ಸಂತೋಷ್ ಜೀ ಮಾತಿಗೆ ಆರಗ ಜ್ಞಾನೇಂದ್ರ ಕಂಗಾಲ್ ಆಗಿದ್ದೇಕೆ ?
ಈಶ್ವರಪ್ಪ ಭವಿಷ್ಯವಾಣಿ ನಿಜವಾಯ್ತೆ…?
ಬಿಜೆಪಿ ಅಂಬೆಗಾಲಿಡುತ್ತಿದ್ದ 70ರ ದಶಕದ ಅಂತ್ಯದ ಕಾಲದ ಸಂಘ ಪರಿವಾರದ ನೀಲಿ ಕಣ್ಣಿನ ಹುಡುಗ, ಕಳೆದ 50 ವರ್ಷಗಳಿಂದ ಬಿಜೆಪಿಯ ಏಕಮೇವಾದ್ವಿತೀಯ ಅಭ್ಯರ್ಥಿಯಾಗಿ 10 ಬಾರಿ ತೀರ್ಥಹಳ್ಳಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 5 ಬಾರಿ ಸೋತು 5 ಬಾರಿ ಗೆದ್ದಿರುವ ಶಾಸಕ ಆರಗ ಜ್ಞಾನೇಂದ್ರ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯವೇ? ಹೀಗೊಂದು ಪ್ರಶ್ನೆ ಈಗ ಬಿಜೆಪಿ ಪಕ್ಷದ ಆಂತರಿಕ ವಲಯದಲ್ಲಿ ಹರಿದಾಡುತ್ತಿದೆ.
ಬಿಜೆಪಿಯ ಸೂಪರ್ ಪವರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಪ್ರಕಾರ ಈ ಬಾರಿ ಬಿಜೆಪಿ ಯಾವ ಬೆಲೆ ತೆತ್ತಾದರೂ ದೊಡ್ಡದೊಂದು ಪ್ರಯೋಗಕ್ಕೆ ಕೈಹಾಕಲಿದೆ. ಆ ಪ್ರಕಾರ ರಾಜ್ಯದಲ್ಲಿ ಸುಮಾರು 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಿರಿಯ ಅಭ್ಯರ್ಥಿಗಳಿಗೆ ವಿಶ್ರಾಂತಿ ನೀಡುವ ಇರಾದೆಯನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಆರ್ಎಸ್ಎಸ್, ಬಿಜೆಪಿಯ ಕಾರ್ಯಕರ್ತ ಯುವಕರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಖಚಿತ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರಯೋಗಗಳಿಗೆ ಬಿಜೆಪಿ ಪಕ್ಷ ಎಂದಿಗೂ ಹೆದರುವುದಿಲ್ಲ. ತೀರ್ಥಹಳ್ಳಿಯಲ್ಲೂ ನೂತನ ಪ್ರಯೋಗದ ಸಾಧ್ಯತೆ ಇದೆ. ಹೀಗೆಂದು ತೀರ್ಥಹಳ್ಳಿಯ ವಿದ್ಯಾಧಿರಾಜ ಸಭಾ ಭವನದಲ್ಲಿ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಸಂತೋಷ್ ಹೇಳಿದ ಮೇಲೆ ಪಕ್ಷದ ವಲಯದಲ್ಲಿ ಭರಪೂರ ಚರ್ಚೆ ಭುಗಿಲೆದ್ದಿದೆ.
ಹಾಗಾದಲ್ಲಿ 70 ಕ್ಷೇತ್ರಗಳಲ್ಲಿ ಹಾಲಿ ಗೆದ್ದವರು, ಸೋತವರು ಎಷ್ಟೇ ಪ್ರಭಾವಿಗಳಾಗಿದ್ದರೂ ಯುವಕರಿಗೆ ಅವಕಾಶ ಸಿಗುವುದು ದಿಟವಾಗಿದೆ. ಆ ನಿಟ್ಟಿನಲ್ಲಿ ಆಲೋಚಿಸಿದಾಗ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರರ ಸುವರ್ಣ ಯುಗ ಬಹುತೇಕ ಸಮಾಪ್ತಿಯಾಗಲಿದೆ. ಮೂಲಗಳ ಪ್ರಕಾರ 2023ರ ವಿಧಾನಸಭಾ ಚುನಾವಣೆಯಲ್ಲಿಯೇ ಪಕ್ಷದ ಹೈಕಮಾಂಡ್ ತೀರ್ಥಹಳ್ಳಿಯಲ್ಲಿ ಹೆದ್ದೂರು ನವೀನ್ಗೆ ಅವಕಾಶ ನೀಡಲು ಸಿದ್ಧವಿತ್ತು. ಆದರೆ ಆಗಷ್ಟೇ ಗೃಹಮಂತ್ರಿ ಪಟ್ಟದಿಂದ ಕೆಳಗಿಳಿದಿದ್ದ ಆರಗರ ಜ್ಞಾನೇಂದ್ರ ಮತ್ತೊಮ್ಮೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರಿಂದ ಅವರ ಹಿರಿತನ ಮತ್ತು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಗಮನಕ್ಕೆ ತೆಗೆದುಕೊಂಡು ಹೆದ್ದೂರು ನವೀನ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸದೆ ಹಿಂದೆ ಸರಿದರು ಎನ್ನಲಾಗಿದೆ. ಹಾಗಾಗಿ ಆರಗರ ಅವಿರೋಧ ಆಯ್ಕೆ ತಕರಾರಿಲ್ಲದೇ ಆಯ್ತು ಎನ್ನುತ್ತವೆ ಪಕ್ಷದ ಮೂಲಗಳು.
ಆದರೆ 2028ರ ಚುನಾವಣೆಯಲ್ಲಿ ಹೆದ್ದೂರು ನವೀನ್ ಅವರಿಗೆ ಅಭ್ಯರ್ಥಿಯಾಗುವಂತೆ ಸಿದ್ಧರಾಗಲು ಪಕ್ಷದ ಒಳಗೆ ಯುವಪಡೆಯ ಒತ್ತಡ ಹೆಚ್ಚಾಗುತ್ತಿದೆ. ಅಲ್ಲದೆ ನಿಷ್ಟಾವಂತ ಸಂಘ ಪರಿವಾರದವರು ಕೂಡ ಆರಗರ ಅಮೋಘ ಸೇವೆ ಮತ್ತು ಸಾಧನೆಯನ್ನು ಗೌರವಯುತವಾಗಿ ಸ್ಮರಿಸಿಕೊಂಡು ಅವರಿಗೆ ಚುನಾವಣಾ ರಾಜಕಾರಣದಿಂದ ವಿದಾಯ ಕೊಡಿಸಿ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಯುವಶಕ್ತಿಯೊಂದನ್ನು ಮುನ್ನೆಲೆಗೆ ತರಲು ಇದು ಅತ್ಯಂತ ಸೂಕ್ತ ಕಾಲ. ಕಾಂಗ್ರೆಸ್ನಲ್ಲಿ ಈಗಲೂ ಕೂಡ ಅಭ್ಯರ್ಥಿ ಬಗ್ಗೆ ಗೊಂದಲಗಳಿವೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್ ಆದ್ಯಕ್ಷ ಆರ್.ಎಂ.ಮಂಜುನಾಥ ಗೌಡ ನಡುವೆ ಟಿಕೆಟ್ ಪೈಪೋಟಿ ಇದೆ. ಆ ಕಾರಣ ಯಾರ ಬಣದಲ್ಲಿ ಗುರುತಿಸಿಕೊಂಡರೆ ಏನು ಯಡವಟ್ಟು ಆಗುತ್ತದೋ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಲೂ ಕೂಡ ಪ್ರಬಲವಾಗಿ ಸಂಘಟಿತರಾಗದೆ ಕೈಚೆಲ್ಲಿ ಕುಳಿತಿದ್ದಾರೆ. ಈ ಸಂದರ್ಭ ಉಪಯೋಗಿಸಿಕೊಂಡು ಬಿಜೆಪಿ ಪಕ್ಷದಲ್ಲಿ “ಟ್ರೈಯಲ್ ಅಂಡ್ ಎರರ್ ಮೆಥೆಡ್” ಪದ್ಧತಿಯಲ್ಲಿ ಹೆದ್ದೂರು ನವೀನ್ ಹೆಸರನ್ನು ಈಗಲೇ ನಿಧಾನಕ್ಕೆ ಚಾಲ್ತಿಗೆ ಬಿಡುವುದು ಉತ್ತಮ ಎಂಬ ಗಂಭೀರ ಚರ್ಚೆ ನಡೆಯತೊಡಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಇದಕ್ಕೆ ಪೂರಕವಾಗಿ ಎಷ್ಟೇ ಹಿರಿಯ, ಕಿರಿಯರಿರಲಿ ಪಕ್ಷದ ಸಂಘಟನೆ ಮತ್ತು ಸಂಘ ಪರಿವಾರದ ಸೂಚನೆಗೆ ತಕ್ಕ ಹಾಗೆ ಕೆಲಸ ಮಾಡದೆ ಇರುವವರಿಂದ ಪಕ್ಷ ಸೋತರು ಪರವಾಗಿಲ್ಲ. ನಮ್ಮ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂಬ ಸ್ಪಷ್ಟ ನುಡಿ ಸಂತೋಷ್ ಅವರಿಂದ ಹೊರ ಬಂದಿರುವುದು ಕ್ಷೇತ್ರದ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ. ಸಮಾಜವಾದಿ ಮತ್ತು ಕಾಂಗ್ರೆಸ್ ನೆಲದಲ್ಲಿ ಇಡೀ ರಾಜ್ಯವೇ ಚಕಿತಗೊಳ್ಳುವಂತೆ ಬಿಜೆಪಿಯನ್ನು ಅರಳಿಸಿದ್ದಲ್ಲದೇ ದಾಖಲೆಯ 5 ಬಾರಿ ಶಾಸಕರಾಗಿ, ಗೃಹಮಂತ್ರಿಯೂ ಆದ ಜ್ಞಾನೇಂದ್ರ ಅವರ ಯಶಸ್ವಿ ಐದು ದಶಕಗಳ ಚುನಾವಣಾ ರಾಜಕೀಯ ಮುಕ್ತಾಯಗೊಳ್ಳುತ್ತದೆ.
ಸತತ 10 ಬಾರಿ ಟಿಕೇಟ್ ಪಡೆದ ಜ್ಞಾನೇಂದ್ರರನ್ನು ಬೆಂಬಲಿಸಿದ ಪಕ್ಷದ ಕಾರ್ಯಕರ್ತರು ಈಗ ಹೊಸಮುಖಗಳಿಗೆ ಅವಕಾಶ ಕೊಡಬೇಕು ಎಂಬ ಅಭಿಪ್ರಾಯ ಮಂಡಿಸುತ್ತಿದ್ದಾರೆ. ಸಿದ್ಧಾಂತಕ್ಕೆ ಎಷ್ಟು ಶತಮಾನವಾದರೂ ಮಣ್ಣು ಹೊರುತ್ತೇವೆ. ವ್ಯಕ್ತಿಗಳಿಗೆ ಅಲ್ಲ ಎಂಬ ಅಭಿಪ್ರಾಯಗಳು ಕೂಗು ನಿಧಾನಕ್ಕೆ ದೊಡ್ಡದಾಗುತ್ತಿದೆ. ಅವರಿಗೆ ದೊರೆತ ಅವಕಾಶ ಇತರರಿಗೆ ಲಭ್ಯವಾಗಿಲ್ಲ. ಅಂಥಹ ಅವಕಾಶವನ್ನು ಪಕ್ಷ ಹಾಗೂ ಕಾರ್ಯಕರ್ತರು ನೀಡಿದ್ದಾರೆ. ಹಾಗಾಗಿ ವಿದಾಯಕ್ಕೆ ಇದು ಸೂಕ್ತ ಕಾಲ ಎಂಬುದನ್ನು ಬಹುತೇಕ ಯುವಕರು ಪ್ರತಿಪಾದಿಸುತ್ತಿದ್ದಾರೆ.
ಇಷ್ಟೆಲ್ಲ ಆಗುವಾಗ ನಿರಂತವಾಗಿ ಐದು ದಶಕಗಳ ಯಶಸ್ವಿ ರಾಜಕಾರಣದ ಮೂಲಕ ಆಳವಾಗಿ ಬೇರು ಬಿಟ್ಟಿರುವ ಆರಗ ಅಥವಾ ಅವರ ಆಪ್ತ ವಲಯ ಬೆಳ್ಳಿ ತಟ್ಟೆಯಲ್ಲಿ ಇಟ್ಟು ಹೆದ್ದೂರು ನವೀನ್ ಸ್ಪರ್ಧೆಗೆ ಅವಕಾಶವನ್ನು ಸಲೀಸಾಗಿ ಬಿಟ್ಟುಕೊಡುತ್ತದೆ ಎಂದು ರಾಜಕಾರಣದ ಪ್ರಾಥಮಿಕ ಪಾಠವನ್ನು ಬಲ್ಲ ಯಾರು ಒಪ್ಪುವುದಿಲ್ಲ. ಅದು ಸಾಧ್ಯವೂ ಇಲ್ಲ. ಹಾಗಾಗಿ ನವೀನ್ ಎದುರಿಗೆ ಚದುರಂಗದ ಚೆಕ್ ಮೇಟ್ ಮಾದರಿಯಲ್ಲಿ ಕುಕ್ಕೆ ಪ್ರಶಾಂತ್ ಮತ್ತು ಪ್ರತಿಷ್ಠಿತ ಕುಟುಂಬದ ನಂಬಳ ಮುರುಳಿ ಹೆಸರನ್ನು ಎಂದೋ ಚಾಲ್ತಿಗೆ ಬಿಡಲಾಗಿದೆ.
ಕೊನೆಯ ಸಿಪ್…
ವಯಸ್ಸಿನ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲಾಗದೆ ಕಡೆಗೆ ತನ್ನ ಮಗನಿಗೂ ಟಿಕೆಟ್ ಕೊಡಿಸಲಾಗದೆ ಪರಿತಪಿಸುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರಿಗೆ ಆರಗ ಜ್ಞಾನೇಂದ್ರ ಪಕ್ಷದ ತೀರ್ಮಾನವನ್ನು ಒಪ್ಪಬೇಕು ಎಂಬ ಕಿವಿಮಾತು ಹೇಳಿದಾಗ ಸಿಟ್ಟಾಗಿದ್ದ ಈಶ್ವರಪ್ಪ “ಜ್ಞಾನೇಂದ್ರ ನನ್ನ ಮನೆಯಲ್ಲಿ ಬೆಳೆದ ಹುಡುಗ. ಈಗ ನನಗೆ ಬುದ್ದಿ ಹೇಳುತ್ತಿದ್ದಾನೆ. ರಾಜಕಾರಣಿಗಳು ಎಂದೂ ನಿವೃತ್ತಿ ಆಗುವುದಿಲ್ಲ. ಇವತ್ತು ನನಗೆ ಹೇಳಿದ್ದು ನಾಳೆ ಅವನಿಗೆ ತಿರುಗಿ ಬರಲಿದೆ. ಆಗ ಗೊತ್ತಾಗುತ್ತದೆ” ಎಂದು ಬುಸುಗುಟ್ಟಿದ್ದರು… ಹಾಗಾದರೆ ಈಶ್ವರಪ್ಪರ ಭವಿಷ್ಯವಾಣಿ ನಿಜವಾಗುತ್ತದೆಯೇ ?