No title

ಹಾಲಿ ಸಚಿವರಿಗೆ ತೊಡೆ ತಟ್ಟಿದ ಮಾಜಿ ಸಚಿವ

ಆರಗ- ಕಿಮ್ಮನೆ ನಡುವೆ ಗುದ್ದಾಟ - 60 ಕಿ.ಮೀ. ಪಾದಯಾತ್ರೆಗೆ ಭರ್ಜರಿ ಚಾಲನೆ

ವಿಧಾನ ಸಭಾ ಚುನಾವಣಾ ಮುನ್ನ ರಾಜಕೀಯದ ಕಾವು

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ತಮ್ಮ ಪರಂಪರಾನುಗತ ಬದ್ಧ ರಾಜಕೀಯ ಎದುರಾಳಿ ಗೃಹ ಸಚಿವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಭರ್ಜರಿಯಾಗಿ ಯುದ್ಧ ಸಾರಿದ್ದಾರೆ. ತೀರ್ಥಹಳ್ಳಿ ಗುಡ್ಡೇಕೊಪ್ಪದ ಗೃಹಸಚಿವರ ಮನೆಯಿಂದ ಕೂಗಳತೆ ದೂರದಲ್ಲಿ ಇರುವ ಕಟ್ಟಡ ಒಂದರಲ್ಲಿ ಗೃಹಮಂತ್ರಿಯಾಗಿ ಸರಣಿ ವೈಫಲ್ಯ ಎದುರಿಸುತ್ತಿರುವ ಆರಗ ಜ್ಞಾನೇಂದ್ರ ಹಾಗೂ ಪರ್ಸೆಂಟೇಜ್‌ ಸುಳಿಯಲ್ಲಿ ಸಿಲುಕಿರುವ ಬಿಜೆಪಿ ಸರ್ಕಾರದ ವಿರುದ್ಧ ಕಿಮ್ಮನೆ ಪಾದಯಾತ್ರೆ ಹಮ್ಮಿಕೊಳ್ಳುವ ದಿಟ್ಟತನ ತೋರುವ ಮೂಲಕ ಮುಂದಿನ ಚುನಾವಣೆಗೆ ಭರ್ಜರಿ ತಾಲೀಮು ನಡೆಸಿದ್ದಾರೆ.

ಈ ಪಾದಯಾತ್ರೆಗೆ ಮಾಜಿ ಮಂತ್ರಿ ಹಿರಿಯ ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪರ ಪುತ್ರಿ ಡಾ. ರಾಜನಂದಿನಿ ಚಾಲನೆ ನೀಡಿದ್ದಾರೆ. ಜೊತೆಗೆ ಮಾಜಿ ವಿಧಾನ ಪರಿಷತ್‌ ಸದಸ್ಯೆ ಪ್ರಫುಲ್ಲ ಮಧುಕರ್‌, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಿ ರಾಮಚಂದ್ರ, ಜಿಲ್ಲಾ ಕಾಂಗ್ರೆಸ್‌ ನಲ್ಲಿ ಪ್ರಮುಖರಾದ ವಿಜಯ ಕುಮಾರ್‌, ಅಶೋಕ್‌ ನಾರ್ವೆ, ಎಪಿಎಂಸಿ ಮಾಜಿ ಅಧ್ಯಕ್ಷ ಉಂಬಳೇಬೈಲು ದುಗ್ಗಪ್ಪಗೌಡ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಅನಿತಾ ಕುಮಾರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಕೆಸ್ತೂರು ಮಂಜುನಾಥ, ಮುಡುಬ ರಾಘವೇಂದ್ರ, ಕೆಪಿಸಿಸಿ ಸದಸ್ಯ ಜಿ.ಎಸ್.‌ ನಾರಾಯಣ ರಾವ್‌,‌ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ, ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲ್ಲೂಕು ಕಾಂಗ್ರೆಸ್ ವಕ್ತಾರ  ಡಿ.ಎಸ್.‌ ವಿಶ್ವನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ಗೀತಾ ರಮೇಶ್, ಸುಶೀಲ ಶೆಟ್ಟಿ, ಮುಖಂಡರಾದ ಕಟ್ಟೇಹಕ್ಕಲು ಕಿರಣ್‌, ಕೆಳಕೆರೆ ದಿವಾಕರ್‌, ಹಾರೋಗೊಳಿಗೆ ಪದ್ಮನಾಭ್‌, ಕಲ್ಪನಾ ಪದ್ಮನಾಭ್‌, ಶೃತಿ ವೆಂಕಟೇಶ್‌, ನಾಬಳ ಶಚೀಂದ್ರ ಹೆಗ್ಡೆ, ಮಂಗಳ ಗೋಪಿ, ಹುಲ್ಲತ್ತಿ ದಿನೇಶ್‌, ನವೀನ್‌ ಕುಮಾರ್‌, ಪಡುವಳ್ಳಿ ಹರ್ಷೇಂದ್ರ, ವಿನಾಯಕ ಆಚಾರ್‌, ಪೂರ್ಣೇಶ್‌ ಕೆಳಕೆರೆ ಮುಂತಾದವರು ಇದ್ದರು.

ಪ್ರತಿಭಟನೆಗೆ ಗೈರು ಪ್ಲಕ್ಸ್‌ನಲ್ಲೂ ನಾಪತ್ತೆ…?

ಈ ಪಾದಯಾತ್ರೆಯಲ್ಲಿ ತಾಲ್ಲೂಕಿನ ಪ್ರಬಲ ರಾಜಕೀಯ ಶಕ್ತಿಗಳಲ್ಲಿ ಒಬ್ಬರಾಗಿರುವ ಕಾಂಗ್ರೆಸ್‌ ನಾಯಕ ಆರ್.ಎಂ. ಮಂಜುನಾಥ ಗೌಡ ಕಾಣಿಸಿಕೊಳ್ಳಲಿಲ್ಲ. ಅಲ್ಲದೇ ಪಕ್ಷದ ವತಿಯಿಂದ ತಾಲ್ಲೂಕಿನಾದ್ಯಂತ ಅಳವಡಿಸಲಾದ ಪ್ಲೆಕ್ಸ್‌ಗಳಲ್ಲಿ ಎಲ್ಲೂ ಅವರ ಭಾವ ಚಿತ್ರ ಕಂಡುಬರಲಿಲ್ಲ. ಇದು ಚರ್ಚೆ ಹಾಗೂ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಯಿತು.

ಗರಂ ಆದ ಕಿಮ್ಮನೆ

ಪ್ರತಿಭಟನೆ ಹಮ್ಮಿಕೊಂಡಿದ್ದು ಗೃಹಸಚಿವ ಆರಗ ಜ್ಞಾನೇಂದ್ರರ ಮನೆ ಬುಡದಲ್ಲೇ ಆದರೂ ಅವರ ವಿರುದ್ಧ ಯಾವುದೇ ರೀತಿಯ ಘೋಷಣೆ ಕೂಗದಂತೆ ಮೆರವಣಿಗೆಗೂ ಮೊದಲೇ ಕಿಮ್ಮನೆ ಫರ್ಮಾನು ಹೊರಡಿಸಿದ್ದರು. ಆದರೆ ಮೆರವಣಿಗೆ ಹೊರಟು ರಂಗೇರುತ್ತಿದ್ದಂತೆಯೇ ತಾಳಿಕೊಳ್ಳಲಾಗದ ನಾಸಿಕ್‌ ಬ್ಯಾಂಡ್‌ನವರು ಗೃಹಸಚಿವರ ಮನೆ ಎದುರಿನ ಸರ್ಕಲ್‌ನಲ್ಲಿ ನಾಲ್ಕು ಪೆಟ್ಟು ಬಾರಿಸಿಯೇ ಬಿಟ್ಟರು. ಕೂಡಲೇ ಉಗ್ರಾವತಾರ ತಾಳಿದ ಕಿಮ್ಮನೆ ಬ್ಯಾಂಡು ಬಾರಿಸುತ್ತಿದ್ದವರ ಬಳಿ ಸಾಗಿ ಹೇಳಿದ್ದು ಕೇಳದಿದ್ದರೇ ವಾಪಾಸ್ಸು ಕಳಿಸುವುದಾಗಿ ಕಟುವಾಗಿ ಎಚ್ಚರಿಕೆ ನೀಡಿದರು.

ಕಾಗೋಡು ಬದಲು ಪುತ್ರಿ ಡಾ. ರಾಜನಂದಿನಿ ಆಗಮನ

ವಾಸ್ತವವಾಗಿ ಪ್ರತಿಭಟನೆಯನ್ನು ಕಾಂಗ್ರೆಸ್‌ ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಉದ್ಘಾಟಿಸಬೇಕಿತ್ತು. ಅನಾರೋಗ್ಯದ ಕಾರಣ ಅವರ ಬದಲು ಪುತ್ರಿ ಹಾಗೂ ಸಾಗರ ಕ್ಷೇತ್ರ ಟಿಕೆಟ್‌ ಆಕಾಂಕ್ಷಿ ಡಾ. ರಾಜನಂದಿನಿ ಆಗಮಿಸಿ ಪಾದಯಾತ್ರೆ ಉದ್ಘಾಟಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post