ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯ ಎರಡನೇ ಹಂತದಲ್ಲಿ ಶಾಸಕ ನಾಗೇಂದ್ರ ಅವರನ್ನು ಸಚಿವರನ್ನಾಗಿ ನೇಮಕ ಮಾಡಿ ಪ್ರಮಾಣ ವಚನ ಬೋಧಿಸಿರುವುದಕ್ಕೆ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ .
ದೇಶಕ್ಕೆ ನೈತಿಕತೆಯ ಬೋಧನೆ ಮಾಡುವ ಕಾಂಗ್ರೆಸ್ ಪಕ್ಷದ ಈ ನಿರ್ಧಾರ ಅನೈತಿಕವಾದುದು ಎಂದಿರುವ ಆರಗ,
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಡವರು ಹಾಗೂ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಬರೋಬ್ಬರಿ 187 ಕೋಟಿ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರರವರ ಮೇಲೆ ಕಾನೂನು ತನಿಖೆ ಮತ್ತು ಮುಖದ್ದಮೆಗಳು ಇನ್ನೂ ಜೀವಂತವಾಗಿದ್ದು ವಿಚಾರಣೆ ನಡೆಯುತ್ತಲೇ ಇದೆ.
ಸ್ವತಃ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಅಕ್ರಮ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಮೊತ್ತದ ವ್ಯತ್ಯಾಸದ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಹಗರಣ ನಡೆದಿರುವುದಂತೂ ಸತ್ಯ ಎಂದು ಸಿದ್ದರಾಮಯ್ಯನವರೇ ಸದನದಲ್ಲಿ ಹೇಳಿದ್ದಾರೆ,ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಸಕ ನಾಗೇಂದ್ರರವರನ್ನು ಆತುರಾತುರವಾಗಿ ಮರಳಿ ಸಂಪುಟಕ್ಕೆ ಸೇರಿಸಿಕೊಂಡಿರುವುದು ರಾಜ್ಯದ ರಾಜಕೀಯ ಮೌಲ್ಯಗಳಿಗೆ ಧಕ್ಕೆ ತಂದಿದೆ.
ಈ ಹಗರಣದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಶಿವಮೊಗ್ಗ ಮೂಲದ ಚಂದ್ರಶೇಖರ ಅವರ ಕುಟುಂಬ ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಆ ಸಾವಿನ ನೆನಪುಗಳು ಇನ್ನೂ ಹಸಿಯಾಗಿರುವಾಗಲೇ, ಆರೋಪದ ಸುಳಿಯಲ್ಲಿರುವವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಖಂಡನೀಯ.
ಸಾರ್ವಜನಿಕ ಜೀವನದಲ್ಲಿ ಮೌಲ್ಯ ಹಾಗೂ ನೈತಿಕತೆಯನ್ನು ಎತ್ತಿಹಿಡಿಯಬೇಕಾದ ಕಾಂಗ್ರೆಸ್ ನಾಯಕತ್ವ, ವಿಶೇಷವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡುವ ಮೂಲಕ ನೈತಿಕತೆಯನ್ನು ಪ್ರದರ್ಶಿಸಬೇಕೆಂದು ಜ್ಞಾನೇಂದ್ರ ಆಗ್ರಿಹಿಸಿದ್ದಾರೆ,