ಕಾರ್ಯಕತರು ಪಾಂಪ್ಲೆಟ್ ಹಿಡಿಯಲು ಮಾತ್ರ ಸೀಮಿತರೇ
ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳದೇ ರಾಜಕೀಯವಾಗುತ್ತಿದೆ - ಅಶ್ವಲ್ ಗೌಡ
ಕರ್ನಾಟಕದಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳಿಯ ಸಂಸ್ಥೆ ಚುನಾವಣೆ ನಡೆಸದೆ ಇರುವುದು ಸ್ಪಷ್ಟವಾಗಿ ಜನವಿರೋಧಿ ನಡೆಯಾಗಿದೆ. ಅಧಿಕಾರ ವಿಕೇಂದ್ರಿಕರಣದ ಮಹತ್ವದ ಕೊಂಡಿಗಳಗಿರುವ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ಜನತೆ ನೇರವಾಗಿ ಜನಪ್ರತಿನಿಧಿಗಳ ಜೊತೆಗೆ ಸಂಪರ್ಕ ಹೊಂದಲು ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಅಧಿಕಾರ ಯುತವಾಗಿ ಹೇಳಿಕೊಳ್ಳಲು ಸಾಧ್ಯ ಎಂದು ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ ಸಾಲೂರು ಬೇಸರಿಸಿದ್ದಾರೆ.
ಐದಾರು ವರ್ಷಗಳಿಂದ ಚುನಾವಣೆ ನಡೆಯದಿರುವುದು ಎಲ್ಲಾ ಪಕ್ಷಗಳ ಉದ್ದೇಶ ಪೂರ್ವಕ ನಿರ್ಲಕ್ಷ ಅನಿಸಿಸುತ್ತಿದೆ.
ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷಗಳಲ್ಲಿ ಕರಪತ್ರ, ಪಾಂಪ್ಲೆಟ್ ಹಿಡಿಯಲು ಕೂಡ ಕಾರ್ಯಕರ್ತರು ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಲಿದೆ. ಈಗಾಗಲೆ ಹಲವು ವರ್ಷಗಳಿಂದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಗಳು ನಡೆದಿಲ್ಲಾ. ಈಗ ಗ್ರಾಮ ಪಂಚಾಯತ್ ಚುನಾವಣೆ ಕೂಡಾ ಮುಂದಕ್ಕೆ ಹೋದಂತೆ ಕಾಣುತ್ತಿದೆ.
ಹೀಗೆ ಆದರೆ ಎರಡು ಹಾಗೂ ಮೂರನೇ ಸಾಲಿನ ನಾಯಕತ್ವ ಬೆಳೆಯದೆ ಸ್ಥಳೀಯ ನಾಯಕತ್ವ ಸಿಗದೆ ಯುವಕರು ರಾಜಕೀಯದಿಂದ ವಿಮುಖರಾಗಲಿದ್ದಾರೆ. ಶಾಸಕರುಗಳು ತಮ್ಮ ಅಧಿಕಾರವನ್ನು ಕಾಯ್ದುಕೊಳ್ಳಲು ಹಾಗೂ ತಮ್ಮ ಕುಟುಂಬ ರಾಜಕಾರಣವನ್ನು ಮುಂದುವರೆಸಲು ಹೀಗೆ ಮಾಡುತ್ತಿದ್ದಾರೆಯೆ ಎನ್ನುವ ಅನುಮಾನ ಸರ್ವ ಪಕ್ಷದ ಕಾರ್ಯಕರ್ತರಿಗೂ ಬರತೊಡಗಿದೆ.
ಕರ್ನಾಟಕದ ಬಹುಪಾಲು ಶೇಕಡಾ 90 ರಷ್ಟು ಶಾಸಕರ ಮಕ್ಕಳು, ಮೊಮ್ಮಕ್ಕಳು ವಯಸ್ಸಿನಲ್ಲಿ ಎಳೆಯರಾದರು ಪ್ರತಿ ಕ್ಷೇತ್ರದಲ್ಲೂ ದೊಡ್ಡ ವಾಹನ ಹಣಬಲದೊಂದಿಗೆ ಪಕ್ಷ, ಕ್ಷೇತ್ರದ ನೇತೃತ್ವ ಪಡೆದು ಮುಂದಿನ ಶಾಸಕರಾಗಲು, ಸಂಸದರಾಗಲು ನಾಯಕತ್ವಕ್ಕೆ ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದ್ದಾರೆ. ಅಪಾರವಾದ ಹೇರಳ ಹಣವನ್ನು ತಮ್ಮ ಒಡಲಲ್ಲಿಟ್ಟುಕೊಂಡಿರುವ ರಾಜಕೀಯದ ದೊಡ್ಡ ನಾಯಕರಿಗೆ ಕಾರ್ಯಕರ್ತರ ನಾಯಕತ್ವ ಹಿಂದೆ ತಳ್ಳುವುದು ಕೂಡಾ ಸುಲಭವಾಗುತ್ತಿದೆ.
ಈಗ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯದೆ ಹೋದರೆ ಯಾವ ಪುರುಷಾರ್ಥಕ್ಕೆ ರಾಜಕೀಯದಲ್ಲಿ ಯುವಕರು ಬರಬೇಕು, ಇರಬೇಕು ಎನ್ನುವುದು ಯೋಚಿಸಬೇಕಾದ ವಿಷಯ. ಪಾಂಪ್ಲೆಟ್ ಹಿಡಿದು ಪ್ರತಿ ಮನೆಗೆ ಸುತ್ತುವ ಕಾರ್ಯಕರ್ತರು ಅಷ್ಟಕ್ಕೆ ಸೀಮಿಗೊಳ್ಳಬೇಕು, ಮತ್ತೇನು ಕೇಳಬಾರದು ಎನ್ನುವಂತೆ ಎಲ್ಲಾ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವಕ್ಕೆ, ಸಂವಿಧಾನದ ಆಶಯಗಳಿಗೆ ಮಾರಕವೇ ಸರಿ ಎಂದು ಅಶ್ವಲ್ ಗೌಡ ದೂರಿದ್ದಾರೆ.