ಆರಗದ ಅಂಗಳಕ್ಕೆ ದಾಳಿ ಇಟ್ಟ ತಹಶೀಲ್ದಾರ್‌ ರಂಜಿತ್‌

ಅಗ್ರಹಾರ ಹೋಬಳಿಯ ಅಕ್ರಮ ಮರಳು ಕ್ವಾರಿಗಳ ಮೇಲೆ ದಿಟ್ಟ ದಾಳಿ
150ಕ್ಕೂ ಟನ್‌ಗೂ ಹೆಚ್ಚು ಅಕ್ರಮ ಮರಳು ವಶಕ್ಕೆ

ಅಕ್ರಮ ಮರಳು ವಹಿವಾಟು ತೀರ್ಥಹಳ್ಳಿಯಲ್ಲಿ ಭರ್ಜರಿ ಸದ್ದು ಹಾಗೂ ಸುದ್ದಿ ಮಾಡತೊಡಗಿದೆ. ಕಳೆದ ವಾರವಷ್ಟೇ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಮುಂಡೊಳ್ಳಿ, ದಬ್ಬಣಗದ್ದೆ ಮರಳು ಕ್ವಾರಿಗಳ ಮೇಲೆ ದಾಳಿ ಮಾಡಿದ ರಭಸ ಹೇಗಿತ್ತು ಎಂದರೆ ಸ್ವತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೈಸೂರು ವಿಭಾಗದ ಆಯುಕ್ತೆ ಲಕ್ಷ್ಮಮ್ಮ ಬೆಚ್ಚಿ ಬಿದ್ದು ಸೀದ ಮುಂಡೊಳ್ಳಿ ಕ್ವಾರಿಗೆ ಬಂದು ಬಿದಿರು ಹಿಂಡಿಲಿನ ಕೆಳಗೆ ಕುಳಿತು ಮದ್ಯಾಹ್ನದ ಬಿರು ಬಿಸಿಲಿನಲ್ಲಿ ಆರಗ ಜ್ಞಾನೇಂದ್ರರು ವಾಚಮಗೋಚರವಾಗಿ ನಿಂದಿಸಿದ್ದನ್ನು ಅತ್ಯಂತ ವಿನಯದಿಂದ ಸ್ವೀಕರಿಸಿ ಹೆಚ್ಚಿನ ಯಾವ ಕ್ರಮವನ್ನು ಕೈಗೊಳ್ಳದೆ ಬೀಸುವ ದೊಣ್ಣೆ ತಪ್ಪಿದರೆ ಸಾಕು ಎಂಬಂತೆ ಕಾಲ್ಕಿತ್ತಿದ್ದರು.

ಅಲ್ಲೂ ಕೂಡ ಆರಗ ಜ್ಞಾನೇಂದ್ರ ತಹಶೀಲ್ದಾರ್‌ಗೆ 1 ಲಕ್ಷ, ಉಪ ವಿಭಾಗಾಧಿಕಾರಿಗೆ 1 ವರೆ ಲಕ್ಷ, ಮಾಳೂರು ಪೊಲೀಸ್‌ ಠಾಣೆಗೆ 6 ಲಕ್ಷ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗೆ 7 ಲಕ್ಷ ಸೇರಿದಂತೆ ವಿವಿಧ ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ವರ್ಗಕ್ಕೆ ಅವರವರ ಯೋಗ್ಯತೆಗೆ ತಕ್ಕ ಹಾಗೆ ಮಾಮೂಲಿ ಹಣ ಹೋಗುತ್ತಿದೆ ಎಂದು ರಾಜಾರೋಷವಾಗಿ ಆರೋಪ ಮಾಡಿದ್ದರು.

ಅದಕ್ಕೆ ಯಾರು ಉತ್ತರ ನೀಡಿದರೋ ಬಿಟ್ಟರೋ ತಾಲ್ಲೂಕು ದಂಡಾಧಿಕಾರಿ ಮತ್ತು ತಹಶೀಲ್ದಾರ್‌ ಆಗಿರುವ ರಂಜಿತ್‌ ಮಾತ್ರ ಮರುದಿನದಿಂದಲೇ ತೀವ್ರ ಕಾರ್ಯಚರಣೆಗೆ ಇಳಿದಿದ್ದು ಆರಗ ಜ್ಞಾನೇಂದ್ರರ ಮನೆ ಇರುವ ಅಗ್ರಹಾರ ಹೋಬಳಿ ಮತ್ತು ಕಾಂಗ್ರೆಸ್ಸಿಗರು ತಿಂಗಳಿಗೆ ನಾಲ್ಕು ಬಾರಿಯಾದರು ನೆನಪು ಮಾಡಿಕೊಳ್ಳುವ ಬಿಂತ್ಲಾ ಸುತ್ತಮುತ್ತಲಿನ ಪ್ರದೇಶದಲ್ಲಿ. ಅಂದ ಹಾಗೆ ಆರಗದ ಗೋಪಿನಾಥ ಹಳ್ಳದಲ್ಲಿ ಭರ್ಜರಿಯಾಗಿ ಮರಳು ದಂಧೆ ನಡೆಯುತ್ತಿರುವುದು ಇಂದು ನಿನ್ನೆಯದಲ್ಲ. ತೀರ್ಥಹಳ್ಳಿ ತಾಲ್ಲೂಕಿನ ಯಾವ ಕ್ವಾರೆಗಳಲ್ಲಿ ಅಕ್ರಮ ಮರಳು ಸಾಗಾಟ ಆಗುತ್ತದೋ ಅಷ್ಟೇ ನಿರಾಯಾಸವಾಗಿ ತೊಂದರೆ ರಹಿತವಾಗಿ ಗೋಪಿನಾಥ ಹಳ್ಳದಿಂದಲೂ ಲೋಕಲ್‌ ಇಂದ ಹಿಡಿದು ಶಿವಮೊಗ್ಗದ ವರೆಗೂ ಮರಳು ಸಾಗಾಟ ಆಗುತ್ತಿತ್ತು. ಆದರೆ ಈ ಕುರಿತು ಆರಗರು ಪ್ರಸ್ತಾಪ ಮಾಡಿದ್ದು ಕಡಿಮೆ.

ಈಗ ತಹಶೀಲ್ದಾರ್‌ ರಂಜಿತ್‌ ಅದೇ ಪ್ರದೇಶಗಳಲ್ಲಿ ದಿಟ್ಟತನದಿಂದ ಮರಳುಗಳ್ಳತನದ ಮೇಲೆ ದಾಳಿ ಮಾಡತೊಡಗಿದ್ದು ಹಲವು ಪ್ರಶ್ನೆಗಳನ್ನು ಮೂಡಿಸುತ್ತಿರುವ ಜೊತೆಗೆ ಆರಗ ಜ್ಞಾನೇಂದ್ರ ಮತ್ತು ಅಧಿಕಾರಿಗಳ ಜಟಾಪಟಿಯ ನಡುವೆ ಹಳ್ಳಿಗಾಡಿನಲ್ಲಿ ಗೂಡ್ಸ್‌ ಆಟೋ, ಪಿಕಪ್‌ ಮುಂತಾದ ವಾಹನದಲ್ಲಿ ತುರ್ತಾಗಿ ಕಟ್ಟಡ ಕೆಲಸಕ್ಕೆ ಪೂರೈಕೆಯಾಗುತ್ತಿದ್ದ ಮರಳು ಸಾಗಾಣೆ ಈಗ ನಿಲ್ಲುವ ಹಂತಕ್ಕೆ ಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post