ಹೊದಲ ಅರಳಾಪುರ ವ್ಯಕ್ತಿಯ ಅಪಹರಣದ ಗುಟ್ಟೇನು ?

48 ಎಕರೆ ಜಾಗದ ಮೇಲೆ ಕಣ್ಣು, ಖಾತೆದಾರನ ಕಿಡ್ನಾಪ್, ಭದ್ರಾವತಿಯಲ್ಲಿ‌ ಬಲವಂತವಾಗಿ ರಿಜಿಸ್ಟ್ರೇಷನ್ ?
ಅತೀ ಪ್ರತಿಷ್ಟಿತ ತಂಡದಿಂದ ಸೀನಿಮಿಯ ರೀತಿ ಕಾರ್ಯಾಚರಣೆ ....??
ಅತೀ ಪ್ರತಿಷ್ಟಿತರ ತಂಡವೊಂದು ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿ ಎರಡು ತಿಂಗಳು ಕಾಲ ಕೂಡಿ ಹಾಕಿ ಜೀವ ಬೆದರಿಕೆ ಒಡ್ಡಿ ಆತನ ಅಂದಾಜು 48 ಎಕರೆ ಜಾಗವನ್ನು ಬಲವಂತದಿಂದ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎನ್ನುವ ಬೆಚ್ಚಿ ಬೀಳಿಸುವ ಸುದ್ದಿ ಕೇಳಿ ಬಂದಿದೆ.
ಹೊದಲ ಅರಳಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಗುಡ್ಡೆ ಗ್ರಾಮದಲ್ಲಿ ವ್ಯಕ್ತಿಯೋರ್ವ ತನ್ನ ಕುಟುಂಬದ 45 ಎಕರೆ ಜಾಗವನ್ನು ಹೊಂದಿದ್ದು ಆತ ಕೆಲವರಿಗೆ ಒಂದಿಷ್ಟು ಬಾಕಿ ಹಣ ಕೊಡುವುದು ಇತ್ತು. ಹಣ ನೀಡಿದವರು ಆತನಿಂದ ವಸೂಲಿ ಮಾಡಲು ಕಷ್ಟ ಎನಿಸಿದಾಗ ತಮ್ಮ ಬಾಕಿ ವಸೂಲಿ ಹೇಗೆ ಎನ್ನುವ ದಾರಿ ಹುಡುಕಿದಾಗ ಆ ವ್ಯಕ್ತಿ 48 ಎಕರೆ ಜಾಗದ ವಾರಸುದಾರ ಎನ್ನುವುದು ಗೊತ್ತಾಗಿದೆ. ಅದನ್ನೇ ಯಾರಿಗಾದರೂ ಮಾರಿ ಹಣ ಬಾಕಿ ತೀರಿಸು ಎನ್ನುವ ಪ್ರಸ್ತಾಪ ಆ ವ್ಯಕ್ತಿ ಒಪ್ಪಲಿಲ್ಲ. ಅದಕ್ಕೆ ಕಾರಣ ಆ ಜಮೀನಿನ ಪಕ್ಕದಲ್ಲಿಯೇ ತೀರ್ಥಹಳ್ಳಿಯಲ್ಲಿಯೇ ಬೃಹತ್ ಎನ್ನಬಹುದಾದ ಲೇಔಟ್ ನಿರ್ಮಾಣ ಆಗುತ್ತಿದ್ದು ತನ್ನ ಜಾಗ ಎಂದಿದ್ದರೂ ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನುವುದು ಅರಿತಿದ್ದ ಜಾಗದ ವಾರಸುದಾರ ಒಪ್ಪದೇ ತಿರುಗಿ ಬೀಳಲು ನೋಡಿದ್ದಾನೆ.
ಅಲ್ಲಿಂದ ಮುಂದೆ ಹಣ ನೀಡಿದವರು ಪ್ರಕರಣವನ್ನು ಪ್ರಭಾವಿಗಳ ಬಳಿ ತೆಗೆದುಕೊಂಡು ಹೋಗಿದ್ದಾರೆ.
ಪ್ರತಿಷ್ಟಿತ ಹುದ್ದೆ ಮತ್ತು ಗೌರವದ ಸ್ಥಾನ ಹೊಂದಿರುವ ಆ ಪ್ರಭಾವಿಗಳು ಮೊದಲು ನಯವಾಗಿ ಜಾಗ ಬರೆದು ಕೊಡಲು ಒತ್ತಾಯಿಸಿದ್ದಾರೆ. ಆತ ಕೊಡಲು ನಿರಾಕರಿಸಿದಾಗ ಅಪಹರಣ ಮಾಡಿ ಅಂತಿಮವಾಗಿ ಜೀವ ಬೆದರಿಕೆ ಒಡ್ಡಿ ಜಾಗ ಅವರ ಹೊರತು ಮತ್ಯಾರಿಗೂ ಮಾರಲು ಆಗದು ಎನ್ನುವಂತೆ ಬರೆಸಿ ಕೊಳ್ಳಲು ಯಶಸ್ವಿಯಾಗಿ ಅದರ ರಿಜಿಸ್ಟರ್ ಕಾರ್ಯಕ್ರಮ ಭದ್ರಾವತಿಯಲ್ಲಿ ಮಾಡಿ ಮುಗಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಷ್ಟೆಲ್ಲಾ ಆದರೂ ಘಟನೆ ಈಗಿನ್ನೂ ಪಿಸುಮಾತುಗಳ ಮಟ್ಟದಲ್ಲಿ ಉಳಿದಿದ್ದು ಮುಂದೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post