ಸಂದೇಶ ಜವಳಿ ಅಬ್ಬರ ರತ್ನಾಕರ್ ಶೆಟ್ಟಿ ತತ್ತರ...
ಸಮರ್ಥನೆ ಮಾಡಲಾಗದೆ ಕೈ ಚೆಲ್ಲಿದ ರಾಘವೇಂದ್ರ ಶೆಟ್ಟಿ...
ಜವಳಿ - ಗಣಪತಿ ಜುಗಲ್ ಬಂದಿಗೆ ಮುಖ್ಯಾಧಿಕಾರಿ ನಿರುತ್ತರ...
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ಮಂಗಳವಾರ ಬಿ.ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ 34 ಕೋಟಿ ವೆಚ್ಚದ ಬಜೆಟ್ ಮಂಡಿಸಿದರು. ಪ್ರಸ್ತಾವಿಕವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರು ಮರುನಾಮಕರಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅಧ್ಯಯನ ಕೇಂದ್ರ ಘೋಷಿಸಿದ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಬೀದಿಬದಿ ವ್ಯಾಪಾರಸ್ಥರಿಗಾಗಿ ಶಾಸಕ ಆರಗ ಜ್ಞಾನೇಂದ್ರ 1 ಕೋಟಿ ಅನುದಾನ ಕಾಯ್ದಿರಿಸಿದ್ದು ಅವರನ್ನು ಅಭಿನಂದಿಸಿದರು.
ಬಜೆಟ್ ಮುಖ್ಯ ವಿಷಯದಲ್ಲಿ ಹಿಂದಿನ ಕಾಂಗ್ರೆಸ್ ಸಹದ್ಯೋಗಿಗಳು ಮಂಡಿಸಿದ ಬಜೆಟ್ ವಾಗ್ದಾನವನ್ನು ಮುಂದುವರೆಸುವ ಜೊತೆಗೆ ಹಲವು ಕಾರ್ಯಕ್ರಮಗಳನ್ನು ನೀಡುವುದಾಗಿ ಘೋಷಿಸಿದರು.
ರಥಬೀದಿಯಲ್ಲಿ 1 ಕೋಟಿ ವೆಚ್ಚದ ವಾಣಿಜ್ಯ ಕಟ್ಟಡ, ಹಿಂದು ರುದ್ರಭೂಮಿಯಲ್ಲಿ ಸ್ನಾನಗೃಹ ನಿರ್ಮಾಣ, 1.5 ಕೋಟಿ ವೆಚ್ಚದಲ್ಲಿ ಸೀಬಿನಕೆರೆ ಸುತ್ತ ವಾಕಿಂಗ್ ಟ್ರಾಕ್ ನಿರ್ಮಾಣ, 40 ಲಕ್ಷ ವೆಚ್ಚದಲ್ಲಿ ಈಜುಕೊಳ, ಮಕ್ಕಳನ್ನು ಗಮನಹರಿಸಿ ಉದ್ಯಾನವನದಲ್ಲಿ ಆಟಿಕೆ ಜೋಡಣೆ, ಬಡಕುಟುಂಬದ ಮಕ್ಕಳಿಗೆ ವಿದ್ಯಾರ್ಥಿವೇತನ ಹೆಚ್ಚಳ, 50 ಲಕ್ಷ ವೆಚ್ಚದಲ್ಲಿ ವಿಕಲ ಚೇತನರಿಗಾಗಿ ವಸತಿಗೃಹ ನಿರ್ಮಾಣ ಆದ್ಯತೆಯ ಕಾಮಗಾರಿಗಳೆಂದು ತಿಳಿಸಿದರು. ಜೊತೆಗೆ ಪಟ್ಟಣದಲ್ಲಿ ಆಶ್ರಯ ನಿವೇಶನ ಹಂಚುವ ಉದ್ದೇಶದಿಂದ 3.5 ಕೋಟಿ ವೆಚ್ಚದಲ್ಲಿ ನಿವೇಶನಕ್ಕಾಗಿ ಜಾಗ ಖರೀದಿಗೆ ಮುಂದಾಗಿದ್ದೇನೆ. ರಾಮಮಂಟಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ 10 ಲಕ್ಷ ಇರಿಸಿದ್ದೇನೆ ಎಂದು ನೆಮ್ಮದಿಯಾಗಿ ಕುಳಿತರು .
ಆದರೆ ಅವರ ನೆಮ್ಮದಿ ಹೆಚ್ಚು ಕಾಲ ಉಳಿಯಲಿಲ್ಲ ಬಜೆಟ್ ಚರ್ಚೆಯ ಸಂದರ್ಭದಲ್ಲಿ ಅನುಭವಿ ಸದಸ್ಯ ಸಂದೇಶ ಜವಳಿ ಕರಾರುವಕ್ಕಾದ ಪ್ರಶ್ನೆಗಳಿಗೆ ಅಧ್ಯಕ್ಷ ರತ್ನಾಕರ್ ಶೆಟ್ಟಿ ಸಮಂಜಸ ಉತ್ತರ ನೀಡಲು ಪರದಾಟ ನಡೆಸಿದರು. ಇಂತಹ ಸಂದರ್ಭದಲ್ಲಿ ಸಾಧಾರಣವಾಗಿ ನೆರವಿಗೆ ನಿಲ್ಲುವ ರಾಘವೇಂದ್ರ ಶೆಟ್ಟಿ ಕೂಡ ಪಕ್ಕಾ ಹೋಮ್ ವರ್ಕ್ ಮಾಡಿಕೊಂಡು ಬಂದಿದ್ದ ಜವಳಿ ಅಬ್ಬರ ತಡೆಯಲಾಗಲಿಲ್ಲ.
ಜೊತೆಗೆ ಕಾಂಗ್ರೆಸ್ ಸದಸ್ಯ ಬಿ ಗಣಪತಿ ಕೂಡ ಎಸ್ಸಿ ಎಸ್ಟಿ ಸಮುದಾಯಗಳಿಗೆ ಸೌಲಭ್ಯ ಕಲ್ಪಿಸಲು ಸರಿಯಾಗಿ ಯೋಜನೆ ರೂಪಿಸಿಲ್ಲ ಎಂದಾಗ ಆಡಳಿತ ಪಕ್ಷದವರ ಮುಖ ಕಳೆಗುಂದಿತು. ಗಣಪತಿಯವರ ಅನಿರೀಕ್ಷಿತ ಬೆಂಬಲ ಜವಳಿ ಕಡೆ ಸರಿದಿದ್ದು ನೋಡಿ ಸಮಸ್ತ ಕಾಂಗ್ರೆಸ್ ಪಾಳಯ ರತ್ನಾಕರ್ ಶೆಟ್ಟಿ ಒಬ್ಬರನ್ನೇ ಕಾಳಗಕ್ಕೆ ಬಿಟ್ಟು ಸುಮ್ಮನಾಯಿತು.
ಸಂದೇಶ ಜವಳಿ...ಎಸ್ಸಿಎಸ್ಪಿ – ಟಿಎಸ್ಪಿ ಕಾನೂನಿನಡಿ 24.1%, ಹಿಂದುಳಿದ ವರ್ಗಗಳಿಗೆ 7.52%, ವಿಕಲಚೇತನರಿಗೆ ಶೇ.5 ರಷ್ಟು ಅನುದಾನ ಮೀಸಲಿಡಬೇಕು. ಆದರೆ ಎಲ್ಲಿಯೂ ಬಜೆಟ್ ಅನುದಾನವನ್ನು ಕಾನೂನಿನಂತೆ ತಯಾರಿ ಮಾಡಿಲ್ಲ. ಪೂರ್ಣ ಪ್ರಮಾಣದಲ್ಲಿ ಈ ಸಮುದಾಯವನ್ನು ಕಡೆಗಣಿಸಲಾಗಿದೆ. ಸಮಾಜಕ್ಕೆ ಸಾಮಾಜಿಕ ಪಾಠ ಹೇಳುವ ನೀವೇ ಹೀಗೆ ಶೋಷಿತ ಸಮುದಾಯಗಳನ್ನು ಕಡೆಗಣಿಸಿದ್ದೀರಿ. ನೀವು ಹೇಳಿದಂತೆ ಬಜೆಟ್ ವಾಸ್ತವಕ್ಕೆ ದೂರ ಇದೆ. ಬಜೆಟ್ ಸಂಪೂರ್ಣ ಅನುಷ್ಠಾನ ಮಾಡಲು ಆಗುವುದಿಲ್ಲ. ಪ್ರಚಾರಕ್ಕಾಗಿ ಮಾಡಿರುವ ಘೋಷಣೆಗಳಿಗೆ ಮಾತ್ರ ಅಯವ್ಯಯ ಪುಸ್ತಕ ಸೀಮಿತವಾಗಿ ಲೆಕ್ಕಾಚಾರ ತಲೆಕೆಳಗಾಗಿದೆ. ಎಂದಬ್ಬರಿಸಿದರೆ
ಕಾಂಗ್ರೆಸ್ ಸದಸ್ಯ ಬಿ.ಗಣಪತಿ ಅವರು ಜವಳಿ ಮಾತಿಗೆ ಧ್ವನಿಗೂಡಿಸಿ ನಾನು ಹಲವು ಸಭೆಗಳಲ್ಲಿ ನನ್ನ ವಾರ್ಡ್ ವ್ಯಾಪ್ತಿಯ ಎಸ್ಸಿ ಎಸ್ಟಿ ಸಮುದಾಯದ ಮನೆಗಳು ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಹಲವು ಬಾರಿ ಬೇಡಿಕೆ ಇಟ್ಟಿದ್ದೇನೆ. ಆಗೆಲ್ಲ ಅನುದಾನ ಇಲ್ಲ ಎಂಬ ಕುಂಟುನೆಪ ಹೇಳುತ್ತಿದ್ದಿರಿ. ಹಾಗಾದರೆ ಕಳೆದ ವರ್ಷದ ಅನುದಾನದಲ್ಲಿ ಯಾವ ಘನಕಾರ್ಯಗಳನ್ನು ಮಾಡಿದ್ದೀರಿ ಎಂದು ಹೇಳಿ. ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ವಿರೋಧ ವ್ಯಕ್ತಪಡಿಸಿ ದಂಡಿನಲ್ಲಿ ಸೋದರ ಮಾವನಾದರು..!
ಇದನ್ನು ಕೇಳುತ್ತಿದ್ದಂತೆಯೆ ಕಾಂಗ್ರೆಸ್ ಪಾಳಯ ಬೆಚ್ಚಿ ಬಿದ್ದಿತು.
ವಿರೋಧ ಪಕ್ಷದ ಮುಖಂಡರಿಗೆ ಯಾವ ಉತ್ತರಗಳನ್ನು ನೀಡಬೇಕೆಂಬ ದಿಕ್ಕು ತೋಚದೆ ಕಂಗಾಲಾಗಿದ್ದಾಗ ಬಿ.ಆರ್.ರಾಘವೇಂದ್ರ ಶೆಟ್ಟಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಲ್ಯಾಪ್ ಟಾಪ್ ವಿತರಿಸಿದ್ದೇವೆ. ಹಕ್ಕುಪತ್ರ ವಿತರಿಸಲು ಕಾನೂನು ತೊಡಕುಗಳಿವೆ. ಅನುದಾನಗಳ ಬಗ್ಗೆ ಮುಖ್ಯಾಧಿಕಾರಿಗಳು ಮಾಹಿತಿ ನೀಡಿ ಗೊಂದಲ ನಿವಾರಿಸಿ ಎಂದು ಕೈ ತೊಳೆದು ಕೊಂಡರು ಮುಖ್ಯಧಿಕಾರಿ ಆಡಳಿತ ಪಕ್ಷ ಯಾವುದು ವಿರೋಧ ಪಕ್ಷ ಯಾವುದು ಎಂದು ಕ್ಷಣ ಕಾಲ ಕಂಗಲಾಗಿ ಮೌನಕ್ಕೆ ಶರಣಾದರು..
ಬಿಜೆಪಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ, ನದಿಯಲ್ಲಿ ಈಜಲು ತೆರಳಿ ವ್ಯಕ್ತಿಗಳು ಮೃತಪಟ್ಟಾಗ ಅವರನ್ನು ಹುಡುಕಲು ಮುಳುಗುತಜ್ಞರಿಗೆ ಆಕ್ಸಿಜನ್ ಕಿಟ್ ಅವಶ್ಯಕತೆ ಇದೆ. ಅದನ್ನು ಮಂಜೂರು ಮಾಡುವ ಕುರಿತಂತೆ ಅವಕಾಶ ಕಲ್ಪಿಸಬೇಕು ಎಂದರು.
ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಸುಲಭ ಶೌಚಾಲಯ ಗುತ್ತಿಗೆದಾರರು ವಾರ್ಷಿಕವಾಗಿ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ. ಅವರಿಗೆ ಕೇವಲ 5 ಲಕ್ಷ ವೆಚ್ಚದ ಗುತ್ತಿಗೆ ನೀಡುವುದು ಬೇಡ. ಹೆಚ್ಚಿನ ಆದಾಯ ನಿರೀಕ್ಷೆ ಮಾಡಬೇಕು ಎಂದು ಹೇಳಿದರು. ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ ಮತ್ತಿತರರು ಇದ್ದರು.
ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಈ ಸಭೆ ಮತ್ತೆ ನಿರೂಪಿಸುವುದರೊಂದಿಗೆ ಸಭೆ ಮುಗಿಯಿತು...