ತಂತ್ರ, ಪ್ರತಿತಂತ್ರದ ಆಟದಲ್ಲಿ ಮೇಲುಗೈ ಯಾರದ್ದು?
ಕಸ್ತೂರಿ ರಂಗನ್ ವರದಿ ವಿರೋಧ ಮಾಡಿ ತೀರ್ಥಹಳ್ಳಿಯಲ್ಲಿ ಸ್ವಲ್ಪ ಹೆಚ್ಚು ಅಂದರೆ ನಾಲ್ಕು ಪ್ರತೇಕ ಹೋರಾಟ ನಡೆದಿದೆ. ಮೊದಲ ಹೋರಾಟ ತೀರ್ಥಹಳ್ಳಿಯ ಹೆಸರಾಂತ ರೈತ ಹೋರಾಟಗಾರರಾದ ಹೊಸಕೊಪ್ಪ ಸುಂದರೇಶ್, ನೆಂಪೆ ದೇವರಾಜ್, ಕೋಣಂದೂರು ಅಶೋಕ್ ನೇತೃತ್ವದಲ್ಲಿ ನಡೆಯಿತು. ಇದರಲ್ಲಿ ರಾಜಕೀಯ ಲೆಕ್ಕಾಚಾರ ಏನೂ ಇರಲಿಲ್ಲ ಹಾಗಾಗಿ ಇದು ಅಷ್ಟಾಗಿ ಗಮನ ಸೆಳೆಯಲಿಲ್ಲ.
ಎರಡನೆಯದು ಸಹಕಾರಿ ವೇದಿಕೆ ಹೆಸರಲ್ಲಿ ಅರ್.ಎಂ. ಮಂಜುನಾಥ ಗೌಡರು ಏರ್ಪಾಡು ಮಾಡಿದ್ದ ಪಾದಯಾತ್ರೆ. ಗೌಡರ ನಾಮ
ಬಲ, ಸಂಘಟನೆ
ಶಕ್ತಿಯ ಕಾರಣ ಇದು ಯಶಸ್ವಿಯಾಯಿತು. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವರದಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಹರಿಹಾಯ್ದು ಒಳ್ಳೆ ರಂಜನೆ
ನೀಡಿದರು. ಅಂದ ಹಾಗೆ ಈ ಪಾದಯಾತ್ರೆಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಡಬ್ಬಲ್ ಇಂಜಿನ್ ಗಳಲ್ಲಿ
ಒಬ್ಬರಾದ ಕಿಮ್ಮನೆ ರತ್ನಾಕರ್ ಭಾಗವಹಿಸಲಿಲ್ಲ.
ಹಾಗೆ ಹೇಳುವುದಕ್ಕಿಂತಲೂ ಕಿಮ್ಮನೆಗೆ ಹೋಗುವುದು ಬೇಕಿರಲಿಲ್ಲ.
ಗೌಡರಿಗೆ ಕಿಮ್ಮನೆ ಬರುವುದು ಬೇಕಿರಲಿಲ್ಲ ಎನ್ನುವುದೇ ಸರಿಯಾಗಬಹುದೇನೊ. ಆದರೆ ಪಾದಯಾತ್ರೆ ಭರ್ಜರಿ ಯಶಸ್ಸು ಕಂಡಿತು. ಇದಾಗುತ್ತಿದ್ದ ಹಾಗೆ ತಳಮಳಕ್ಕೆ ಒಳಗಾದ
ಶಾಸಕ ಆರಗ ಜ್ಞಾನೇಂದ್ರ ಸದ್ಯ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಹೊರಟಿರುವುದು ಬಿಜೆಪಿಯ ಮೋದಿ
ಸರ್ಕಾರ. ಹಾಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತಿಲ್ಲ. ಮಾಡದಿದ್ದರೆ ವರದಿ ಪರ ಎಂದು
ಜನ ತಪ್ಪು ತಿಳಿದರೆ ಇದೆಲ್ಲಿ ಗ್ರಹಚಾರ ಎಂದು ಕೇಂದ್ರ ಸರ್ಕಾರದ
ವಿರುದ್ಧ ಅಲ್ಲ, ಸುಪ್ರೀಂ ಕೋರ್ಟಿನಲ್ಲಿರುವ ಕಸ್ತೂರಿ ರಂಗನ್ ವರದಿ
ವಿರುದ್ಧ ಪಕ್ಷಾತೀತ ಹೋರಾಟ ಎಂಬ ಲೇಬಲು ಹಚ್ಚಿ ಗೋಪಾಲಗೌಡ ರಂಗಮಂದಿರದಲ್ಲಿ
ಸಮಾವೇಶ ಮಾಡಿದರು. ಮಧ್ಯಾಹ್ನದ ನಂತರ ನಡೆದರು ಅದು ಕೂಡ ಯಶಸ್ವಿಯಾಯಿತು.
ಮುಂದೆ ಉಳಿದಿದ್ದು ಕಿಮ್ಮನೆ ಸರದಿ. ಕಿಮ್ಮನೆ ಕಸ್ತೂರಿ ರಂಗನ್ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಬೇಕು ಅಥವಾ ಬೇಡ ಎಂಬ ನಿರ್ಧಾರ ತೆಗೆದುಕೊಳ್ಳಬಹುದು. ಸಂಸದ
ರಾಘವೇಂದ್ರರಾಗಲಿ, ಶಾಸಕ
ಆರಗರಾಗಲಿ ಪಾದಯಾತ್ರೆ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ. ನಾನಂತು ಬಿಜೆಪಿ
ಮತ್ತು ಅದರ ಪಾಲುದಾರ ಪಕ್ಷ ಜೆಡಿಎಸ್ ಜೊತೆಗೆ ವೇದಿಕೆ ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು
ಕಡ್ಡಿ ಮುರಿದ ಹಾಗೆ ಹೇಳಿ ಬಿಂತ್ಲದಿಂದ ತೀರ್ಥಹಳ್ಳಿ ತನಕ ಪಾದಯಾತ್ರೆ ಮಾಡಿದರು.
ಆ ಮೂಲಕ ಬಿಂತ್ಲದಲ್ಲಿ ಅವರ ಮಗನ ಹೆಸರಲ್ಲಿ ಕೊಂಡಿದ್ದಾರೆ ಎಂದು
ಹೇಳಲಾಗಿರುವ 10 ಎಕರೆ ಪ್ಲಸ್
ಒಂದಿಷ್ಟು ಒತ್ತುವರಿಯನ್ನು ಸಾವಿರಾರು ಜನರಿಗೆ ಉಚಿತವಾಗಿ ತೋರಿಸಿ ಜ್ಞಾನೇಂದ್ರರ ತಳಮಳ
ಹೆಚ್ಚಿಸಿದರು..! ಈ ಪಾದಯಾತ್ರೆ ಕಾಂಗ್ರೆಸ್ ಲೇಬಲಿನಲ್ಲಿ ನಡೆದು ಹಿಂದಿನ ಎಲ್ಲ
ಪಾದಯಾತ್ರೆಗಳನ್ನು ಮೀರಿಸಿ ಯಶಸ್ಸು ಕಂಡಿತು ಮಾತ್ರವಲ್ಲ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ
ಆಗಮಿಸಿ ಕಿಮ್ಮನೆಯವರಿಗೆ ವಿಶೇಷ ಬಲ ತುಂಬಿದರು.
ತಳಮಳ ಬಿಂತ್ಲದ ಕಡೆಯಿಂದ ಅರ್‌ಎಂಎಂ ಹೆಗಲೇರಿತು...! ಏಕೆಂದರೆ ಅರ್.ಎಂ. ತಮ್ಮ ಮುಂದಾಳತ್ವದ ಪಾದಯಾತ್ರೆಯನ್ನು ಪಕ್ಷತೀತ ಎಂದು
ಕರೆದುಕೊಂಡಿದ್ದರು. ಅಲ್ಲದೇ ಪರೋಕ್ಷವಾಗಿ ಟೀಕೆಗಳನ್ನು ಮಾಡಿದ್ದರು. ಅದಕ್ಕೆ
ಪೂರಕವಾಗಿ ಹೊಸನಗರದಲ್ಲಿ ಆರ್.ಎಂ. ಏರ್ಪಡಿಸಿದ್ದ
ಹೋರಾಟದಲ್ಲಿ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ ಕೂಡ ಗೌಡರ ಜೊತೆಗೆ
ಕಾಣಿಸಿಕೊಂಡಿದ್ದರು. ಹಾಗೆ ಬರುವ ಮುಂಚೆ ಇದಕ್ಕೆ ಕಾರಣ ಮನಮೋಹನ್ ಸಿಂಗ್ ನೇತೃತ್ವದಲ್ಲಿನ
ಕಾಂಗ್ರೆಸ್ ಸರ್ಕಾರ ಮತ್ತು ಅಂದಿನ ಪರಿಸರ ಸಚಿವ ಜೈರಾಮ್ ರಮೇಶ್ ಎಂದು
ಹೇಳುವುದನ್ನ ಬಿವೈಆರ್, ಆರಗ ಮರೆತಿರಲಿಲ್ಲ...!.
ಆದರೆ ಆರ್.ಎಂ. ಮಂಜುನಾಥಗೌಡ ತಮ್ಮ
ಭಾಷಣಗಳಲ್ಲಿ ಮಾಧವ ಗಾಡ್ಗಿಲ್ ವರದಿ ಮೂಲಕ ಚಾಲನೆ ನೀಡಿದ್ದು ಯುಪಿಎ ಸರ್ಕಾರ ಆದರೂ ನಂತರ ಮೋದಿ ಸರ್ಕಾರ ಕಸ್ತೂರಿ ರಂಗನ್ ವರದಿ ಯಥಾವತ್ ಅನುಷ್ಠಾನಕ್ಕೆ ಹಸಿರುಪೀಠದ
ಮುಂದೆ ಅಫಿಡವಿಟ್ ಹಾಕಿದೆ ಎಂದು ಹೇಳುವ ಗೋಜಿಗೆ ಹೋಗಿರಲಿಲ್ಲ.
ಅವರ ಹಿಂಬಾಲಕರ ನಿರೀಕ್ಷೆಯಲ್ಲಿ ಕಿಮ್ಮನೆ ರತ್ನಾಕರ್ ನಡೆಸಲಿರುವ ಪಾದಯಾತ್ರೆ ಯಶಸ್ವಿ ಆಗಲಿಕ್ಕಿಲ್ಲ
ಎಂಬ ಆಶಾಭಾವನೆಯಲ್ಲಿದ್ದರೇನೊ.
ಒಂದು ಕಡೆ ಆರಗ ಮತ್ತು ಬಿವೈಆರ್ ಕಸ್ತೂರಿ ರಂಗನ್ ವರದಿ ಕಾಂಗ್ರೆಸ್ ಪಾಪದ ಕೂಸು ಎನ್ನುವುದು.
ಆರ್.ಎಂ. ಅವರ ಜೊತೆಗೆ ಸೇರಿ ತಮ್ಮದು ಪಕ್ಷತೀತ
ಹೋರಾಟ ಎನ್ನುವುದು. ಇದು ಕಾಂಗ್ರೆಸ್ಸಿನ ಬಹುತೇಕ ನಾಯಕರು ಮತ್ತು
ಕಾರ್ಯಕರ್ತರಿಗೆ ಇಷ್ಟವಾಗಲಿಲ್ಲ. ಪರಿಣಾಮ ಕೇಂದ್ರ ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ಹೆಜ್ಜೆ
ಹಾಕಲಾರೆ ಎನ್ನುವ ಕಿಮ್ಮನೆ ಸ್ಪಷ್ಟತೆ ಹೆಚ್ಚು ಪರಿಣಾಮ ಬೀರಿತು. ಮೊದಲು ಗೌಡರ ಎದುರು ಕಿಮ್ಮನೆ
ಜೊತೆಗೆ ಗುರುತಿಸಿಕೊಳ್ಳಲು ಹಿಂಜರಿಕೆ ಮಾಡುತ್ತಿದ ಬಹುತೇಕರು ಕಿಮ್ಮನೆ ಪಾದಯಾತ್ರೆಯಲ್ಲೂ
ಪಾಲ್ಗೊಂಡರು. ಮಾತ್ರವಲ್ಲ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್
ಸೊರಕೆ ಕಿಮ್ಮನೆಯವರನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿ ಅವರ ಇಮೇಜು ಪಕ್ಷದೊಳಗೆ ಹೆಚ್ಚುವಂತೆ ಮಾಡಿದರು.
ಅದರ ಪರಿಣಾಮ ಗೌಡರ ಲೆಕ್ಕಾಚಾರ ಉಲ್ಟಾ ಆಗಿ ಸಿಎಂ ಕಾರ್ಯಕ್ರಮದಲ್ಲಿ ಶಿಷ್ಟಾಚಾರ
ಮೀರಿ ಕಿಮ್ಮನೆಯನ್ನು ಸ್ವತಃ ಶಿವಕುಮಾರ್ ಆಹ್ವಾನಿಸಿದ್ದಲ್ಲದೇ ಮಾತನಾಡಲು ಅವಕಾಶ ಕೊಟ್ಟರು. ಅಲ್ಲೂ
ಕೂಡ ಕಿಮ್ಮನೆ ಭಾಷಣಕ್ಕೆ ದೊಡ್ಡ ಚಪ್ಪಾಳೆಯೆ ದೊರಕಿತು.
ಅಂದಹಾಗೆ ಒಂದು ಕಾಲದಲ್ಲಿ ದೇವೇಗೌಡರಂತಹ ಮುತ್ಸದ್ದಿ ರಾಜಕಾರಣಿಯನ್ನು
ದೇಶಕ್ಕೆ ಪ್ರಧಾನಿಯಾಗಿ ನೀಡಿದ, ಸ್ವಂತ
ಬಲದಿಂದ ಕಾಂಗ್ರೆಸ್ ಹೊರತಾದ ಸರ್ಕಾರ ರಚಿಸಿದ್ದ ಜೆಡಿಎಸ್ ಕೂಡ ಕಸ್ತೂರಿ
ರಂಗನ್ ವರದಿ ವಿರುದ್ಧ ಒಂದು ಹೋರಾಟ ಮಾಡಿದ್ದರೆ ಒಟ್ಟು ಹೋರಾಟದ ಸಂಖ್ಯೆ
5ಕ್ಕೆ ತಲುಪುತಿತ್ತು. ಆದರೆ ತಾಲೂಕಿನಲ್ಲಿ ಈಗ ಜೆಡಿಎಸ್ ಎಂತ ದಯನೀಯ ಸ್ಥಿತಿ ತಲುಪಿದ ಎಂದರೆ ಬಿಜೆಪಿ ಅಥವಾ ಅರಗರಿಗೆ ತೊಂದರೆ ಆದರೆ ಒಂದು ಸುದ್ದಿಗೋಷ್ಠಿ
ಮಾಡಿ ಎದ್ದು ಹೋಗುವಷ್ಟು.
ಒಟ್ಟಾರೆ ಕಸ್ತೂರಿ ರಂಗನ್ ವರದಿಯ ಪ್ರಖ್ಯಾತ ಹೋರಾಟಗಳಿಂದ ಪರಿಣಾಮ ಏನಾಯಿತೋ ಇನ್ನು ಗೊತ್ತಾಗಿಲ್ಲ.
ಆದರೆ ಈ ಒಂದು ಪದ ಒಂದಷ್ಟು ದಿನಗಳ ಕಾಲ ಆರಗ, ಆರ್‌ಎಂ, ಕಿಮ್ಮನೆಯನ್ನು ತಂತ್ರ ಪ್ರತಿತಂತ್ರಗಳ ಸುಳಿಗೆ
ಸಿಲುಕಿಸಿ ಗಮನ ಸೆಳೆದಿರುವುದಂತು ಸತ್ಯ.
