ನಿಲ್ದಾಣದ
ಹೋಟೆಲ್ ಮಳಿಗೆಯ ಹರಾಜಿನಲ್ಲಿ ಭಾಗವಹಿಸಲು ದೂರದ ಬೆಂಗಳೂರು, ಉಡುಪಿ, ಬಾಗಲಕೋಟೆ, ಕೊಪ್ಪ, ಇನ್ನಿತರ
ಕಡೆಗಳಿಂದ ಆಸಕ್ತರು ಬಂದಿದ್ದರು.
ಹೋಟೆಲ್ ಮಳಿಗೆಗೆ ಆರಂಭಿಕವಾಗಿ 40,540 ರೂಪಾಯಿಗಳ ಬಾಡಿಯನ್ನು ಸರ್ಕಾರ
ನಿಗಧಿ ಪಡಿಸಿತ್ತು. ಮತ್ತು ಇದಕ್ಕೆ 1 ಲಕ್ಷ ರೂಪಾಗಳ ಠೇವಣಿಯನ್ನು ಇಡಲು ಸೂಚಿಸಲಾಗಿದ್ದು ಇದು ಸಾಮಾನ್ಯ
ವರ್ಗಕ್ಕೆ ಮೀಸಲಾಗಿತ್ತು.
ಆದರೆ ಹಾರಾಜಿಗೂ ಮುನ್ನ ಸ್ವತಃ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾ
ಕೋಸ್ ಅವರೇ ಯಾವುದೇ ಹರಾಜು ಗರಿಷ್ಠ ಬೆಲೆಗೆ ಹೋದ ನಂತರ ಅದರ ಮೂಲ ಬಾಡಿಗೆದಾರ ಶೇಕಡ 5 ರಷ್ಟು ಹೆಚ್ಚುವರಿ
ಸಂದಾಯ ಮಾಡಲು ಒಪ್ಪಿ ಮುಂದುವರೆಯಲು ಇಷ್ಟವಿದ್ದಲ್ಲಿ ಆ ವ್ಯಕ್ತಿಗೆ ಕೊಡಲು ಕಾನೂನಿನಲ್ಲಿ ಅವಕಾಶ
ಇದೆ ಎಂದು ಹೇಳುವ ಮೂಲಕ ಆರಂಭಿಕ ಹಂತದಲ್ಲೇ ಹರಾಜಿನಲ್ಲಿ ಭಾಗವಹಿಸುವವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದ್ದರು.
ಹಾಗೊಂದು ನಿಯಮ ಇರುವುದೇ ಆದಲ್ಲಿ ಅದನ್ನು ಮೊದಲೇ ಜಾಹಿರಾತು ಹಾಗೂ ಕರಪತ್ರದಲ್ಲಿ ಏಕೆ ಉಲ್ಲೇಖಿಸಿಲ್ಲ
ಎಂಬ ಪ್ರಶ್ನೆಗೆ ಮುಖ್ಯಾಧಿಕಾರಿಯಾಗಲಿ, ಅಧ್ಯಕ್ಷ, ಉಪಾಧ್ಯಕ್ಷರಾಗಲಿ ಯಾರು ಕೂಡ ಸಮಂಜಸವಾಗಿ ಉತ್ತರಿಸಲಿಲ್ಲ.
ಪರಿಣಾಮ ಎಷ್ಟೇ ಗರಿಷ್ಟ ಮಟ್ಟಕ್ಕೆ ಕೂಗಿದರೂ ಕೂಡ ಅದಕ್ಕಿಂತಲೂ ಶೇಕಡಾ 5
ರಷ್ಟು ಹೆಚ್ಚಿಗೆ ನೀಡಿ ಮೂಲ ಬಾಡಿಗೆದಾರ ಮಳಿಗೆ ಸ್ವಾಧೀನಕ್ಕೆ ಪಡೆದುಕೊಳ್ಳಲು ಅವಕಾಶ ಇದ್ದ ಮೇಲೆ
ಸ್ಫರ್ಧೆ ನಿರರ್ಥಕ ಎಂಬ ನಿರಾಶೆ ಹರಾಜಿನಲ್ಲಿ ಭಾಗವಹಿಸಲು ಬಂದವರಲ್ಲಿ ಕಂಡುಬಂದ ಕಾರಣ ಬಹುತೇಕರು
ಸ್ಪರ್ಧೆಯಿಂದ ಹಿಂದೆ ಸರಿದರು. ಇಲ್ಲವೇ ಹಿಂದೆ ಸರಿಯುವಂತಹ ಸನ್ನಿವೇಶ ಸೃಷ್ಟಿಸಲಾಯಿತು. ಬಹುತೇಕರಿಗೆ
ದೊಡ್ಡ ಮೊತ್ತವನ್ನೇ ನೀಡಿ ಹಿಂದೆ ಸರಿಯುವಂತೆ ಮಾಡಲಾಯಿತು ಎಂಬ ಆರೋಪವು ಕೇಳಿಬಂದಿದೆ.
ಖಚಿತ ಮೂಲಗಳ ಪ್ರಕಾರ ಹೋಟೆಲ್ ಅನ್ನು ಹಿಂದಿನ ಬಾಡಿಗೆದಾರನಿಗೆ ದಕ್ಕುವಂತೆ
ಮಾಡಲು ಇಡೀ ಪಟ್ಟಣ ಪಂಚಾಯಿತಿ ವ್ಯವಸ್ಥೆ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸಿದೆ ಎಂಬ ಗುಮಾನಿ
ದಟ್ಟವಾಗಿ ವ್ಯಕ್ತವಾಗುತ್ತಿದೆ. ಶೇಕಡಾ 5 ರಷ್ಟು ಹೆಚ್ಚುವರಿ ಮಾಡಿ ಹಾಲಿ ಇರುವವರಿಗೆ ಕೊಡುವ ಉದ್ದೇಶ
ಇದ್ದಲ್ಲಿ ಈ ಹರಾಜು ಪ್ರಕ್ರಿಯೆಯ ನಾಟಕ ಏಕೆಂಬ ಪ್ರಶ್ನೆಯನ್ನು ಕೂಡ ಹರಾಜಿನಲ್ಲಿ ಪಾಲ್ಗೊಂಡವರು ಎತ್ತಿದ್ದಾರೆ.
