ಒಂದೇ ವೇದಿಕೆಯಲ್ಲಿ
ಪಂಚ ಪೀಠಾಧೀಶರು
ಇತಿಹಾಸ ನಿರ್ಮಿಸಿದ
ಕೋಣಂದೂರು ಪ್ರಕಾಶ್ ಕುಟುಂಬ
ಅಡಿಕೆ ವರ್ತಕ ಕೋಣಂದೂರು
ಪ್ರಕಾಶ್ ಮತ್ತು ಸಹೋದರರು ಇತ್ತೀಚಿಗೆ ಅಗಲಿದ ತಮ್ಮ ತಾಯಿ ಕೆ.ಟಿ.ಪಾರ್ವತಮ್ಮ ನವರ ಶಿವಗಣರಾಧನೆ ಪ್ರಯುಕ್ತದ ಕಾರ್ಯಕ್ರಮ
ಕೇವಲ ಕುಟುಂಬದ ಕಾರ್ಯಕ್ರಮವಾಗಿ ಉಳಿಯದೆ ಪಂಚ ಪೀಠಾಧೀಶರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಆಶೀರ್ವಚನ
ನೀಡಿದ ಕಾರಣ ಪಾಲ್ಗೊಂಡ ಸಭಿಕರಿಗೆ ಮರೆಯಲಾಗದ ಅನುಭವ ನೀಡಿತು.
ವಿವಿಧ ಪೀಠಗಳ ಸ್ವಾಮೀಜಿಗಳು ಒಂದೇ ಕಡೆ ಸೇರುವುದು ಅಪರೂಪದ ವಿಚಾರ ಅಲ್ಲದೆ ಭಕ್ತರಿಗೆ ಹಾಗೆ ಅವರ ಇಷ್ಟದ ಹಾಗೂ ಸೇವೆ ಸಲ್ಲಿಸುವ ಸ್ವಾಮೀಜಿಗಳನ್ನು ಹತ್ತಿರದಿಂದ ನೋಡುವ ಅವಕಾಶಗಳು ಸಹ ವಿರಳವೇ. ಅಂತಹ ಅವಕಾಶ ಈ ಕಾರ್ಯಕ್ರಮದ ಮೂಲಕ ಭಕ್ತರಿಗೆ ದೊರೆಯಿತು.
ಕಡುಕಷ್ಟದಿಂದ ಜೀವನದಲ್ಲಿ
ಮೇಲೆ ಬಂದಿರುವ ಪ್ರಕಾಶ್ ಮತ್ತು ಸಹೋದರರು ಎಲ್ಲ ಏಳಿಗೆಗೆ ಗುರುಗಳ ಆಶೀರ್ವಾದ ಮತ್ತು ದೈವಬಲ ಕಾರಣ
ಎಂದು ನಂಬಿದ್ದಾರೆ. ಜೊತೆಗೆ ಅವರ ತಾಯಿ ಪಾರ್ವತಮ್ಮ ಕಡು ಕಷ್ಟದಲ್ಲಿ ಹೇಳಿಕೊಟ್ಟ ಜೀವನ ಪಾಠ ಹಾಗೂ
ಮೌಲ್ಯಗಳನ್ನೂ ಸಹ ಮರೆತಿಲ್ಲ. ಈ ಎಲ್ಲ ಅಂಶಗಳು ಕಾರ್ಯಕ್ರಮದಲ್ಲಿ ಪದೇ ಪದೇ ಎಲ್ಲರ ಭಾಷಣದ ಮೂಲಕ ನೆನಪಾಗಿ ಮೂಡಿ ಬಂದವು.
ಮಾತನಾಡಿದ ಎಲ್ಲ
ಪೀಠಾಧೀಶರು ಪ್ರಕಾಶ್ ಕುಟುಂಬದ ಕೌಟುಂಬಿಕ ಮೌಲ್ಯ ಮತ್ತು ಪಾರ್ವತಮ್ಮನವರ ಸಹನೆ ಮತ್ತು ಸರಳತೆಯನ್ನು
ಶ್ಲಾಘಿಸಿದರು.
ಉಜ್ಜಯಿನಿ ಶ್ರೀ
ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ತಂದೆ ತಾಯಿ ಭೂಮಿಯ ಮೇಲಿರುವ
ನಿಜವಾದ ದೇವರು. ನೂರಾರು ಪೂಜೆ, ಪುನಸ್ಕಾರಗಳಿಗಿಂತ ಹೆತ್ತವರ ಸೇವೆ ಅತ್ಯಂತ ಶ್ರೇಷ್ಠ ಸೇವೆಯಾಗುತ್ತದೆ.
ಅವಿಭಕ್ತ ಕುಟುಂಬ ಬೆಳೆದರೆ ಸಂಸ್ಕೃತಿ ಉಳಿಯುತ್ತದೆ ಎಂದು ಅಭಿಪ್ರಾಯಿಸಿದರು. ಕೌಟುಂಬಿಕ ನೆಮ್ಮದಿಗಾಗಿ
ಎಲ್ಲರು ಒಟ್ಟಾಗಿ ಬದುಕಬೇಕು. ಕೂಡಿ ಇರಬೇಕು, ಕೂಡಿ ಉಣಬೇಕು ಆಗ ಆನಂದವನ್ನು ಹಂಚಬಹುದು ಎಂದು ಹೇಳಿದರು.
ವೃದ್ದಾಪ್ಯದಲ್ಲಿ
ಜೋಪಾನವಾಗಿ ಕಾಪಾಡದ ಮಕ್ಕಳಿಂದ ಹೆತ್ತವರಿಗೆ ಯಾವ ಭಾಗ್ಯವೂ ಸಿಗುವುದಿಲ್ಲ. ಕೋಟ್ಯಾಂತರ ರೂಪಾಯಿ ಸಂಪಾದಿಸಿ
ಮೆರೆಯುವವರ ತಂದೆ ತಾಯಂದಿರು ವೃದ್ದಾಶ್ರಮ ಸೇರುತ್ತಿದ್ದಾರೆ. ಉತ್ತಮ ಸಂಸ್ಕಾರಗಳನ್ನು ಕಲಿಸುವ ಜೊತೆಗೆ
ವೃದ್ಧಾಶ್ರಮ ಸಂಖ್ಯೆ ಕಡಿಮೆ ಮಾಡುವ ಜವಾಬ್ದಾರಿಯನ್ನು ಎಲ್ಲಾ ಮಕ್ಕಳು ನಿಭಾಯಿಸಬೇಕು ಎಂದರು.
ಶ್ರೀಶೈಲ ಜಗದ್ಗುರು
ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಉನ್ನತ ವ್ಯಾಸಂಗ ಮಾಡುವುದರಿಂದ
ಸಂಸ್ಕಾರ ಬೆಳೆಯುವುದಿಲ್ಲ. ಒಳ್ಳೆಯ ಸಂಸ್ಕಾರಗಳನ್ನು ಕಲಿತು ಭಕ್ತಿಯಿಂದ ಅದನ್ನು ಗೌರವಿಸುವವರು ಯಾರಿಗೂ
ನಮಸ್ಕರಿಸುವ ಪ್ರಸಂಗ ಎದುರಾಗುವುದಿಲ್ಲ. ಉತ್ಕೃಷ್ಟವಾದ ಸಂತೋಷದಿಂದ ಕೂಡಿದ ಗೃಹಸ್ಥಾಶ್ರಮ ನಿರ್ವಹಿಸಲು
ಉತ್ತಮ ಆದರ್ಶಗಳು ಬೇಕು ಎಂದು ಹೇಳಿದರು.
ಬಾಳೇಹೊನ್ನೂರು ಜಗದ್ಗುರು
ಪ್ರಸನ್ನ ರೇಣುಕ ಡಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಬದುಕಿರುವಷ್ಟು
ದಿನ ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಮನುಷ್ಯ ತಾನು ಬೆಳೆದುಬಂದ ಆದರ್ಶದ ಹಿನ್ನಲೆಯನ್ನು ಎಂದಿಗೂ
ಮರೆಯಬಾರದು. ಸಾಮರಸ್ಯ, ಸೌಹಾರ್ದತೆಯಿಂದ ಸಮಾಜದಲ್ಲಿ ಕೂಡಿ ಬಾಳಬೇಕು ಎಂದು ಹೇಳಿದರು.
ಕಾಶಿ ಜಗದ್ಗುರು
ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ
ಭಗವತ್ಪಾದರು, ಗೌರಿಗದ್ದೆ ಅವಧೂತ ವಿನಯ್ ಗುರೂಜಿ, ಕವಲೇದುರ್ಗಾ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ,
ಮಳಲಿಮಠ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಎಂಎಡಿಬಿ ಅಧ್ಯಕ್ಷ
ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ವೀರಶೈವ-ಲಿಂಗಾಯತ
ಸೇವಾ ಸಮಾಜದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಇದ್ದರು.
ಸಭೆಯಲ್ಲಿ ಲಿಂಗೈಕ್ಯ
ಪಾರ್ವತಮ್ಮ ಅವರ ಸಂಸ್ಮರಣ ಗ್ರಂಥ ಧರ್ಮ ಧುರಂದೆರೆ ಪುಸ್ತಕ ಬಿಡುಗಡೆಗೊಂಡಿತು. ಸರ್ವರನ್ನು ಕೆ.ಆರ್. ಪ್ರಕಾಶ್, ಕೆ.ಆರ್. ಪ್ರಸಾದ್, ಕೆ.ಆರ್. ಪ್ರಸನ್ನ, ಕೆ.ಆರ್. ಪ್ರಶಾಂತ್ ಸಹೋದರರು ಹಾಗೂ ಕುಟುಂಬದವರು ಸ್ವಾಗತಿಸಿದರು.

