ಆಡಳಿತಕ್ಕೆ ಡಿಕೆಶಿ
– ಪಕ್ಷ ಸಿದ್ದಾಂತ ಸಮರ್ಥನೆಗೆ ಬಿಕೆಹೆಚ್
ಜೊತೆಗೆ ಹೆಜ್ಜೆ
ಹಾಕಲು ಬೇಕಿದೆ ಹೊಸ ಪಡೆ
ಧ್ವನಿ ಏರಿಸತೊಡಗಿದ
ಕಟ್ಟಾ ಕಾಂಗ್ರೆಸ್ಸಿಗರು
ರಾಜ್ಯ ಮಟ್ಟದಲ್ಲಿ
ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ, ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್
ಆಯ್ಕೆಯಾಗುತ್ತಿದಂತೆಯೇ ಅದರ ರಾಜಕೀಯ ಪರಿಣಾಮ ಬೆಂಗಳೂರಿನಿಂದ ಹಿಡಿದು ತಾಲ್ಲೂಕು ಮಟ್ಟದ ವರೆಗೂ ಬೀರುವ
ಸಾಧ್ಯತೆಗಳು ದಟ್ಟವಾಗಿದೆ. ಇದರ ಭಾಗವಾಗಿ ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ತೀರ್ಥಹಳ್ಳಿ ಬ್ಲಾಕ್
ಕಾಂಗ್ರೆಸ್‌ಗೆ ಮೇಜರಿ ಸರ್ಜರಿ ಆಗುವ ಮುನ್ಸೂಚನೆಗಳು ದೊರಕತೊಡಗಿದೆ. ಸದ್ಯ ಕಾಂಗ್ರೆಸ್‌ನಿಂದ ತೀರ್ಥಹಳ್ಳಿ
ಬ್ಲಾಕ್ ಅಧ್ಯಕ್ಷರಾಗಿ ಕೆಸ್ತೂರು ಮಂಜುನಾಥ್ ಹಾಗೂ ಕೋಣಂದೂರು ಬ್ಲಾಕ್ ಅಧ್ಯಕ್ಷರಾಗಿ ಮುಡುಬ ರಾಘವೇಂದ್ರ
ಕಾರ್ಯ ನಿರ್ವಹಿಸುತ್ತಿದ್ದಾರೆ.
ತೀರ್ಥಹಳ್ಳಿ ಬ್ಲಾಕ್
ಅಧ್ಯಕ್ಷರಾಗಿ ದಶಕದ ಹತ್ತಿರಕ್ಕೆ ಬಂದಿರುವ ಕೆಸ್ತೂರು ಮಂಜುನಾಥ್ ಕುರಿತು ಇರುವ ಬಹುದೊಡ್ಡ ಆರೋಪವೇನೆಂದರೆ
ಬೂತ್ ಮಟ್ಟದಿಂದ ಹಿಡಿದು ತಾಲ್ಲೂಕು ಮಟ್ಟದವರೆಗೆ ಸರಿಯಾದ ತಂಡವನ್ನೇ ಕಟ್ಟುವಲ್ಲಿ ತಮ್ಮ ಸಾಮರ್ಥ್ಯವನ್ನು
ಎಂದಿಗೂ ತೋರಿಲ್ಲ ಎಂಬುದು, ಹಾಗಾಗಿ ಕಾಂಗ್ರೆಸ್ ನ ಕಾರ್ಯಕ್ರಮವನ್ನು ತಳಮಟ್ಟದಲ್ಲಿ ಪ್ರಚಾರ ಮಾಡಲು
ಕಾರ್ಯಕರ್ತರನ್ನು ಹುಡುಕಬೇಕಾದ ಪರಿಸ್ಥಿತಿ ಒದಗಿದೆ ಎನ್ನುತ್ತಾರೆ ಕಟ್ಟಾ ಕಾಂಗ್ರೆಸ್ ಅಭಿಮಾನಿಗಳು.
ಕೋಣಂದೂರು ಅಧ್ಯಕ್ಷರಾಗಿ
ಕಾರ್ಯ ನಿರ್ವಹಿಸುತ್ತಿರುವ ಮುಡುಬ ರಾಘವೇಂದ್ರಗೆ ವಯಸ್ಸು ಮತ್ತು ಪ್ರಭಾವ ಎರಡು ಇದ್ದಾಗಲೂ ತೀರ್ಥಹಳ್ಳಿಯಲ್ಲಿ
ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜುನಾಥ ಗೌಡರ ರೂಪದಲ್ಲಿ ಡಬಲ್ ಇಂಜಿನ್ ಕಾರ್ಯ ನಿರ್ವಹಿಸುತ್ತಿರುವುದರಿಂದ
ಯಾವ ಇಂಜಿನ್ ಕಡೆ ಮುಖಮಾಡಿ ನಿಂತರೆ ಎಲ್ಲಿಗೆ ಹೋಗಿ ತಲುಪಲಿದೆಯೋ ಎಂಬ ಗೊಂದಲದಲ್ಲಿಯೇ ಕೋಣಂದೂರು
ಬ್ಲಾಕ್ ಸಂಘಟನೆಯ ಉಸಾಬರಿಗೇ ಹೋಗಿಲ್ಲ ಎನ್ನುತ್ತಾರೆ ಇಲ್ಲಿಯ ಮೂಲ ಕಾಂಗ್ರೆಸ್ಸಿಗರು.
ಈ ಹಿನ್ನಲೆಯಲ್ಲಿ
ಎರಡೂ ಬ್ಲಾಕ್‌ನ ಆಕಾಂಕ್ಷಿಗಳು ಚುರುಕಾಗುತ್ತಿರುವ ಸುದ್ದಿ ಬರತೊಡಗಿದೆ.ತೀರ್ಥಹಳ್ಳಿ ಬ್ಲಾಕ್‌ಗೆ
ನಾಬಳ ಶಚೀಂದ್ರ ಹೆಗ್ಡೆ, ಬಿ.ಆರ್.ರಾಘವೇಂದ್ರ ಶೆಟ್ಟಿ, ಅಮ್ರಪಾಲಿ ಸುರೇಶ್, ಕಟ್ಟೇಹಕ್ಕಲು ಕಿರಣ್,
ಬಾಳೇಹಳ್ಳಿ ಪ್ರಭಾಕರ್ ಹೆಸರು ಸದ್ಯ ಬಿರುಸಾಗಿ ಒಡಾಡುತ್ತಿದೆ. ರಾಘವೇಂದ್ರ ಶೆಟ್ಟಿ ಕಳೆದೆರಡು ವರ್ಷಗಳಿಂದ
ಸತತ ಪ್ರಯತ್ನದಲ್ಲಿದ್ದಾರೆ. ಉತ್ತಮ ಚರ್ಚಾಪಟು ಮತ್ತು ತಾಲ್ಲೂಕು ಕಾಂಗ್ರೆಸ್ ಮಟ್ಟಿಗೆ ಟ್ರಬಲ್
ಶೂಟರ್ ಎನಿಸಿಕೊಂಡಿರುವ ಇವರಿಗೆ ಸಮುದಾಯದ ವಿಚಾರ ಬಂದಾಗ ಹಿನ್ನಡೆಯಾಗಬಹುದು ಎನ್ನುವುದನ್ನು ಬಿಟ್ಟರೆ
ಸಂಘಟನೆ ಹಾಗೂ ಪಕ್ಷದ ವಿಚಾರಗಳನ್ನು ಏರುದನಿಯಲ್ಲಿ ಸಮರ್ಥವಾಗಿ ಬಿಂಬಿಸುವ ಶಕ್ತಿ ಇದೆ. ಜೊತೆಗೆ ಕಿಮ್ಮನೆ
ಹಾಗೂ ಆರ್.ಎಂ.ಎಂ. ಎರಡೂ ಬಣದಲ್ಲಿ ಹೊಂದಾಣಿಕೆ ಇದೆ. ಶಚೀಂದ್ರ ಹೆಗ್ಡೆ ಈಗಾಗಲೇ ತಾಲ್ಲೂಕು ಗ್ಯಾರಂಟಿ
ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿದ್ದು ಪ್ರಭಾವಿ ಹಿನ್ನಲೆ ಮತ್ತು ಕಳಂಕರಹಿತ ಬಯೋಡೆಟಾಕ್ಕಾಗಿ
ಮತ್ತು ಇವರು ಕೂಡ ಎರಡೂ ಬಣದಲ್ಲಿ ಸಲ್ಲಬಲ್ಲವರು ಎಂಬ ಕಾರಣಕ್ಕಾಗಿ ಹೆಸರು ಚಾಲ್ತಿಯಲ್ಲಿದೆ.
ಅಮ್ರಪಾಲಿ ಸುರೇಶ್
ಲಾಗಾಯ್ತಿನಿಂದಲೂ ಕಟ್ಟಾ ಕಿಮ್ಮನೆ ಬೆಂಬಲಿಗರು. ಹಲವು ಬಾರಿ ಕಾಂಗ್ರೆಸ್ ಬಿಕ್ಕಟ್ಟುಗಳ ಸಮಯದಲ್ಲಿ
ಇತರರು ಕಿಮ್ಮನೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳಲು ಹಿಂಜರಿದಾಗ ಮುಲಾಜಿಲ್ಲದೆ ಪತ್ರಿಕಾ ಹೇಳಿಕೆಗಳ
ಮೂಲಕ ಸಮರ್ಥಿಸಿಕೊಂಡ ಕಾರಣ, ನಿರ್ಭಯವಾಗಿ ಬಿಜೆಪಿ ವಿರುದ್ಧ ನಿಲ್ಲಬಲ್ಲ ಛಾತಿ ಮತ್ತು ಅವರದೇ ಆದ
ಬೆಂಬಲಿಗ ಪಡೆಯನ್ನು ಹೊಂದಿರುವ ಕಾರಣಕ್ಕಾಗಿ ಹೆಸರು ಚರ್ಚೆಯಲ್ಲಿದೆ. ಕಟ್ಟೇಹಕ್ಕಲು ಕಿರಣ್ ಕೂಡ
ದೊಡ್ಡ ದನಿಯಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವ ಮತ್ತು ಆಕರ್ಷಕವಾಗಿ ಪಕ್ಷದ ಕಾರ್ಯಕ್ರಮಗಳನ್ನು
ಪ್ರಚಾರ ಮಾಡುವ ಸಾಮರ್ಥ್ಯ ಇರುವ ಕಾರಣಕ್ಕಾಗಿ ಚರ್ಚೆಯಲ್ಲಿದ್ದಾರೆ. ಬಾಳೇಹಳ್ಳಿ ಪ್ರಭಾಕರ್ ಒಕ್ಕಲಿಗರ
ಸಂಘದ ಅಧ್ಯಕ್ಷ, ಕೃಷಿಕ ಸಮಾಜದ ಅಧ್ಯಕ್ಷ, ನಿರಂತರವಾಗಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ
ಮತ್ತು ಕೆಲವು ದಶಕಗಳಿಂದ ಕಿಮ್ಮನೆ ರತ್ನಾಕರ್ ಅವರ ನಿಷ್ಠಾವಂತ ಹಿಂಬಾಲಕರಾಗಿರುವ ಕಾರಣ ಚರ್ಚೆಯಲ್ಲಿದ್ದಾರೆ.
ಕೋಣಂದೂರು ಬ್ಲಾಕ್‌ಗೆ
ಕಿಮ್ಮನೆ ರತ್ನಾಕರ್ ಅವರ ಪರಮಾಪ್ತ ವಾಸುಕಿ ಕುಕ್ಕೆ ಮತ್ತು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರನಾಗಿದ್ದ
ಆದರ್ಶ ಹುಂಚದಕಟ್ಟೆಯನ್ನು ಪ್ರತಿಷ್ಠಾಪಿಸುವ ಮೂಲಕ ಯುವಕರನ್ನು ಆಕರ್ಷಿಸುವ ಪ್ರಯತ್ನಕ್ಕೇನಾದರು ಪಕ್ಷ
ಕೈಹಾಕಿದ್ದಲ್ಲಿ ಈಗ ಅಲ್ಲಿ ಅಧ್ಯಕ್ಷರಾಗಿರುವ ಮುಡುಬ ರಾಘವೇಂದ್ರ ತೀರ್ಥಹಳ್ಳಿ ಬ್ಲಾಕ್ ಅಧ್ಯಕ್ಷರಾಗಿ
ಶಿಫ್ಟ್ ಆಗುವ ಸಾಧ್ಯತೆಗಳಿವೆ.
ಬಹಳ ಮುಖ್ಯವಾಗಿ
ಬೂತ್ ಮಟ್ಟದಲ್ಲಿ ಕಳೆದ 10 ವರ್ಷಗಳಿಂದ ಬಹುತೇಕ ಕಾಂಗ್ರೆಸ್ ಸಂಘಟನೆ ನಿಷ್ಕ್ರಿಯವಾಗಿದೆ. ಬಹುತೇಕ
ಎರಡು ಮತ್ತು ಮೂರನೇ ಸಾಲಿನ ನಾಯಕರುಗಳು ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ ಗೌಡರ ಹೆಸರನ್ನು ಉಪಯೋಗಿಸಿ
ಸ್ವಹಿತ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆಯೇ ಹೊರತು ಕಾಂಗ್ರೆಸ್ ಸರ್ಕಾರ ನೀಡಿರುವ ಭರಪೂರ
ಗ್ಯಾರಂಟಿ ಯೋಜನೆಗಳ ಕುರಿತು ಕನಿಷ್ಟ ಮಟ್ಟದ ಜಾಗೃತಿಯನ್ನೂ ಮೂಡಿಸಲು ಯಾವುದೇ ರೀತಿಯಲ್ಲಿ ಪ್ರಯತ್ನ
ಪಡುತ್ತಿಲ್ಲ. ಇದಕ್ಕೆ ವಿರುದ್ಧವಾಗಿ ಬಿಜೆಪಿ ತನ್ನ ಬೂತ್ ಮಟ್ಟದ ಕಾರ್ಯಕರ್ತರುಗಳ ಮೂಲಕವೇ ಈಗಾಗಲೇ
ಮುಂದಿನ ಚುನಾವಣೆಗೂ ಕೂಡ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದು ಕೇಂದ್ರ ಸರ್ಕಾರದ
ಆಡಳಿತಾತ್ಮಕ ವೈಫಲ್ಯಗಳು ಮತ್ತು ಮುಖ್ಯವಾಗಿ ಇಂಧನ ಬೆಲೆ ಏರಿಕೆಯಂತಹ ವಿಚಾರಗಳನ್ನು ಕೂಡ ಕಾಂಗ್ರೆಸ್
ವಿರುದ್ಧವೇ ತಿರುಗಿಸುವಲ್ಲಿ ಯಶಸ್ವಿಯಾಗುತ್ತಿದೆ. ಹಾಗಾಗಿ ತಳಮಟ್ಟದಿಂದಲೇ ಕಾಂಗ್ರೆಸ್ ಸಂಘಟನೆ
ಸುಧಾರಿಸಬೇಕು. ಅದಕ್ಕಾಗಿ ಹೊಸಬರಿಗೆ ಅವಕಾಶ ಅನಿವಾರ್ಯ ಎಂಬ ಕೂಗು ಕಾಂಗ್ರೆಸ್ ಪಕ್ಷದಿಂದಲೇ ಕೇಳಿ
ಬರತೊಡಗಿದೆ.
