ಸಹೃದಯತೆಗೆ ದೊಡ್ಡ ಉದಾಹರಣೆ ಎಂಬಂತೆ ಬಾಳಿ ಬದುಕಿದ ಮಕ್ಕಿಮನೆ ವಿಠೋಬ ರಾವ್ (83) ಇನ್ನಿಲ್ಲ ಎಂಬ ಸುದ್ದಿ ತಿಳಿಸಲು ವಿಷಾದವಾಗುತ್ತಿದೆ. ಪ್ರಗತಿಪರ ಕೃಷಿಕನಾಗಿದ್ದು ಪರೋಪಕಾರ ಎಂಬುದನ್ನು ಅತ್ಯಂತ ಸಹಜವಾಗಿ ರೂಡಿಸಿಕೊಂಡಿದ್ದ ವಿಠೋಭ ರಾವ್ ಬಹಳ ಮುಖ್ಯವಾಗಿ ಮಣಿಪಾಲ ಆಸ್ಪತ್ರೆಗೆ ಈ ಭಾಗದಿಂದ ಯಾರನ್ನೇ ಚಿಕಿತ್ಸೆಗೆ ಸೇರಿಸುವುದಾದರೂ ಮೊದಲು ನೆನಪಾಗುತ್ತಿದ್ದರು.
ಮಣಿಪಾಲ ಆಸ್ಪತ್ರೆ ಆರಂಭದ ಕಾಲದಿಂದಲೂ ಅವರು ಆ ಆಸ್ಪತ್ರೆಯ ವ್ಯವಸ್ಥೆಯಿಂದ
ಗೌರವ ನೀಡಲ್ಪಟ್ಟವರು. ಹಾಗಾಗಿ ಅವರು ಹೇಳಿದ ಯಾವುದೇ ಅಪತ್ತಿನಲ್ಲಿದ್ದವರಿಗೆ ಅಲ್ಲಿ ಒಳ್ಳೆ ಪ್ರತಿಕ್ರಿಯೆ
ದೊರಕುತ್ತಿತ್ತು. ಶಿಫಾರಸ್ಸು ಮಾಡಿದ ನಂತರವು ಸುಮ್ಮನಾಗದ ಅವರು ಕಳುಹಿಸಿ ಕೊಟ್ಟ ರೋಗಿ ಗುಣ ಆಗುವ
ತನಕ ನಿರಂತರವಾಗಿ ವಿಚಾರಿಸಿ ಧೈರ್ಯ ತುಂಬುತ್ತಿದ್ದರು.
ಒಳ್ಳೆ ಓದುಗನಾಗಿದ್ದ ರಾಯರು ಅಸೌಖ್ಯದಿಂದ ಹಾಸಿಗೆ ಹಿಡಿಯುವ ತನಕವು ತೀರ್ಥಹಳ್ಳಿಯಲ್ಲಿ
ಏರ್ಪಡಾಗುವ ಯಾವುದೇ ಸಾಹಿತ್ಯ ಕಾರ್ಯಕ್ರಮವಿದ್ದರು ಸಮಯಕ್ಕೆ ಸರಿಯಾಗಿ ಬಂದು ಕುಳಿತು ತಪ್ಪದೆ ಪುಸ್ತಕ
ಖರೀದಿ ಮಾಡುತ್ತಿದ್ದರು. ಮಾತ್ರವಲ್ಲ ಓದಿ ನಿಷ್ಠುರವಾಗಿ ಅವರ ಅಭಿಪ್ರಾಯ ಹೇಳುತ್ತಿದ್ದರು. ಅಲ್ಲದೆ
ಪುಸ್ತಕ ನೀಡಲು ಅಥವಾ ಅಹ್ವಾನ ನೀಡಲು ಮನೆಗೆ ಹೋದರೆ ಕೈಲಾದಷ್ಟು ಧನ ಸಹಾಯ ಮಾಡದೇ ಕಳುಹಿಸುತ್ತಿರಲಿಲ್ಲ.
ಕಳೆದೆರಡು ವರ್ಷದಿಂದ ವಯೋ ಸಹಜ ಕಾಯಿಲೆಗಳಿಂದ ಬಳಲಿದ್ದ ಅವರು ಹಾಸಿಗೆ ಹಿಡಿದಿದ್ದರು. ಏನೇ
ಸಮಸ್ಯೆಗಳಿದ್ದರು ಬದುಕನ್ನು ಘನತೆಯಿಂದ ಕಂಡು ತನ್ನ ಸುತ್ತಲಿನ ಸಮಾಜದ ಓರೆಕೋರೆಗಳನ್ನು ಅವರದ್ದೇ
ಆದ ಸಮನ್ವಯತೆ ದೃಷ್ಟಿಕೋನದಿಂದ ವಿಮರ್ಶಿಸುತ್ತಿದ್ದ ಪರರ ಕಷ್ಟಕ್ಕೆ ಮಿಡಿಯುತ್ತಿದ್ದ ಅವರ ನಿಧನದಿಂದ
ನಿಜವಾಗಿಯೂ ತೀರ್ಥಹಳ್ಳಿಯ ಅತ್ಯಂತ ವಿಶಿಷ್ಟ ವ್ಯಕ್ತಿತ್ವವೊಂದು ಕಣ್ಮರೆ ಆದಂತಾಗಿದೆ. ಅವರು
ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಸೋಮವಾರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.
