ಮತ್ತೆ ಕಂಡಕ್ಟರ್ ಆದ ಅಮರನಾಥ ಶೆಟ್ಟಿ
ಸಂದೇಶ ಜವಳಿ ಬದಲಿಗೆ ಸೊಪ್ಪುಗುಡ್ಡೆ ರಾಘವೇಂದ್ರಗೆ ಸಾರಥ್ಯ
ಈ ಚೆಂದಕ್ಕೆ ತಹಶೀಲ್ದಾರ್ ಪೂರ್ವಭಾವಿ ಸಭೆ ಮಾಡಬೇಕಿತ್ತೇ?
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವ ಸಮಿತಿಯ ಪೂರ್ವಭಾವಿ ಸಭೆ ಈಚೆಗೆ ನಡೆದು ಸರ್ವಾನುಮತದಿಂದ
ಸಮಿತಿಯ ಸಂಚಾಲಕರನ್ನಾಗಿ ಸಂದೇಶ ಜವಳಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಭೆ ಮುಕ್ತಾಯಗೊಂಡ ನಂತರದ
ಏಕ್ ದಮ್ ಬದಲಾವಣೆಯಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ಸಂಚಾಲಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ
ಸೊಪ್ಪುಗುಡ್ಡೆ ರಾಘವೇಂದ್ರರನ್ನು ದಸರಾ ಉತ್ಸವ ಸಮಿತಿಗೂ ಸಂಚಾಲಕರನ್ನಾಗಿ ಶಾಸಕ ಆರಗ ಜ್ಞಾನೇಂದ್ರ
ನೇತೃತ್ವದ ಸಭಾ ನಿರ್ಣಯ ಕೈಗೊಳ್ಳಲಾಗಿದೆ.
ದಸರಾ ಉತ್ಸವ ಸಮಿತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಜವಳಿ ಬಹಳ ಉತ್ತಮ ಕೆಲಸವನ್ನು ಮಾಡಿದ್ದಾರೆ.
ಹಿಂದೆ ಸಮಿತಿಯ ಸಂಚಾಲಕರಾದವರು ಲೆಕ್ಕಕೊಡದೆ ಮನೆಗೆ ಹೋಗಿದ್ದರು. ಬ್ಯಾಂಕ್ ಮೂಲಕ ವ್ಯವರಿಸುವ ಕಲ್ಪನೆಯಿಂದ
ಪಾರದರ್ಶಕತೆಯನ್ನು ಜವಳಿ ಮೈಗೂಡಿಸಿಕೊಂಡಿದ್ದು ಅವರೇ ಸಂಚಾಲಕರಾಗಬಹುದು ಅನ್ನಿಸುತ್ತದೆ. ಸಭೆ ಒಪ್ಪಿಗೆ
ಸೂಚಿಸಬೇಕು ಎಂದು ಆರಗ ಜ್ಞಾನೇಂದ್ರ ಪ್ರಸ್ತಾಪ ಮುಂದಿಟ್ಟಿದ್ದರು. ಶಾಸಕರ ಮಾತಿಗೆ ಬೆಲೆ ಕೊಡಬೇಕೆಂಬ
ಕಾರಣದಿಂದ ಜವಳಿ ಮುಂದುವರೆಯಲಿ ಎಂದು ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷದ ಮುಖಂಡರು ತಮ್ಮ ಒಳಗಿರುವ
ಆಸೆಗಳನ್ನು ಬಚ್ಚಿಟ್ಟುಕೊಂಡು ಒಲ್ಲದ ಮನಸ್ಸಿನಿಂದ ಒಪ್ಪಿದ್ದರು.
ಸಭೆ ಮುಗಿದಾಗ ಎಲ್ಲರೂ ಸಂದೇಶ ಜವಳಿ ಸಂಚಾಲಕರೆಂದು ಮಾತನಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂಬಂತೆ
ಮನೆಕಡೆ ಮುಖ ಮಾಡಿದ್ದರು. ಈಗ ಸಭಾ ನಿರ್ಣಯದಲ್ಲಿ ಸೊಪ್ಪುಗುಡ್ಡೆ ರಾಘವೇಂದ್ರ ಹೆಸರು ಸಂಚಾಲಕರ ಸ್ಥಾನದಲ್ಲಿ
ಕಂಡುಬರುತ್ತಿದ್ದಂತೆಯೇ ಇದೆಂತ ಮಾಯೆಯೆಂದು ಹಲುಬತೊಡಗಿದ್ದಾರೆ. ಸ್ವತಃ ಕಂಡಕ್ಟರ್ ಸೀಟು ಅಲಂಕರಿಸಿ
ಸಭೆ ನಿರ್ಣಯ ಪ್ರಸಾದವೆಂದು ತಿಳಿದಿದ್ದ ಅಮರನಾಥ ಶೆಟ್ಟರು ಡ್ರೈವರ್ ಸೀಟ್ ಬದಲಾಗಿರುವ ವಿಷಯ ತಿಳಿದು
ಯಾರಿಗೆ ಶೀಟಿ ಹಾಕಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.
ಕಾರಣ ಜವಳಿಯವರ ಕಲಾಕ್ಷೇತ್ರದ ಅಮೋಘ ಸೇವೆ, ಹಿರಿತನ, ನಿಷ್ಠೂರವಾದ ಎಲ್ಲವನ್ನು ಲಾಗಾಯ್ತಿನಿಂದಲೂ
ಬಲ್ಲ ಅಮರನಾಥ ಶೆಟ್ಟಿ ಬಹಳ ಗೌರವ ಅಭಿಮಾನಗಳಿಂದ ಹಿಂದಿನ ದಿನ ಜವಳಿಯವರನ್ನು ಕಂಡು ತಾವೇ ಈ ಬಾರಿಯೂ
ಸಂಚಾಲಕರಾಗಬೇಕು. ಬಿಟ್ಟರೆ ತೀರ್ಥಹಳ್ಳಿಯಲ್ಲಿ ಅಂತಹ ಸಾಮರ್ಥ್ಯ ಯಾರಿಗೂ ಇಲ್ಲ ಎಂದು ವೀಳ್ಯ ನೀಡಿ
ಬಂದಿದ್ದರಂತೆ. ಯಾವಾಗ ವಿರೋಧ ಪಾಳ್ಯದಿಂದಲೇ ವಿನಯದ ಆಹ್ವಾನ ಸಲ್ಲಿಕೆಯಾಗಿತ್ತೋ ಜವಳಿ ಕೂಡ ಖುಷಿಯಾಗಿದ್ದರು
ಎಂದು ಕಾಂಗ್ರೆಸ್ ಹುಡುಗರೇ ಮಾತನಾಡಿಕೊಳ್ಳುತ್ತಿದ್ದಾರೆ.
ಭಾರಿ ಸುದ್ದಿ ಮಾಡಿದ್ದ ಕುರುವಳ್ಳಿಯ ಗಣೇಶೋತ್ಸವ ವಿಸರ್ಜನ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದ
ಸ್ಥಬ್ದಚಿತ್ರ, ಕಲಾತಂಡಗಳು ದಸರಾದಲ್ಲಿಯೂ ಕಾಣಿಸಿಕೊಳ್ಳಲಿವೆ. ಆ ಮೂಲಕ ಸಂಜೆಯಾದ ಕಾರಣ ಕುರುವಳ್ಳಿ
ಗಣೇಶೋತ್ಸವ ಮೆರವಣಿಗೆ ವೀಕ್ಷಣೆ ಮಾಡದವರಿಗೆ ಹಗಲು ಹೊತ್ತಿನಲ್ಲಿ ಮತ್ತೊಮ್ಮೆ ವೀಕ್ಷಿಸುವ ಅವಕಾಶವನ್ನು
ದಸರಾ ಸಮಿತಿ ಕರುಣಿಸುವ ಸಾಧ್ಯತೆ ನಿಚ್ಚಳವಾಗಿದೆ!
ಎರಡು ವರ್ಷಗಳ ಹಿಂದೆ ಗೋಪಾಲಗೌಡ ರಂಗಮಂದಿರದಲ್ಲಿ ಹುಲಿವೇಷ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ಮುಖ್ಯ ದಸರಾ ಉತ್ಸವವನ್ನೇ ಮಸುಕು ಮಾಡುವಂತೆ ಯಶಸ್ಸು ಸಾಧಿಸಿದ್ದ ಯುವ ಕಾಂಗ್ರೆಸ್ ತಂಡದ ಸದ್ದುಗದ್ದಲ ನೋಡಿ ಎಚ್ಚರಗೊಂಡಿದ್ದ ಬಿಜೆಪಿಯ ಪರ್ಮನೆಂಟ್ ದಸರಾ ಸಮಿತಿ ನಮ್ಮೊಳಗೆ ಜಗಳ ಬೇಡ ಎಂದು ರಾಜೀಕಬೂಲಿ ಮಾಡಿ ಭಾರಿ ಆಕರ್ಷಣೀಯ ಹುಲಿವೇಷ ಸ್ಪರ್ಧೆಯನ್ನು ದಸರಾ ವೇದಿಕೆಯ ಮೇಲೆ ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಬುಧವಾರ ಹುಲಿವೇಶ ಸ್ಪರ್ಧೆಯ ಕುರಿತಂತೆ ಮಯೂರ ಹೋಟೆಲೆನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಇನ್ನೇನು ಸಮಿತಿ ಸಂಚಾಲಕರಾದ ಸಂದೇಶ ಜವಳಿಯ ಒಪ್ಪಿಗೆ ಪಡೆದು ಆಯೋಜನೆಗೆ ಮುಂದಡಿ ಇಡಲಾಗಿತ್ತು. ಆದರೆ ಮುಂಜಾನೆ ಆಗುತ್ತಿದ್ದಂತೆ ಸಂಚಾಲಕರೇ ಬದಲಾವಣೆ ಆಗಿದ್ದು ಯಾರ ಬಳಿ ತಮ್ಮ ಅಹವಾಲು ಸಲ್ಲಿಸಬೇಕೆಂಬ ಗೊಂದಲದಲ್ಲಿ ಹುಲಿವೇಷ ಸ್ಪರ್ಧೆ ಆಯೋಜನಾ ತಂಡ ಸಿಲುಕಿಕೊಂಡಿದೆ.
