ದಲಿತರು -ಅಲ್ಪ ಸಂಖ್ಯಾತರು ಟಾರ್ಗೆಟ್
ಮರಳಿನ 35ಲಕ್ಷ ಗುಡ್ಡೆಕೊಪ್ಪಕ್ಕೆ ಹೋಗಿದೆ
ಅರಗದಲ್ಲಿ ಅಕ್ರಮ ಮರಳು ನಡೆಯುತ್ತಿಲ್ಲವೆ
ನನ್ನ ಸೋಲಿಸಿದ್ದು ಬಿಜೆಪಿ ಅಲ್ಲ ಬದಲು ಪಕ್ಷದವರು
ಎಸ್.ಐ.ಆರ್ (ವಿಶೇಷ ತೀವ್ರ ಮತ ಪರಿಷ್ಕರಣೆ) ಸಂಪೂರ್ಣ ಗೊಂದಲದಿಂದ ಕೂಡಿದ್ದು ಇದು ಜನ ವಿರೋಧಿಯಾಗಿದೆ. ಈ ದೇಶದಲ್ಲಿ ಹುಟ್ಟಿದವರನ್ನೇ ಇದು ಅನುಮಾನದಿಂದ ನೋಡುತ್ತಿದೆ. ಇದರ ಹಿಂದೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಗುಪ್ತ ಅಜೆಂಡಾ ಕಾಣಿಸುತ್ತಿದೆ
ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪ ಮಾಡಿದ್ದಾರೆ.
ಇಂದು ತೀರ್ಥಹಳ್ಳಿ ಡಿಜೆ ಮೆಮೋರಿಯಲ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಆಯೋಗ ದುರ್ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಉಳಿಯಲು ಸಂಚು ಹೂಡಿದೆ. ಬಂಗಾಳ, ಬಿಹಾರ್, ತಮಿಳುನಾಡು ಮುಂತಾದ ಕಡೆ ನಡೆಸಲಾದ ಎಸ್ಐಆರ್ ಪ್ರಕ್ರಿಯೆಯಿಂದ ಹೊರಗುಳಿದ ಮತದಾರರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಜನ ವಿಶೇಷವಾಗಿ ಬಿಜೆಪಿ ಹೊರತು ಪಡಿಸಿ ಮತ ಹಾಕುವವರು ಎಚ್ಚರದಿಂದ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.
ಬಿಜೆಪಿ ನೀತಿಯೇ ಮಹಿಳೆ ಮತ್ತು ದಲಿತರನ್ನು ಅವಕಾಶ ವಂಚಿತರಾಗಿ ಮಾಡುವುದು ಅವರಿಗೆ ಆರ್ ಎಸ್ ಎಸ್ ಪಾಠವೂ ಅದೇ ಆಗಿರುತ್ತದೆ. ಎಷ್ಟು ಮಹಿಳೆಯರು ಆರ್ ಎಸ್ ಎಸ್ ಸಂಘಟನೆಯಲ್ಲಿ ಕನಿಷ್ಟ ಘಟಕದ ಅಧ್ಯಕ್ಷರಾಗಿದ್ದಾರೆ. ಉನ್ನತ ಹುದ್ದೆಯ ಮಾತು ಅಲ್ಲಿಲ್ಲ. ಅಂತಹ ಅಧ್ಯಕ್ಷರಿದ್ದರೆ ಬಹಿರಂಗ ಪಡಿಸಲಿ ಎಂದು ಕಿಮ್ಮನೆ ಸವಾಲು ಹಾಕಿದರು.
ಆರ್ ಎಸ್ ಎಸ್ ನೊಂದಣಿ ಆಗಬೇಕು ಎನ್ನುವ ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ನನ್ನ ಬೆಂಬಲ ಇದೆ. ಜಗತ್ತಿನ ಅತೀ ದೊಡ್ಡ ಸಂಘಟನೆ ಎಂದು ಹೇಳುವ ಆರ್ ಎಸ್ ಎಸ್ ನೊಂದಣಿ ಮಾಡಿಕೊಳ್ಳಲು ಭಯ ಪಡುವುದೇಕೆ ಎಂದು ಕಿಮ್ಮನೆ ಪ್ರಶ್ನಿಸಿದರು.
ಮರಳಿನ 35 ಲಕ್ಷ ಗುಡ್ಡೆಕೊಪ್ಪ ತಲುಪಿದೆ. ಆಮೇಲೆ ಕೂಗಾಟ ಕಡಿಮೆ ಆಗಿದೆ. ಬೇಡಿಕೆ ಕೋಟಿಗಟ್ಟಲೆ ಲೆಕ್ಕಕ್ಕೆ ಇಡಲಾಗಿದೆ. ಅರಗದಲ್ಲಿ ನಿತ್ಯ ಲಕ್ಷಗಟ್ಟಲೆ ಮರಳು ಲೂಟಿ ಆದರೂ ಅದರ ಹಿಂದಿನ ಮೌನದ ಗುಟ್ಟೇನು ಎಂದು ಕಿಮ್ಮನೆ ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾಲಿನ ಧೂಳಿಗೂ ಸಮನಾಗದ ಅವಿವೇಕಿ ಒಬ್ಬ ಅವರ ವಿರುದ್ಧ ಮಾತನಾಡುತ್ತಿದ್ದಾನೆ. ಅವನು ಅನ್ನ ತಿನ್ನುತ್ತಿರುವುದೇ ಮರಳಿನ ದುಡ್ಡಿನಿಂದ ಎಂದು ಕಿಮ್ಮನೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಮಂಜುಳಾ ನಾಗೇಂದ್ರ, ಶಬನಮ್, ವಿಲಿಯಂ ಮಾರ್ಟೀಸ್ ಉಪಸ್ಥಿತರಿದ್ದರು.