ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ರಾಜೇಶ್ ಹಿರಿಮನೆಗೆ ಜಾಮೀನು ಮಂಜೂರು
ಲೋಕಸಭೆಯ ವಿರೋಧ
ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ
ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ
ಆಪ್ತ ಸಹಾಯಕ ರಾಜೇಶ್ ಹಿರಿಮನೆಗೆ ಗುರುವಾರ ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯ ಜಾಮೀನು ಮಂಜೂರು
ಮಾಡಿದೆ.
ರಾಜೇಶ್ ಹಿರಿಮನೆ,
ರಾಹುಲ್ ಗಾಂಧಿ ಮುಖದ ಅರ್ಧ ಭಾಗ ಹಾಗೂ ಪಾಕಿಸ್ತಾನ ಸೇನೆಯ ಸಮವಸ್ತ್ರ ಧರಿಸಿದ ಅಧಿಕಾರಿ 'ಅಸಿಮ್'
(ASIM) ಎಂಬುವರ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಚಿತ್ರಕ್ಕೆ
"ONE AGENDA" ಎಂಬ ಟ್ಯಾಗ್ ಲೈನ್ ನೀಡಲಾಗಿತ್ತು.
ಮೇ 2025ರ 20 ರಂದು
ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ಪೊಲೀಸರು ಸ್ವಯಂ ಪ್ರೇರಿತ
ದೂರು ದಾಖಲಿಸಿಕೊಂಡಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು,
ಆರೋಪಿ ರಾಜೇಶ್ ಹಿರಿಮನೆ ಅವರನ್ನು 2026ರ ಫೆಬ್ರವರಿ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಪ್ರಕಟಿಸಿದೆ.
ರಾಜೇಶ್ ಹಿರಿಮನೆ
ಪ್ರಕರಣ ಫೆಬ್ರವರಿ 26 ರಂದು ವಿಚಾರಣೆಗೆ ಒಳಪಡಲಿದೆ.
